ಗದಗ: ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ (ಪಿಒಪಿ) ತಯಾರಾಗುವ ಗಣೇಶ ಮೂರ್ತಿಗಳ ಮಾರಾಟ ಮತ್ತು ಬಳಕೆಗೆ ಈ ಬಾರಿ ಕಟ್ಟುನಿಟ್ಟಾಗಿ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶಿಸಿದೆ. ಆದರೆ, ಪರಿಸರಕ್ಕೆ ಹಾನಿಕಾರವಾಗಿರುವ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಲಕ್ಷ್ಮೇಶ್ವರ, ಶಿರಹಟ್ಟಿ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ರಾಜಾರೋಷವಾಗಿ ನಡೆದಿದೆ. ಇದು ಮಣ್ಣಿನಲ್ಲಿ ಗಣೇಶ ಮೂರ್ತಿ ತಯಾರಿಸುವ ಕಲಾವಿದರ ನಿದ್ದೆಗೆಡಿಸಿದೆ.
‘ಸರ್ಕಾರದ ಆದೇಶ ಉಲ್ಲಂಘಿಸಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹಗಳ ತಯಾರಿಕೆ ಮತ್ತು ಮಾರಾಟಕ್ಕೆ ಯತ್ನಿಸಿರುವವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು’ ಎಂದು ಗದಗ ಜಿಲ್ಲಾ ಗಣೇಶ ಮೂರ್ತಿ ತಯಾರಕರ ಸಂಘ ಆಗ್ರಹಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದೆ.
‘ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪೂಜಿಸುವುದೇ ಶ್ರೇಷ್ಠ ಎಂಬ ನಂಬಿಕೆ ಇದೆ. ಆದರೆ, ಕೆಲವರು ಕಡಿಮೆ ಸಮಯದಲ್ಲಿ ಹೆಚ್ಚಿನ ವಿಗ್ರಹಗಳನ್ನು ತಯಾರಿಸಬಹುದು ಎಂಬ ದುರಾಸೆಯಿಂದ ಪರಿಸರಕ್ಕೆ ಹಾನಿ ಉಂಟು ಮಾಡುವ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರು ಮಾಡಿ, ಮಾರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಭರಡಿ ಆಗ್ರಹಿಸಿದ್ದಾರೆ.
ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ಹಾಗೂ ಬಣ್ಣ ಲೇಪನ ಮಾಡುವುದು ಜಲಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ 1974 ಕಲಂ 33(ಎ) ಪ್ರಕಾರ ಕಾನೂನುಬಾಹಿರ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಷೇಧಿಸಿ ಆದೇಶ ಹೊರಡಿಸಿದೆ. ಹೀಗಿದ್ದರೂ ಪಿಒಪಿ ಗಣೇಶ ವಿಗ್ರಹಗಳ ಮಾರಾಟ ಕಳೆದ ವರ್ಷ ರಾಜ್ಯದಲ್ಲಿ ಎಗ್ಗಿಲ್ಲದೇ ನಡೆದಿತ್ತು. ಈ ವರ್ಷವೂ ಅದೇರೀತಿ ನಡೆದರೆ ಪರಿಸರಸ್ನೇಹಿ ಗಣೇಶ ವಿಗ್ರಹ ತಯಾರಕರಿಗೆ ಆರ್ಥಿಕವಾಗಿ ತುಂಬಾ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಳೆದ ವರ್ಷ ಹಾಗೂ ಈ ವರ್ಷ ತಂದು ಕೂಡಿಟ್ಟ ವಿಗ್ರಹಗಳನ್ನು ಪರಿಶೀಲಿಸಬೇಕು. ಪಿಒಪಿ ಮೂರ್ತಿಗಳಿದ್ದರೆ ವಶಪಡಿಸಿಕೊಂಡು, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಿಒಪಿ ವಿಗ್ರಹ ನಿಯಂತ್ರಣಕ್ಕಾಗಿ ರಾಜ್ಯದಾದ್ಯಂತ ಒಂದೇ ಹೆಲ್ಪ್‌ಲೈನ್ ನಂಬರ್ ಆರಂಭಿಸಬೇಕು. ಮಣ್ಣಿನ ಗಣೇಶ ವಿಗ್ರಹ ತಯಾರಿಸುವ ಕಲಾವಿದರಿಗೆ ಸರ್ಕಾರದಿಂದ ಗುರುತಿನ ಚೀಟಿ ನೀಡಿ, ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪಕ್ಕದ ಜಿಲ್ಲೆಗಳಲ್ಲಿ ಪಿಒಪಿ ಮೂರ್ತಿಗಳ ಮಾರಾಟ: ಆರೋಪ
ಗಜೇಂದ್ರಗಡ ತಾಲ್ಲೂಕಿನಲ್ಲಿ ಮೂರ್ತಿ ತಯಾರಕರು ಗಣೇಶೋತ್ಸವಕ್ಕೆ ಗಣೇಶನ ಮೂರ್ತಿಗಳ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಆದರೆ, ಕೆಲವೆಡೆಗಳಲ್ಲಿ ಪಿಒಪಿ ಗಣೇಶನ ಮೂರ್ತಿಗಳ ಮಾರಾಟಕ್ಕೆ ಕಟ್ಟುನಿಟ್ಟಿನ ಕಡಿವಾಣ ಹಾಕದಿರುವುದು ಮಣ್ಣಿನ ಮೂರ್ತಿ ತಯಾರಿಕರಲ್ಲಿ ಬೇಸರ ಮೂಡಿಸಿದೆ.
ಪಟ್ಟಣದಲ್ಲಿ 7 ಕುಟುಂಬಗಳು ಗಣೇಶನ ಮೂರ್ತಿಗಳನ್ನು ತಯಾರಿಸುತ್ತಿವೆ. ಈ ಬಾರಿ ಉತ್ತಮ ಮಳೆ ಸುರಿದಿದ್ದರಿಂದ ಕೆರೆಗಳೆಲ್ಲ ಭರ್ತಿಯಾಗಿವೆ. ಮೂರ್ತಿ ತಯಾರಿಕೆಗೆ ಸ್ಥಳೀಯ ಕೆರೆ ಮಣ್ಣು ಲಭ್ಯವಾಗಿಲ್ಲ. ಹೀಗಾಗಿ ದೂರದ ಬೆಳಗಾವಿ, ಕೊಲ್ಹಾಪುರದಿಂದ ಮಣ್ಣು ತರಿಸಿ ಮೂರ್ತಿ ತಯಾರಿಸುತ್ತಿದ್ದಾರೆ. ಮೂರ್ತಿ ತಯಾರಿಕರಿಗೆ ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯ ಹಾಗೂ ಸೌಲಭ್ಯಗಳು ಸಿಗುವುದಿಲ್ಲ ಎಂಬುದು ಮೂರ್ತಿ ತಯಾರಕರ ಅಳಲಾಗಿದೆ.
‘ಬೇರೆ ಜಿಲ್ಲೆಗಳಲ್ಲಿ ಪಿಒಪಿ ಗಣೇಶನ ಮೂರ್ತಿಗಳ ಮಾರಾಟ ನಡೆಯುತ್ತಿದೆ. ಗಜೇಂದ್ರಗಡ ತಾಲ್ಲೂಕು ಬಾದಾಮಿ, ಕುಷ್ಟಗಿ, ಯಲಬುರ್ಗಾ, ಹುನಗುಂದ ತಾಲ್ಲೂಕುಗಳ ಗಡಿ ಹಂಚಿಕೊಂಡಿರುವುದರಿಂದ ಜನರು ಆಕರ್ಷಕ, ಕಡಿಮೆ ಬೆಲೆಗೆ ಸಿಗುವ ಪಿಒಪಿ ಗಣೇಶನ ಮೂರ್ತಿಗಳನ್ನು ಖರೀದಿಸುತ್ತಾರೆ. ಇದು ತಾಲ್ಲೂಕಿನ ಮೂರ್ತಿ ತಯಾರಿಕರಿಗೆ ಮಾರಕವಾಗಿದೆ’ ಎಂಬುದು ಮೂರ್ತಿ ತಯಾರಕರು ಆರೋಪ ಮಾಡಿದ್ದಾರೆ.
ದಾಖಲೆಯಲ್ಲಷ್ಟೇ ಪಿಒಪಿ ನಿಷೇಧ
ನರಗುಂದ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಗಣೇಶೋತ್ಸವ ಸಂಭ್ರಮದಿಂದ ನಡೆಯುತ್ತದೆ. ಆದರೆ, ಗಣೇಶೋತ್ಸವ ಸಂದರ್ಭದಲ್ಲಿ ಪಾಲನೆಯಾಗಬೇಕಾದ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗದೇ ಇರುವುದಕ್ಕೆ ಗಣಪತಿ ಮೂರ್ತಿ ತಯಾರಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಪಿಒಪಿ ಗಣಪತಿಗಳ ಮಾರಾಟ ನಿಷಿದ್ಧ ಎಂದು ಪುರಸಭೆಯು ಕಟ್ಟುನಿಟ್ಟಾದ ಪ್ರಕಟಣೆ, ಸೂಚನೆ, ಧ್ವನಿವರ್ಧಕದ ಮೂಲಕ ಪ್ರಚಾರ ಮಾಡುತ್ತದೆ. ಆದರೆ, ಪ್ರತಿಷ್ಟಾಪನೆ ಸಂದರ್ಭದಲ್ಲಿ ಅದನ್ನು ವೀಕ್ಷಣೆ ಮಾಡದೇ ಮೌನಕ್ಕೆ ಶರಣಾಗಿ ಬಿಡುತ್ತದೆ.
ಗಣೇಶೋತ್ಸವ ಹಿಂದಿನ ದಿನದಂದೇ ಮಹಾನಗರಗಳಿಂದ ಬೃಹತ್ ಪಿಒಪಿ ಗಣಪತಿಗಳು ಸರಕುಗಳ ರೂಪದಲ್ಲಿ ಬಂದು ಪಟ್ಟಣದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡಿಬಿಡುವುದು ಸಾಮಾನ್ಯವಾಗಿದೆ. ಅವು ಕಡಿಮೆ ಬೆಲೆಗೆ ಸಿಗುವುದೂ ಇದಕ್ಕೆ ಕಾರಣವಾಗಿದೆ.
ಪರಿಸರಸ್ನೇಹಿ ಹಾಗೂ ಶುದ್ಧ ಜೇಡಿ, ಕೆಂಪು ಮಣ್ಣಿನಿಂದ ತಯಾರಿಸಿದ ಗಣಪತಿಗಳನ್ನು ಚಿಕ್ಕ ಗಾತ್ರದಿಂದ ಬೃಹತ್ ಪ್ರಮಾಣದಲ್ಲಿ ಸಿದ್ದಮಾಡಲಾಗುತ್ತದೆ. ಆದರೆ ಇವುಗಳ ಬೆಲೆ ಹೆಚ್ಚು. ಇದರ ಪರಿಣಾಮವೋ ಅಥವಾ ತಮಗೆ ಬೇಕಾದ ಗಣಪತಿ ದೊರೆಯುವುದಿಲ್ಲವೋ ಎಂಬಂತೆ ಜನರು ಪಿಒಪಿ ಗಣಪತಿಗೆ ಮಾರುಹೋಗುತ್ತಿದ್ದಾರೆ.
ಪಿಒಪಿ ಹಾವಳಿ ನಡುವೆಯೂ ಹೆಚ್ಚಿದ ಬೇಡಿಕೆ
ನರೇಗಲ್ ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯ ವಿವಿಧೆಡೆ ಪಿಒಪಿ ಮೂರ್ತಿಗಳ ಹಾವಳಿ ನಡುವೆಯೂ ಸಾಂಪ್ರದಾಯಿಕ ಶೈಲಿಯಲ್ಲಿ ಮಣ್ಣಿನಿಂದ ಮಾಡಿದ ಗಣಪತಿಗಳಿಗೆ ಬೇಡಿಕೆ ಹೆಚ್ಚಿದೆ.
ನರೇಗಲ್ ಪಟ್ಟಣದ ಕುಂಬಾರರ ಮನೆಯಲ್ಲಿ, ಸಮೀಪದ ಕೋಟುಮಚಗಿಯ ನಾಗಪ್ಪ ಬಡಿಗೇರ ಅವರ ಮನೆಯಲ್ಲಿ ಸುಂದರ ಗಣಪತಿಗಳು ಸಿದ್ಧಗೊಳ್ಳುತ್ತಿವೆ.
ಒಂದು ಅಡಿ ಎತ್ತರದ ಗಣಪನಿಂದ ಹಿಡಿದು ನಾಲ್ಕು ಅಡಿ ಎತ್ತರದ ಗಣಪನವರೆಗೂ ಇವರು ಗಣಪತಿಗಳನ್ನು ತಯಾರು ಮಾಡುತ್ತಾರೆ. ಎಲ್ಲ ಮೂರ್ತಿಗಳೂ ಜೀವಕಳೆ ಮತ್ತು ದೈವಕಳೆಗಳಿಂದ ಸುಂದರವಾಗಿ ಕಂಗೊಳಿಸುವುದರಿಂದ ಇವರ ಗಣಪತಿಗಳು ಪ್ರಸಿದ್ಧಿ ಪಡೆದಿವೆ.
ಗಣಪತಿ ಮೂರ್ತಿಗಳ ವಿನ್ಯಾಸ, ಕೆಲಸದ ಆಧಾರದ ಮೇಲೆ ದರ ನಿಗದಿಪಡಿಸಲಾಗಿದೆ. ಸಾಮಾನ್ಯವಾಗಿ ₹201ರಿಂದ ₹10,001ವರೆಗೂ ದರ ನಿಗದಿಯಾಗಿರುತ್ತದೆ. ದೊಡ್ಡ ಪ್ರಮಾಣದ ಮೂರ್ತಿಗಳ ಬೇಡಿಕೆ ಇದ್ದಲ್ಲಿ ಮುಂಚಿತವಾಗಿ ಹೇಳಿದರೆ ಮಾಡಿಕೊಡುತ್ತೇವೆ ಎನ್ನುತ್ತಾರೆ ಮೂರ್ತಿ ತಯಾರಕರು.
ಪೂರಕ ಮಾಹಿತಿ: ನಾಗರಾಜ ಹಣಗಿ, ಶ್ರೀಶೈಲ ಎಂ. ಕುಂಬಾರ, ಬಸವರಾಜ ಹಲಕುರ್ಕಿ, ಚಂದ್ರು ಎಂ. ರಾಥೋಡ್
ಕಲಾವಿದರು ಏನಂತಾರೆ?
ಪಿಒಪಿ ಗಣೇಶ ಬೇಡವೇ ಬೇಡ
ಪ್ರತಿ ವರ್ಷದಂತೆ ಈ ಬಾರಿಯೂ ಗದಗ ಜಿಲ್ಲೆಯ ಜನರು ಪರಿಸರಸ್ನೇಹಿ ಗಣೇಶ ವಿಗ್ರಹಗಳನ್ನು ಮಾತ್ರ ಖರೀದಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಪಿಒಪಿ ಗಣೇಶ ಮೂರ್ತಿಗಳನ್ನು ಯಾವುದೇ ಕಾರಣಕ್ಕೂ ಕೊಳ್ಳಬೇಡಿ.–ಮುತ್ತಣ್ಣ ಭರಡಿ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಗಣೇಶ ಮೂರ್ತಿ ತಯಾರಕರ ಸಂಘ
ತಾರತಮ್ಯ ನೀತಿಯಿಂದ ತೊಂದರೆ ನಮ್ಮಲ್ಲಿ ಈಗಾಗಲೇ 3 ಅಡಿ ಎತ್ತರದ 40 ಹಾಗೂ ಸಣ್ಣ ಗಾತ್ರದ 150-200 ಮೂರ್ತಿಗಳನ್ನು ತಯಾರಿಸಿದ್ದೇವೆ. ಪ್ರತಿ ವರ್ಷ ಈ ಹೊತ್ತಿಗೆ ಶೇ 80ರಷ್ಟು ಮೂರ್ತಿಗಳು ಮುಂಗಡ ಬುಕ್ ಆಗುತ್ತಿದ್ದವು. ಆದರೆ ಈ ಬಾರಿ ಶೇ 50ರಷ್ಟು ಮಾತ್ರ ಬುಕ್ ಆಗಿವೆ. ಸರ್ಕಾರ ರಾಜ್ಯದಾದ್ಯಂತ ಪಿಒಪಿ ಗಣೇಶ ಮೂರ್ತಿ ನಿಷೇಧಿಸಿದೆ. ಆದರೆ ಬೇರೆ ಜಿಲ್ಲೆ ತಾಲ್ಲೂಕುಗಳಲ್ಲಿ ಪಿಒಪಿ ಮೂರ್ತಿಗಳ ಮಾರಾಟ ನಡೆಯುತ್ತಿರುವುದು ಅಧಿಕಾರಿಗಳು ಸರ್ಕಾರದ ತಾರತಮ್ಯ ನೀತಿಗೆ ಸಾಕ್ಷಿಯಾಗಿದೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ.–ಸುರೇಶ ಚಿತ್ರಗಾರ ಗಜೇಂದ್ರಗಡದ ಮೂರ್ತಿ ತಯಾರಕ
ತಾರತಮ್ಯ ನೀತಿಯಿಂದ ತೊಂದರೆ ನಮ್ಮಲ್ಲಿ ಈಗಾಗಲೇ 3 ಅಡಿ ಎತ್ತರದ 40 ಹಾಗೂ ಸಣ್ಣ ಗಾತ್ರದ 150-200 ಮೂರ್ತಿಗಳನ್ನು ತಯಾರಿಸಿದ್ದೇವೆ. ಪ್ರತಿ ವರ್ಷ ಈ ಹೊತ್ತಿಗೆ ಶೇ 80ರಷ್ಟು ಮೂರ್ತಿಗಳು ಮುಂಗಡ ಬುಕ್ ಆಗುತ್ತಿದ್ದವು. ಆದರೆ ಈ ಬಾರಿ ಶೇ 50ರಷ್ಟು ಮಾತ್ರ ಬುಕ್ ಆಗಿವೆ. ಸರ್ಕಾರ ರಾಜ್ಯದಾದ್ಯಂತ ಪಿಒಪಿ ಗಣೇಶ ಮೂರ್ತಿ ನಿಷೇಧಿಸಿದೆ. ಆದರೆ ಬೇರೆ ಜಿಲ್ಲೆ ತಾಲ್ಲೂಕುಗಳಲ್ಲಿ ಪಿಒಪಿ ಮೂರ್ತಿಗಳ ಮಾರಾಟ ನಡೆಯುತ್ತಿರುವುದು ಅಧಿಕಾರಿಗಳು ಸರ್ಕಾರದ ತಾರತಮ್ಯ ನೀತಿಗೆ ಸಾಕ್ಷಿಯಾಗಿದೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ.–ಸುರೇಶ ಚಿತ್ರಗಾರ ಗಜೇಂದ್ರಗಡದ ಮೂರ್ತಿ ತಯಾರಕ
ತಯಾರಿಕಾ ವೆಚ್ಚ ಏರಿಕೆ ಪ್ರತಿ ವರ್ಷ ಮಣ್ಣಿನ ಬೆಲೆ ಮತ್ತು ಸಾರಿಗೆ ವೆಚ್ಚ ದುಬಾರಿಯಾಗುತ್ತಿದೆ. ತಯಾರಿಕಾ ವೆಚ್ಚವೂ ಏರುತ್ತಿದೆ. ಬಣ್ಣಗಳೂ ಸಹ ಈಗ ಮೊದಲಿಗಿಂತ ತುಟ್ಟಿಯಾಗಿವೆ. ಇದರಿಂದಾಗಿ ಕೆಲವೊಮ್ಮೆ ಮೂರ್ತಿ ತಯಾರು ಮಾಡುವುದು ಕಷ್ಟಕರ ಎನಿಸುತ್ತದೆ. ಆದರೆ ಮೂರು ದಶಕಗಳಿಂದ ನಮ್ಮನ್ನು ನಂಬಿರುವ ಗ್ರಾಹಕರಿಗೆ ತೊಂದರೆಯಾಗಬಾರದು ಎಂದು ಮುಂದುವರಿಸಿದ್ದೇವೆ.–ನಾಗಪ್ಪ ಬಡಿಗೇರ ಗಣಪತಿ ಮೂರ್ತಿಗಳ ತಯಾರಕ ಕೋಟುಮಚಗಿ
ಉತ್ಸಾಹಕ್ಕೆ ತಣ್ಣೀರು ನಮಗೆ ಗಣೇಶೋತ್ಸವ ಸಂಭ್ರಮ ತರುವ ಸನ್ನಿವೇಶ. ನಾವು ಶುದ್ಧ ಮಣ್ಣಿನಿಂದ ತಯಾರಿಸಿದ ಗಣಪತಿಗಳನ್ನು ತಯಾರಿಸಿ ನಿಗದಿತ ಮನೆಗಳಿಗೆ ಮಾರಾಟ ಮಾಡುತ್ತೇವೆ. ಆದರೆ ಬೃಹತ್ ಪ್ರಮಾಣದ ಸುಂದರ ಗಣಪತಿಗಳನ್ನು ತಯಾರಿಸಿ ಮಾರಾಟ ಮಾಡಬೇಕೆಂಬ ಆಸೆಗೆ ಪಿಒಪಿ ಗಣಪತಿಗಳ ಹಾವಳಿ ತಣ್ಣೀರು ಎರೆಚಿದೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ತುಂಬಾ ಬೇಸರ ತರಿಸಿದೆ.–ನಾಗರಾಜ ಚಿತ್ರಗಾರ ಗಣಪತಿ ತಯಾರಕರು ನರಗುಂದ
ಹೊಸ ಮಾರಾಟಗಾರರಿಗೆ ನಿರಾಶೆ
ಲಕ್ಷ್ಮೇಶ್ವರ ಪಟ್ಟಣದ ಬಸ್ತಿಬಣದಲ್ಲಿ ಬೃಹತ್ ಗಾತ್ರದ ಮೂರ್ತಿಗಳು ತಯಾರಿ ಹಂತದಲ್ಲಿವೆ. ಅದರೊಂದಿಗೆ ಬೇರೆ ಕಲಾವಿದರು ಮೂರ್ತಿಗಳಿಗೆ ಅಂತಿಮ ಕೆಲಸ ಮಾಡುತ್ತಿದ್ದಾರೆ. ಈ ವರ್ಷ ಲಕ್ಷ್ಮೇಶ್ವರದಲ್ಲಿ ಮೂರ್ತಿ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಿದೆ. ಆದರೆ ಈವರೆಗೆ ಮೂರ್ತಿ ಖರೀದಿಸುವವರ ಹತ್ತಿರವೇ ಹಳೆ ಖರೀದಿದಾರರು ಹೋಗುತ್ತಿದ್ದಾರೆ. ಹೀಗಾಗಿ ಹೊಸ ಮಾರಾಟಗಾರರು ನಿರಾಶೆಯಲ್ಲಿದ್ದಾರೆ. ಇನ್ನು ಪಿಒಪಿ ಮೂರ್ತಿಗಳಿಗೆ ನಿರ್ಬಂಧ ಇದ್ದರೂ ಪಟ್ಟಣದಲ್ಲಿ ಅಲ್ಲಲ್ಲಿ ಇಂಥ ಮೂರ್ತಿಗಳ ಮಾರಾಟ ನಡೆದ ಬಗ್ಗೆ ಮಾಹಿತಿ ಇದೆ. ಈ ಹಿನ್ನಲೆಯಲ್ಲಿ ಎರಡು ದಿನಗಳ ಹಿಂದೆ ಅಧಿಕಾರಿಗಳು ಪಿಒಪಿ ಮೂರ್ತಿಗಳನ್ನು ವಶ ಪಡಿಸಿಕೊಂಡಿದ್ದಾರೆ.
ಒಂದೇ ಸೂರಿನಡಿ ಪರಿಸರಸ್ನೇಹಿ ಗಣೇಶ ಮೂರ್ತಿ ಮಾರಾಟ
ಗದಗ ಜಿಲ್ಲಾ ಗಣೇಶ ಮೂರ್ತಿ ತಯಾರಕರ ಸಂಘದ ವತಿಯಿಂದ ಈ ಬಾರಿಯೂ ನಗರದ ಎಂಪಿಎಂಸಿ ಮಾರುಕಟ್ಟೆಯ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಸುಮಾರು 20 ಗಣೇಶ ಮೂರ್ತಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಎಪಿಎಂಸಿ ಆವರಣದಲ್ಲಿ ಸುಂದರ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಇರಲಿವೆ. ಆ.21ರಿಂದ 27ರ ವರೆಗೆ ಬೆಳಿಗ್ಗೆ 9ರಿಂದ ರಾತ್ರಿ 9ಗಂಟೆವರೆಗೆ ಮಳಿಗೆಗಳಲ್ಲಿ ಗಣೇಶ ಮೂರ್ತಿಗಳು ಲಭ್ಯ ಇರಲಿವೆ. ಸ್ಥಳೀಯ ಹಾಗೂ ನೆರೆಯ ಜಿಲ್ಲೆಗಳಿಂದ ಕಲಾವಿದರು ತಯಾರಿಸಿರುವ ಶುದ್ಧ ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹಗಳ ಮಾರಾಟ ನಡೆಯಲಿದೆ. ಮಾಹಿತಿಗೆ: 9945187154 ಗೆ ಸಂಪರ್ಕಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.