ನರೇಗಲ್ (ಗದಗ ಜಿಲ್ಲೆ): ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜತೆಗೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಜಾಗೃತಿ ಮೂಡಿಸಿ, ಪಟ್ಟಣದ ಒಂದನೇ ವಾರ್ಡ್‌ನ ಕೋಚಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಿಜಯಕುಮಾರ ಡಿ.ಆರ್., ಗಮನ ಸೆಳೆದಿದ್ದಾರೆ.
ಕೋಚಲಾಪುರದಲ್ಲಿ 104 ಮನೆಗಳ ಸಮೀಕ್ಷೆಗೆ ನಿಯೋಜನೆಗೊಂಡಿದ್ದ ಅವರು, ‘ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ದಯವಿಟ್ಟು ಮಗುವನ್ನು ನಮ್ಮೂರಿನ ಸರ್ಕಾರಿ ಶಾಲೆಗೆ ಸೇರಿಸಿ. ನಾವು–ನೀವು ಕಲಿತ ದೇಗುಲ ಸರ್ಕಾರಿ ಶಾಲೆ ಅಲ್ಲವೇ...’ ಎಂಬ ಸ್ಟಿಕ್ಕರ್ ಅನ್ನು ಗಣತಿ ಮಾಡಿದ ಪ್ರತಿ ಮನೆಗೆ ಅಂಟಿಸಿದ್ದಾರೆ.
ತಮಗೆ ಹಂಚಿಕೆಯಾಗಿದ್ದ ಮನೆಗಳ ಜತೆಗೆ ಹೆಚ್ಚುವರಿ 74 ಮನೆ ಬಾಗಿಲಿಗೂ ಸ್ಟಿಕ್ಕರ್ ಅಂಟಿಸಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಸಿಗುವ ಗುಣಾತ್ಮಕ ಶಿಕ್ಷಣ, ಸರ್ಕಾರದ ಸೌಲಭ್ಯಗಳ ಮಾಹಿತಿ ನೀಡಿದ್ದಾರೆ.
ಸಮೀಕ್ಷೆ ಕಾರ್ಯದ ಜತೆಗೆ ಮಕ್ಕಳ ಮಾಹಿತಿ, ಅವರ ಶಿಕ್ಷಣ ಹಾಗೂ 1ನೇ ತರಗತಿಗೆ ಪ್ರವೇಶ ಪಡೆಯಲು ಸಿದ್ಧರಿರುವ ಮಕ್ಕಳ ಮಾಹಿತಿ ಸಂಗ್ರಹಿಸಿ, ಸರ್ಕಾರಿ ಶಾಲೆ ಉಳಿವಿಗೆ ಜನಜಾಗೃತಿಗೆ ಮೂಡಿಸುತ್ತಿರುವ ಶಿಕ್ಷಕನ ಕಾರ್ಯಕ್ಕೆ ಗ್ರಾಮಸ್ಥರು, ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಮುಂದಿನ ವರ್ಷ ಮಕ್ಕಳನ್ನು ಸರ್ಕಾರಿ ಶಾಲೆಗೇ ಸೇರಿಸುವುದಾಗಿ ವಾಗ್ದಾನ ಮಾಡಿದ್ದಾರೆ.
‘ಸರ್ಕಾರ ಹೇಳಿದಾಗ ಮಾಡುವ ಆಂದೋಲನದಲ್ಲಿ ಮಕ್ಕಳ ಮಾಹಿತಿ ಸರಿಯಾಗಿ ಸಿಗುವುದಿಲ್ಲ. ಸಮೀಕ್ಷೆ ವೇಳೆ ಪ್ರತಿ ಮನೆಗೆ ಖುದ್ದಾಗಿ ಭೇಟಿ ನೀಡುವಾಗ ಕುಟುಂಬದ ಸಂಪೂರ್ಣ ಮಾಹಿತಿ ದೊರೆಯುತ್ತಿದೆ. ಅದರ ಸದುಪಯೋಗ ಪಡೆದು ಹಾಗೂ ಪಾಲಕರಿಗೆ ಸರ್ಕಾರಿ ಶಾಲೆಯ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನ ಪಟ್ಟಿದ್ದೇನೆ’ ಎಂದು ಶಿಕ್ಷಕ ವಿಜಯಕುಮಾರ್ ಡಿ.ಆರ್. ತಿಳಿಸಿದ್ದಾರೆ.
ಮಕ್ಕಳನ್ನು ಸೇರಿಸುವ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು ಎಂದು ಸ್ವಯಂಪ್ರೇರಿತರಾಗಿ ಸಮೀಕ್ಷೆ ವೇಳೆ ಸ್ಟಿಕರ್ ಅಂಟಿಸಿ ಜಾಗೃತಿ ಮೂಡಿಸಿದ ಶಿಕ್ಷಕರ ಕಾರ್ಯ ಶ್ಲಾಘನೀಯಆರ್.ಎಸ್.ಬುರುಡಿ ಡಿಡಿಪಿಐ ಗದಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.