ADVERTISEMENT

‘ಗಾಂಧಿ ಮಾರ್ಗ’ ಅನುಸರಿಸಿದ ಹೋರಾಟಗಾರರು

ಶ್ರೀಗಂಧದಲ್ಲಿ ಗಾಂಧಿ ಮೂರ್ತಿ ಕೆತ್ತಿ, ಅದನ್ನು ಅಂತ್ಯಸಂಸ್ಕಾರ ಮಾಡಿದ ಶಿಲ್ಪಿಗಳು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 1 ಅಕ್ಟೋಬರ್ 2019, 19:30 IST
Last Updated 1 ಅಕ್ಟೋಬರ್ 2019, 19:30 IST
ಜಕ್ಕಲಿ ಗ್ರಾಮದಲ್ಲಿ ಇರುವ ಮಹಾತ್ಮ ಗಾಂಧೀಜಿಯವರ ಮೂರ್ತಿ
ಜಕ್ಕಲಿ ಗ್ರಾಮದಲ್ಲಿ ಇರುವ ಮಹಾತ್ಮ ಗಾಂಧೀಜಿಯವರ ಮೂರ್ತಿ   

ನರೇಗಲ್: ಮಹಾತ್ಮ ಗಾಂಧೀಜಿ ಅವರು 1934ರ ಮಾರ್ಚ್ 3 ರಂದು ಹೋಬಳಿಯ ಪುಟ್ಟ ಗ್ರಾಮ ಜಕ್ಕಲಿಗೆ ಬಂದು ಹೋದ ನಂತರ, ಇಡೀ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ದೊಡ್ಡ ಕ್ರಾಂತಿ ನಡೆಯಿತು. ಗಾಂಧೀಜಿ ಅವರಿಂದ ಸ್ಫೂರ್ತಿ ಪಡೆದು ಅನೇಕರು ಸ್ವಾತಂತ್ರ್ಯ ಹೋರಾಟಕ್ಕೆ ಧುಮಿಕದರು. ಅದರಲ್ಲೂ ರೋಣ ತಾಲ್ಲೂಕಿನ 192 ಹೋರಾಟಗಾರರು ತಮ್ಮ ಜೀವನದುದ್ದಕ್ಕೂ ಗಾಂಧಿ ಮಾರ್ಗ ಅನುಸರಿಸಿ, ಅವರ ತತ್ವಗಳಿಗೆ ಬದ್ಧರಾಗಿ ಬದುಕಿದರು.

ಗಾಂಧೀಜಿ ಅವರಿಂದ ಪ್ರೇರಣೆಗೊಂಡ ನಾಗೇಂದ್ರಗಡದ ಸಾಮಾನ್ಯ ರೈತ ಮಲ್ಲಪ್ಪ ಹಜ್ಜಣ್ಣವರ ಕೊನೆಯವರೆಗೂ ಗಾಂಧೀಜಿ ಅವರ ಸರಳ ಜೀವನ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರು. ಖಾವಿ ಬಟ್ಟೆ ತೊಟ್ಟು, ಚಪ್ಪಲಿ ಧರಿಸಿದೇ ವ್ರತ ಪಾಲಿಸಿದರು. 1942ರಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ ಅವರು ಜೈಲುವಾಸು ಅನುಭವಿಸಿದರು. ಹುಲ್ಲೂರು ಗ್ರಾಮದ ಗಾಂಧಿವಾದಿ ವೆಂಕನಗೌಡ ಕೆಂಚನಗೌಡ್ರ ಅವರು ಗಾಂಧೀಜಿ ನಿಧನದ ನಂತರ ನಿರಂತರ 6 ತಿಂಗಳು ಮೌನ ವ್ರತ ಪಾಲಿಸಿದರು. ನಂತರ ಗ್ರಾಮದ ಹಿರಿಯರು, ಕುಟುಂಬಸ್ಥರು ಮನವೊಲಿಸಿದ ಮೇಲೆ ಮೌನ ಮುರಿದರು.

ಜಕ್ಕಲಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಕಲ್ಲಿನಲ್ಲಿ ಕೆತ್ತನೆ ಮಾಡಿದ ಅದೇ ಗ್ರಾಮದ ಶಿಲ್ಪಿಗಳಾದ ಮಲ್ಲಪ್ಪ ಮತ್ತು ಸೋಮಪ್ಪ ಕಮ್ಮಾರ ಅವರು, ಗಾಂಧೀಜಿ ಅವರು ನಿಧನರಾದಾಗ, ಗಂಧದ ಕಟ್ಟಿಗೆಯಲ್ಲಿ ಅವರ ಮೂರ್ತಿ ನಿರ್ಮಿಸಿ, ಅದನ್ನು ತಮ್ಮ ಮನೆಯಲ್ಲಿಯೇ ಅಂತ್ಯ ಸಂಸ್ಕಾರ ಮಾಡಿದರು. ನಂತರ ಯಾವುದೇ ಮೂರ್ತಿಯನ್ನು ಕೆತ್ತುವುದಿಲ್ಲ ಎಂದು ಶಪಥ ಮಾಡಿ ಅದನ್ನು ಜೀವನದುದ್ದಕ್ಕೂ ಪಾಲಿಸಿದರು.

ADVERTISEMENT

ಪುಣೆಯಲ್ಲಿ ಬಿಎಸ್‌ಸಿ ಓದುವಾಗಲೇ ಗಾಂಧಿ ತತ್ವದಿಂದ ಪ್ರೇರಣೆಗೊಂಡರಂಗರಾವ್ ಕುಲಕರ್ಣಿ ಅವರು ಮರಳಿ ಸ್ವಂತ‌ ಊರು ಬಾಚಲಾಪುರಕ್ಕೆ ಬಂದು ನೆಲೆಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆದು ಜಾಗೃತಿ ಮೂಡಿಸಿದರು. ಗಾಂಧಿ ಅನುಯಾಯಿಯಾಗಿದ್ದ ಸೂಡಿ ಗ್ರಾಮದ ವೀರುಪಾಕ್ಷಪ್ಪ ಅಬ್ಬಿಗೇರಿ ಧ್ವಜ ಸತ್ಯಾಗ್ರಹ ಮಾಡಿ ಜೈಲು ಸೇರಿದರು. ಗಜೇಂದ್ರಗಡದ ಕುಂದರಗಿ ಅಂದಾನಪ್ಪ, ಹೊಸಳ್ಳಿಯ ನೀಲಗಂಗಯ್ಯ ಪೂಜಾರ, ಅಬ್ಬಿಗೇರಿಯ ಮಹಾದೇವಪ್ಪ ಕಂಬಳಿ, ಡಾ. ಕಾಶಿನಾಥಶಾಸ್ತ್ರಿ ಗಚ್ಚಿನಮಠ, ನರೇಗಲ್‌ನ ಬಸೆಟ್ಟಪ್ಪ ಜಕ್ಕಲಿ ಗಾಂಧಿ ತತ್ವಗಳಿಂದ ಸ್ಫೂರ್ತಿ ಪಡೆದು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.