
ಗದಗ: ತಾಲ್ಲೂಕಿನ ತಿಮ್ಮಾಪುರ ಗ್ರಾಮದ 800ಕ್ಕೂ ಹೆಚ್ಚು ಮಹಿಳೆಯರು ಒಂದು ತಿಂಗಳ ಗೃಹಲಕ್ಷ್ಮಿ ಹಣವನ್ನು ಗ್ರಾಮದಲ್ಲಿ ರೇಣುಕಾದೇವಿ ಯಲ್ಲಮ್ಮ ದೇವಸ್ಥಾನದ ನಿರ್ಮಾಣ ಕಾರ್ಯಕ್ಕಾಗಿ ದೇಣಿಗೆಯಾಗಿ ನೀಡಲು ತೀರ್ಮಾನಿಸಿದ್ದಾರೆ.
ಹಣಕಾಸಿನ ಸಮಸ್ಯೆಯಿಂದ 4 ವರ್ಷದಿಂದ ದೇವಸ್ಥಾನದ ಕಾಮಗಾರಿ ಸ್ಥಗಿತೊಂಡಿದ್ದು, ಅದನ್ನು ಪೂರ್ಣಗೊಳಿಸಲು ಮಹಿಳೆಯರು ಗೃಹಲಕ್ಷ್ಮಿ ನೆರವಿನ ಹಣವನ್ನು ದೇಣಿಗೆಯಾಗಿ ನೀಡಲು ನಿರ್ಧರಿಸಿದರು.
‘ಪ್ರಸ್ತುತ ನೂರು ಮಹಿಳೆಯರು ತಲಾ ₹2 ಸಾವಿರ ನೀಡಿದ್ದಾರೆ. ಎಲ್ಲ ಮಹಿಳೆಯರು ನೀಡಿದರೆ, ₹16 ಲಕ್ಷಕ್ಕೂ ಹೆಚ್ಚು ಸಂಗ್ರಹವಾಗಲಿದೆ. ಅಷ್ಟು ಹಣ ಸಿಕ್ಕರೆ ಮುಂದಿನ ಆರು ತಿಂಗಳಲ್ಲಿ ದೇವಸ್ಥಾನ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ರೈತ ಮುಖಂಡ ಯಲ್ಲಪ್ಪ ಎಚ್.ಬಾಬರಿ ತಿಳಿಸಿದರು.
‘ಗ್ರಾಮದ 800ಕ್ಕೂ ಹೆಚ್ಚು ಮಹಿಳೆಯರು ದೇಣಿಗೆ ನೀಡುತ್ತೇವೆ. ಇನ್ನೂ ಕೊರತೆ ಆದಲ್ಲಿ, ಇನ್ನೊಂದು ತಿಂಗಳ ಹಣವನ್ನೂ ಕೊಡುತ್ತೇವೆ’ ಎಂದು ಗ್ರಾಮದ ಮಹಿಳೆ ಶಾಂತವ್ವ ಬಸಾಪುರ ತಿಳಿಸಿದರು.
‘ಗೃಹಲಕ್ಷ್ಮಿ’ ಹಣ ತಾಯಂದಿರ ಭಕ್ತಿ ಮೂಲಕ ಧಾರ್ಮಿಕ ಕಾರ್ಯಕ್ಕೂ ವಿನಿಯೋಗ ಆಗುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಅಭಿನಂದನಾ ಪತ್ರ ಕಳುಹಿಸಿಕೊಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.