
ನರೇಗಲ್: ಸಮೀಪದ ಕೋಚಲಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ 2026–27ರಲ್ಲಿ ಹೊಸದಾಗಿ ಪ್ರವೇಶ ಪಡೆಯಲು ಮುಂದಾಗುವ ಮಕ್ಕಳ ಪಾಲಕರಿಗೆ ಶಾಲೆಯ ವತಿಯಿಂದ ಅಭಿನಂದನಾ ಹಾಗೂ ಒಪ್ಪಿಗೆ ಪತ್ರ ನೀಡಲು ಶಿಕ್ಷಕರು ಮುಂದಾಗಿದ್ದಾರೆ. ಈ ಮೂಲಕ ಪ್ರವೇಶಾತಿ ಹೆಚ್ಚಿಸಲು ಹೊಸ ಪ್ರಯತ್ನ ಮಾಡುತ್ತಿದ್ದಾರೆ.
ಗ್ರಾಮದ ಮನೆ, ಮನೆಗೆ ಭೇಟಿ ನೀಡಿ ಪಾಲಕರ ಜೊತೆಗೆ ಸಮಾಲೋಚನೆ ನಡೆಸಿ ಶಾಲೆಯ ಕುರಿತು ಮಾಹಿತಿ ನೀಡುತ್ತಿದ್ದಾರೆ. ಸಮೀಪದ ತೋಟದಲ್ಲಿ ವಾಸ ಮಾಡುವ ಹಾಗೂ ದುಡಿಯಲು ಬೇರೆ ಊರಿಗೆ ಹೋದ ಪಾಲಕರ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸದ್ಯ 10ಕ್ಕೂ ಹೆಚ್ಚಿನ ಪಾಲಕರಿಗೆ ಅಭಿನಂದನಾ ಪತ್ರ ವಿತರಣೆ ಮಾಡಿದ್ದಾರೆ.
ಅಭಿನಂದನಾ ಪತ್ರದಲ್ಲಿ ‘ಸರ್ಕಾರಿ ಶಾಲೆಯನ್ನು ಆರಿಸಿದ ನಿರ್ಧಾರ ಸರಿಯಾದದ್ದು, ನಿಮ್ಮ ಮಗುವಿನ ಭವಿಷ್ಯ ಸುರಕ್ಷಿತ ಹಸ್ತಗಳಲ್ಲಿ ಇದೆ ಎಂಬ ನಂಬಿಕೆಯ ಘೋಷಣೆಯೇ ಆಗಿದೆ. ಈ ಪತ್ರದಲ್ಲಿ ಶಾಲೆಯು ಗುಣಮಟ್ಟದ ಶಿಕ್ಷಣ, ಶಿಸ್ತಿನ ವಾತಾವರಣ, ನೈತಿಕ ಮೌಲ್ಯಗಳ ಕಲಿಕೆ, ವಿದ್ಯಾರ್ಥಿಯ ಪ್ರಗತಿಗೆ ಶಿಕ್ಷಕರ ಸಂಪೂರ್ಣ ಬದ್ಧತೆ, ವಿಜ್ಞಾನ ತಂತ್ರಜ್ಞಾನ ಮಾಹಿತಿʼ ಎಂಬ ಐದು ಪ್ರಮುಖ ಅಂಶಗಳನ್ನು ಸ್ಪಷ್ಟವಾಗಿ ಭರವಸೆ ನೀಡುತ್ತಿದ್ದಾರೆ. ಪತ್ರವನ್ನು ಸ್ವೀಕರಿಸಿದ ಹಲವು ಪಾಲಕರು ಮೊದಲ ಬಾರಿಗೆ ಸರ್ಕಾರಿ ಶಾಲೆ ನಮ್ಮನ್ನು ಇಷ್ಟೊಂದು ಗೌರವಿಸುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಖಾಸಗಿ ಶಾಲೆಗಳೊಂದಿಗೆ ಪೈಪೋಟಿ ಮಾಡುವ ಹಾಗೂ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗ ಈಗಾಗಲೇ ₹ 1000 ಠೇವಣಿ ಇಡುವ ಯೋಜನೆ ಜಾರಿಯಲ್ಲಿದೆ. ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ 2026–27ರಲ್ಲಿ ಪ್ರವೇಶ ಪಡೆಯುವ ಪ್ರತಿ ವಿದ್ಯಾರ್ಥಿಯ ಹೆಸರಿನಲ್ಲೂ ಸಹ ₹ 1000 ಠೇವಣಿ ಇಡಲಾಗುತ್ತದೆ. ಇದರ ಜೊತೆಗೆ ಶೈಕ್ಷಣಿಕ ಭರವಸೆ ಬಾಂಡ್ ವಿತರಣೆ ಮಾಡಲಾಗುತ್ತದೆ. ಇದರಲ್ಲಿ ವಿದ್ಯಾರ್ಥಿಯ ಕಲಿಕೆ, ನೈತಿಕ-ಸಾಮಾಜಿಕ ಮೌಲ್ಯಗಳ ಅಭಿವೃದ್ಧಿ, ಪರೀಕ್ಷಾ ಫಲಿತಾಂಶ, ತರಗತಿ ಹಾಜರಾತಿ, ಶಿಕ್ಷಕರ ವೈಯಕ್ತಿಕ ಜವಾಬ್ದಾರಿ ಈ ಎಲ್ಲ ಅಂಶಗಳನ್ನು ಉಲ್ಲೇಖಿಸಲಾಗಿದೆ. ಮುಖ್ಯಶಿಕ್ಷಕಿ ಎಸ್.ಬಿ. ಕೊಟ್ರಶೆಟ್ಟ, ಸಹ ಶಿಕ್ಷಕ ವಿಜಯಕುಮಾರ್ ಡಿ.ಆರ್. ಅವರು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಪಣತೊಟ್ಟಿದ್ದು ಮುಂದಿನ ವರ್ಷದ ಪ್ರವೇಶಾತಿಗೆ ಅಗತ್ಯ ಕೆಲಸವನ್ನು ಈಗಾಗಲೇ ಆರಂಭಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.