
ಗಜೇಂದ್ರಗಡ ಸಮೀಪದ ರಾಜೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಂಡೂರ ಗ್ರಾಮದಲ್ಲಿ ಮುಖ್ಯ ಚರಂಡಿಯಲ್ಲಿ ಬೂದು ನೀರು ನಿರ್ವಹಣೆ ಯೋಜನೆಯಡಿ ನಿರ್ಮಿಸಿದ್ದ ಕಲ್ಲಿನ ಪಿಚ್ಚಿಂಗ್ ಕಿತ್ತು ಹೋಗಿರುವುದು
ಗಜೇಂದ್ರಗಡ: ಸಮೀಪದ ರಾಜೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಂಡೂರ ಗ್ರಾಮದಲ್ಲಿ ಚರಂಡಿಗಳು ಶಿಥಿಲಗೊಂಡು ಹೂಳು ತುಂಬಿಕೊಂಡಿದ್ದು, ಸ್ವಚ್ಛತೆ ಇಲ್ಲದಂತಾಗಿದೆ.
ಗ್ರಾಮದ ಹೊರಗಿರುವ ಮುಖ್ಯ ಚರಂಡಿಗೆ ಬೂದು ನೀರು ನಿರ್ವಹಣೆ ಯೋಜನೆ ಅಡಿಯಲ್ಲಿ ನಿರ್ಮಿಸಿದ ಚರಂಡಿಯ ಕಲ್ಲುಗಳೆಲ್ಲ ಕಿತ್ತು ಹೋಗಿದ್ದು, ಕಸ- ಕಡ್ಡಿಯಿಂದ ತುಂಬಿಕೊಂಡಿವೆ. ಇನ್ನುಳಿದ ಚರಂಡಿಗಳೂ ಹೂಳು ತುಂಬಿಕೊಂಡು, ಗಬ್ಬೆದ್ದು ನಾರುತ್ತಿವೆ. ಇದರಿಂದಾಗಿ ಅಲ್ಲಿನ ನಿವಾಸಿಗಳು ದುರ್ನಾತದ ಜತೆಗೆ ಸೊಳ್ಳೆಗಳ ಕಾಟಕ್ಕೆ ಬೇಸತ್ತಿದ್ದಾರೆ.
ಗ್ರಾಮದ ಬಾವಿಕಟ್ಟಿ ಓಣಿ ಸೇರಿದಂತೆ ಹಲವು ಓಣಿಗಳಲ್ಲಿ ಇನ್ನೂ ಸಿಸಿ ರಸ್ತೆ ನಿರ್ಮಿಸಿಲ್ಲ. ಗ್ರಾಮದ ಹೊರ ವಲಯದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಪಾಳು ಬಿದ್ದಿದೆ. ಗ್ರಾಮ ಸಂಪರ್ಕಿಸುವ ರಸ್ತೆಗಳ ಪಕ್ಕದಲ್ಲಿ ಗ್ರಾಮಸ್ಥರು ತಿಪ್ಪೆಗಳನ್ನು ಹಾಕಿದ್ದು, ಈ ರಸ್ತೆಗಳು ಬಯಲು ಶೌಚಾಲಯಗಳಾಗಿವೆ.
ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ರಾತ್ರಿ ಸೊಳ್ಳೆ ಪರದೆ ಇಲ್ಲದೆ ಮಲಗಲಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿಯವರು ಕಳೆದ ತಿಂಗಳು ದುರ್ಗಾದೇವಿ ಜಾತ್ರೆಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿದ್ದರು. ಆದರೆ ಮತ್ತೆ ಚರಂಡಿಗಳು ಹೂಳು ತುಂಬಿಕೊಂಡು ಗಬ್ಬೆದ್ದು ನಾರುತ್ತಿವೆ. ಸ್ವಚ್ಛತೆಗೆ ಜನರ ಸಹಕಾರ ಸಹ ಅಗತ್ಯʼ ಎಂದು ಹೆಸರು ಹೇಳಲಿಚ್ಚಿಸದ ಗ್ರಾಮಸ್ಥರೊಬ್ಬರು ಹೇಳಿದರು.
‘2022-23ನೇ ಸಾಲಿನಲ್ಲಿ ಬೂದು ನೀರು ನಿರ್ವಹಣೆ ಯೋಜನೆಯಡಿ ₹5 ಲಕ್ಷ ವೆಚ್ಚದಲ್ಲಿ ದಿಂಡೂರ ಗ್ರಾಮದ ಅಬ್ಬಿಗೇರಿಯವರ ಅಂಗಡಿಯಿಂದ ಹಳ್ಳದವರೆಗಿನ ಮುಖ್ಯ ಚರಂಡಿಯಲ್ಲಿ ಕಾಮಗಾರಿ ನಡೆಸಲಾಗಿದ್ದು, ಗುತ್ತಿಗೆದಾರರು ಇನ್ನೂ ಪಂಚಾಯಿತಿಗೆ ಹಸ್ತಾಂತರಿಸಿಲ್ಲ. ಶುದ್ಧ ಕುಡಿಯುವ ನೀರಿನ ಘಟಕವನ್ನು ಬೇರೆಡೆ ಸ್ಥಳಾಂತರಿಸಿ ಮತ್ತೆ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪಿಡಿಒ ಎಸ್.ಎಸ್.ತೊಂಡಿಹಾಳ ಮಾಹಿತಿ ನೀಡಿದರು.
ಹಗಲಲ್ಲೂ ಉರಿಯುವ ಬೀದಿದೀಪಗಳು
ಗ್ರಾಮದ ಪ್ರಾಥಮಿಕ ಶಾಲೆ ರಸ್ತೆ ಹಾಗೂ ಮುಖ್ಯರಸ್ತೆಯಲ್ಲಿರುವ ಬೀದಿದೀಪಗಳು ಹಗಲಲ್ಲೂ ಉರಿಯುತ್ತಿವೆ. ಗ್ರಾಮ ಪಂಚಾಯಿತಿಯವರು ಬೀದಿದೀಪಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಹಗಲಲ್ಲೂ ಬೆಳಗುತ್ತಿರುವುದರಿಂದ ಬಲ್ಬ್‌ಗಳು ಬಹಳ ದಿನ ಬಾಳಿಕೆ ಬರದೆ ಜನರ ತೆರಿಗೆ ಹಣ ವ್ಯರ್ಥವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ದಿಂಡೂರ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಸಂದರ್ಭದಲ್ಲಿ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿತ್ತು. ಜನರು ತ್ಯಾಜ್ಯವನ್ನು ಚರಂಡಿಗೆ ಎಸೆಯುತ್ತಿರುವುದರಿಂದ ಮತ್ತೆ ಸಮಸ್ಯೆಯಾಗಿದೆ. ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಜತೆಗೆ ಗ್ರಾಮಸ್ಥರು ಸಹಕಾರ ನೀಡಬೇಕು.ಎಸ್.ಎಸ್.ತೊಂಡಿಹಾಳ, ಪಿಡಿಒ, ರಾಜೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.