ಜಾತಿ ಗಣತಿ–ಪ್ರಾತಿನಿಧಿಕ ಚಿತ್ರ
ಗದಗ: ‘ರಾಜ್ಯದಾದ್ಯಂತ ನಡೆಯುತ್ತಿರುವ ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಯುಳ್ಳ ಮಠಾಧೀಶರು ರಾಜ್ಯದಲ್ಲಿ ಬಲಾಢ್ಯರಾಗಿರುವ ವೀರಶೈವ, ಲಿಂಗಾಯತರನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದು ಶಿವರಾಮ ಕೃಷ್ಣ ಸೇವಾ ಸಂಸ್ಥೆಯ ಅಧ್ಯಕ್ಷ ರಾಜೂ ಖಾನಪ್ಪನವರ ಆರೋಪಿಸಿದ್ದಾರೆ.
ರಾಜ್ಯದಲ್ಲಿ ವೀರಶೈವರು, ಲಿಂಗಾಯತರ ಸಂಖ್ಯೆ ಹೆಚ್ಚಾಗಿದ್ದರಿಂದಲೇ ರಾಜ್ಯವನ್ನು ಬಹುಕಾಲ ಲಿಂಗಾಯತ ರಾಜಕೀಯ ನಾಯಕರೇ ಆಳಿದ್ದಾರೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಇಂತಹ ನಾಟಕವನ್ನಾಡುತ್ತಿದೆ ಎಂದು ವ್ಯಂಗ್ಯವಾಡಿದರು.
‘ಕೆಲವು ಮಠಾಧೀಶರು ಜನಗಣತಿಯಲ್ಲಿ ವೀರಶೈವರು, ಲಿಂಗಾಯತರು ಧರ್ಮದ ಕಾಲಂನಲ್ಲಿ ಅಸ್ತಿತ್ವದಲ್ಲಿಯೇ ಇರದ ಲಿಂಗಾಯತ ಧರ್ಮ ಎಂದು ಬರೆಸುವಂತೆ ಸೂಚಿಸುವ ಮೂಲಕ ಸಮಾಜದವರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ. ವಾಸ್ತವದಲ್ಲಿ ಸಮೀಕ್ಷೆಯ ನಮೂನೆಯಲ್ಲಿ ಲಿಂಗಾಯತ ಧರ್ಮದ ಕಾಲಂ ಇಲ್ಲವೇ ಇಲ್ಲ. ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವುದರಿಂದ ವೀರಶೈವ, ಲಿಂಗಾಯತರನ್ನು ಇತರೆ ವರ್ಗಕ್ಕೆ ಸೇರಿಸಲಾಗುತ್ತದೆ. ಪರಿಣಾಮವಾಗಿ ರಾಜ್ಯದಲ್ಲಿ ವೀರಶೈವ, ಲಿಂಗಾಯತರ ಸಂಖ್ಯೆ ಸಮೀಕ್ಷೆಯಲ್ಲಿ ಕಡಿಮೆಯಾಗುತ್ತದೆ. ಇದರಿಂದ ಕಾನೂನುಬದ್ಧವಾಗಿ ಸಂವಿಧಾನಬದ್ಧವಾಗಿ ದೊರೆಯಬೇಕಾದ ವಿವಿಧ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
‘ವೀರಶೈವ, ಲಿಂಗಾಯತರು ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಯಿಸುವ ಮೂಲಕ ರಾಜ್ಯದಲ್ಲಿ ಬಲಾಢ್ಯರಾಗಿರುವ ವೀರಶೈವರು, ಲಿಂಗಾಯತರ ಮಗ್ಗಲು ಮುರಿಯಲು ಪ್ರಯತ್ನಿಸುತ್ತಿದ್ದಾರೆ. ಈ ಮಠಾಧೀಶರಿಗೆ ಪರೋಕ್ಷವಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ವಿವಿಧ ರೀತಿಯ ಪ್ರಲೋಭನೆ ನೀಡಿದೆ’ ಎಂದು ಆರೋಪಿಸಿದ್ದಾರೆ.
‘ಈ ಹಿಂದೆ ಇದೇ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ವೀರಶೈವ, ಲಿಂಗಾಯತರನ್ನು ಒಡೆದು ಆಳಲು ಪ್ರಯತ್ನಿಸಿ ವಿಫಲವಾಗಿತ್ತು. ಆ ಸೇಡನ್ನು ತೀರಿಸಿಕೊಳ್ಳಲು ಮತ್ತೆ ಆಡಳಿತಾರೂಢ ಸರ್ಕಾರ ಅಸ್ತಿತ್ವದಲ್ಲಿಯೇ ಇಲ್ಲದ ಲಿಂಗಾಯತ ಧರ್ಮವನ್ನು ಬರೆಯಿಸುವಂತೆ ಮಠಾಧೀಶರ ಮೂಲಕ ಸೂಚಿಸಿ ಸಮಾಜದ ಒಗ್ಗಟ್ಟು ನಾಶ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಆಡಳಿತಾರೂಢ ಸರ್ಕಾರದ ಯಾವುದೋ ಪ್ರಲೋಭನೆ ಒಳಗಾಗಿರುವ ಕೆಲವು ಕೆಲಸವಿಲ್ಲದ ಮಠಾಧೀಶರು, ಪ್ರಗತಿಪರರ ಹೆಸರಿನಲ್ಲಿರುವ ಕೆಲ ಸಂಘಟನೆಗಳು ಹಿಂದೂ ಧರ್ಮದ ನಾಶಕ್ಕೆ ಸಂಚು ರೂಪಿಸುತ್ತಿವೆ. ಈ ಸಂಚಿಗೆ ನಾಡಿನ ವೀರಶೈವರು, ಲಿಂಗಾಯತರು ಯಾವುದೇ ಸಂದರ್ಭದಲ್ಲಿಯೂ ಬಲಿಯಾಗಿ ಸನಾತನ ಧರ್ಮ ಒಡೆಯಲು ಅವಕಾಶ ನೀಡಬಾರದು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.