ADVERTISEMENT

ಗದಗ | ಶಿಲ್ಪಕಲೆ ಉಳಿವಿಗೆ ಜನರ ಸಹಭಾಗಿತ್ವವೂ ಮುಖ್ಯ: ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:10 IST
Last Updated 26 ನವೆಂಬರ್ 2025, 5:10 IST
ಗದುಗಿನ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಪ್ರಾಚ್ಯಪ್ರಜ್ಞೆ ರಾಜ್ಯ ಮಟ್ಟದ ಸ್ಪರ್ಧೆ ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು
ಗದುಗಿನ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಪ್ರಾಚ್ಯಪ್ರಜ್ಞೆ ರಾಜ್ಯ ಮಟ್ಟದ ಸ್ಪರ್ಧೆ ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು   

ಗದಗ: ‘ಶಿಲ್ಪಕಲೆಗಳು ನಮ್ಮ ದೇಶದ ಪರಂಪರೆಯನ್ನು ಬಿಂಬಿಸುತ್ತವೆ. ಅವುಗಳ ಉಳಿವಿಗೆ ಸರ್ಕಾರ ಪ್ರಯತ್ನ ನಡೆಸಿದ್ದು, ಸಾರ್ವಜನಿಕರ‌ ಸಹಭಾಗಿತ್ವವೂ ಅಷ್ಟೇ ಮುಖ್ಯವಾಗಿದೆ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಜಿಲ್ಲಾಡಳಿತ, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಪ್ರಾಚ್ಯಪ್ರಜ್ಞೆ ರಾಜ್ಯ ಮಟ್ಟದ ಸ್ಪರ್ಧೆ ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮದಲ್ಲಿ ಮಕ್ಕಳು ಭಾಷಣ, ಪ್ರಬಂಧ, ರಸಪ್ರಶ್ನೆ, ಚಿತ್ರಕಲೆ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮಲ್ಲಿನ ಪ್ರತಿಭೆ ಪ್ರದರ್ಶಿಸಿದ್ದಾರೆ. ಈ‌ ಮೂಲಕ ಪ್ರಾಚ್ಯ ಶಿಲ್ಪಕಲೆಯ ಕುರಿತು ಅರಿವು ಹೊಂದಿದ್ದಾರೆ ಎಂದು ಹೇಳಿದರು.

ADVERTISEMENT

‘ಮಕ್ಕಳಿಗೆ ಬಾಲ್ಯದಿಂದಲೇ ಶ್ರದ್ಧೆ, ಶಿಸ್ತು ಕಲಿಸಬೇಕು. ಎಲ್ಲಿ, ಹೇಗೆ ವರ್ತಿಸಬೇಕು ಎಂಬುದರ ಕುರಿತು ತಿಳಿವಳಿಕೆ ನೀಡಬೇಕು. ಅದು ಅವರ ಜೀವನದಲ್ಲಿ ಗುಣಾತ್ಮಕ ಬದಲಾವಣೆಗೆ ಕಾರಣವಾಗಲಿದೆ’ ಎಂದು ಹೇಳಿದರು.

‘ಪ್ರತಿ ವರ್ಷ ನಡೆಸುವ ಪ್ರಾಚ್ಯಪ್ರಜ್ಞೆ ಸ್ಪರ್ಧೆಗಳ ಪೈಕಿ ಒಂದಾದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಹೆಣ್ಣು ಮಗುವಿಗೆ ಪ್ರಶಸ್ತಿ ನೀಡಲು ಅವ್ವ ಟ್ರಸ್ಟ್‌ನಲ್ಲಿ ₹3 ಲಕ್ಷ ಠೇವಣಿ ಇಟ್ಟು, ಅದರಿಂದ ಬರುವ ಬಡ್ಡಿಹಣದಿಂದ ಪ್ರಶಸ್ತಿ ನೀಡಲಾಗುವುದು’ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಸುರೇಶ್ ವಿ. ನಾಡಗೌಡರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಡಿಡಿಪಿಐ ಆರ್.ಎಸ್.ಬುರಡಿ, ಡಾ. ಡಿ.ಸ್ಮಿತಾ, ಡಾ. ಆರ್.ಶೇಜೇಶ್ವರ, ಡಾ. ಸಿ.ಎನ್.ಮಂಜುಳಾ, ತಾರಕೇಶ್ ಟಿ. ವೇದಿಕೆಯಲ್ಲಿದ್ದರು.

ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಬಳ್ಳಾರಿಯ ದಿವ್ಯಜ್ಯೋತಿ, ಹಾಸನ ಜಿಲ್ಲೆಯ ರಮೇಶ್ ಹಾಗೂ ಪೋಷಕರು, ಶಿಕ್ಷಕರು ಅನಿಸಿಕೆಗಳನ್ನು ಹಂಚಿಕೊಂಡರು.

ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರ್ವಹಿಸಿದರು. ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಶರಣು ಗೊಗೇರಿ ವಂದಿಸಿದರು.

ಶಿಕ್ಷಕರು ಪೋಷಕರು ತಮ್ಮ ಮಕ್ಕಳಲ್ಲಿನ ಆಸಕ್ತಿ ಅಭಿರುಚಿ ಗುರುತಿಸಿ ಪ್ರೋತ್ಸಾಹ ನೀಡಿದರೆ ಮುಂದೆ ಅವರು ಜೀವನದಲ್ಲಿ ಮಹತ್ತರ ಸಾಧನೆ ಮಾಡುತ್ತಾರೆ.
ಬಸವರಾಜ ಹೊರಟ್ಟಿ ಸಭಾಪತಿ
ಇಲಾಖೆಗೆ ಹೊಸ ಚೈತನ್ಯ
‘ಎಚ್.ಕೆಪಾಟೀಲರು ಪ್ರವಾಸೋದ್ಯಮ ಇಲಾಖೆ ಸಚಿವರಾದ ಮೇಲೆ ಪುರಾತತ್ವ ಇಲಾಖೆಗೆ ಹೊಸ ಚೈತನ್ಯ ರೂಪರೇಷೆ ನೀಡಿದ್ದಾರೆ’ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜ್ ಎ. ತಿಳಿಸಿದರು.  ‘ರಾಜ್ಯದಲ್ಲಿ 25 ಸಾವಿರ ಸ್ಮಾರಕಗಳಿವೆ. ಇವುಗಳನ್ನು ಕೆಲವು ಎನ್‌ಜಿಒಗಳು ದತ್ತು ಪಡೆದು ಅಭಿವೃದ್ಧಿ ಮಾಡಲು ಮುಂದೆ ಬಂದಿವೆ. ಈವರೆಗೆ ರಾಜ್ಯದಲ್ಲಿ 14450 ಗ್ರಾಮಗಳ‌ ಸ್ಮಾರಕ ಶಿಲ್ಪಗಳ ಜಿಯೋ ಟ್ಯಾಗಿಂಗ್ ಮಾಡಲಾಗಿದೆ. ಇನ್ನು ಕಾರ್ಯ ನಿರಂತರ ನಡೆದಿದೆ. ಈ ಕಾರ್ಯ ಶೀಘ್ರದಲ್ಲೇ ಪೂರ್ಣಮಾಡುವ ಬಗ್ಗೆ ಕೆಲಸ ನಡೆದಿದೆ. ಪೂರ್ಣವಾದರೆ ದೇಶದಲ್ಲೇ ಜಿಯೊ ಟ್ಯಾಂಗಿಂಗ್ ಮಾಡಿದ ರಾಜ್ಯ ಕರ್ನಾಟಕ ಆಗುತ್ತದೆ. ಇದು ನಮ್ನ ಹೆಮ್ಮೆ’ ಎಂದರು. ಪ್ರಾಚ್ಯ ಪ್ರಜ್ಞೆ ಸ್ಪರ್ಧೆ ಒಂದು ವಿಶೇಷ ಕಾರ್ಯಕ್ರಮ. ಇದು ಮಕ್ಕಳಲ್ಲಿನ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಒದಗಿಸಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.