ADVERTISEMENT

ಗದಗ| ಛತ್ರಪತಿ ಶಿವಾಜಿ ಜಯಂತಿ: ಅದ್ಧೂರಿ ಮೆರವಣಿಗೆ

ಡಿಜೆ ಹಾಡಿಗೆ ಹುಚ್ಚೆದ್ದು ಕುಣಿದ ಯುವಜನತೆ; ಎಲ್ಲೆಡೆ ರಾರಾಜಿಸಿದ ಕೇಸರಿ ಧ್ವಜ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 7:06 IST
Last Updated 20 ಫೆಬ್ರುವರಿ 2026, 7:06 IST
ಛತ್ರಪತಿ ಶಿವಾಜಿ ಮತ್ತು ಸಂತ ಸೇವಾಲಾಲ್‌ ಜಯಂತಿ ಅಂಗವಾಗಿ ಗುರುವಾರ ಮೆರವಣಿಗೆ ನಡೆಯಿತು
ಛತ್ರಪತಿ ಶಿವಾಜಿ ಮತ್ತು ಸಂತ ಸೇವಾಲಾಲ್‌ ಜಯಂತಿ ಅಂಗವಾಗಿ ಗುರುವಾರ ಮೆರವಣಿಗೆ ನಡೆಯಿತು   

ಗದಗ: ಛತ್ರಪತಿ ಶಿವಾಜಿ ಹಾಗೂ ಸಂತ ಸೇವಾಲಾಲ್‌ ಜಯಂತ್ಯುತ್ಸವದ ಅಂಗವಾಗಿ ಶಿವರಾಮಕೃಷ್ಣ ಸಮಿತಿ ಹಾಗೂ ಹಿಂದೂಪರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಶಿವಾಜಿ ಸೇರಿದಂತೆ ವಿವಿಧ ಮಹನೀಯರ ಮೆರವಣಿಗೆ ಕಾರ್ಯಕ್ರಮ ಗುರುವಾರ ಅದ್ಧೂರಿಯಾಗಿ ನಡೆಯಿತು.

ಶಿವಾಜಿ ಮೂರ್ತಿಗೆ ಪೂಜೆ ಸಲ್ಲಿಸಿ, ಒಕ್ಕಲಗೇರಿ ಓಣಿಯ ರಾಚೋಟೇಶ್ವರ ದೇವಸ್ಥಾನದಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಮೆರವಣಿಗೆಯು ಜುಮ್ಮಾ ಮಸೀದಿ, ಬಸವೇಶ್ವರ ಸರ್ಕಲ್, ಹುಯಿಲಗೋಳ ನಾರಾಯಣರಾವ್ ವೃತ್ತದ ಮಾರ್ಗವಾಗಿ ಮುನ್ಸಿಪಲ್ ಕಾಲೇಜು ಮೈದಾನ ತಲುಪಿತು.

ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಕೇಸರಿ ಧ್ವಜಗಳು ರಾರಾಜಿಸಿದವು. ರಸ್ತೆ ಬದಿಗಳಲ್ಲಿ, ಮಹಡಿ ಮೇಲೆ ಕಿಕ್ಕಿರಿದು ಸೇರಿದ್ದ ಜನರು ಮೆರವಣಿಗೆಯ ವೈಭವ ಕಣ್ತುಂಬಿಕೊಂಡರು. ‘ಶಿವಾಜಿ ಮಹಾರಾಜ್ ಕೀ ಜೈ’ ಘೋಷಣೆ ಮೊಳಗಿಸಿದರು.

ADVERTISEMENT

ಮೆರವಣಿಗೆಯಲ್ಲಿ ಈ ಬಾರಿ 17 ಅಡಿ ಎತ್ತರದ ಪ್ರಭು ಶ್ರೀರಾಮ, ಸಹಸ್ರಾರ್ಜುನ, ಮಹರ್ಷಿ ವಾಲ್ಮೀಕಿ, ವೀರಮಾತೆ ಕಿತ್ತೂರ ರಾಣಿ ಚನ್ನಮ್ಮ, ಪಾಂಡುರಂಗ ವಿಠ್ಠಲ ಸೇರಿದಂತೆ ವಿವಿಧ ಮೂರ್ತಿಗಳ ಮೆರವಣಿಗೆಯೂ ನಡೆಯಿತು.

ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಹುಬ್ಬಳ್ಳಿ, ಬಾಗಲಕೋಟೆ, ಕೊಪ್ಪಳ, ಹಾವೇರಿ ಜಿಲ್ಲಾ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕೊರಳಲ್ಲಿ ಕೇಸರಿ ಶಾಲು, ಹಣೆಯಲ್ಲಿ ಕುಂಕುಮ ಧರಿಸಿದ್ದ ಯುವಪಡೆ ಕಿವಿಗಡಚಿಕ್ಕುವ ಡಿಜೆ ಸದ್ದಿಗೆ ಹೆಜ್ಜೆ ಹಾಕಿದರು.

ಮೆರವಣಿಗೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಮೆರವಣಿಗೆಯಲ್ಲಿ ಗಮನ ಸೆಳೆದ 17 ಅಡಿ ಎತ್ತರದ ಶ್ರೀರಾಮ ಮೂರ್ತಿ
ಸಂತ ಸೇವಾಲಾಲ್‌ ಮೂರ್ತಿ
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು

ಊಟ ಉಪಾಹಾರ ವ್ಯವಸ್ಥೆ

ಮೆರವಣಿಗೆ ಪ್ರಾರಂಭಕ್ಕೂ ಮುನ್ನ ಗಜಾನನ ಸಮಿತಿಯಿಂದ 1500 ಜನರಿಗೆ ಪ್ರಸಾದದ ವ್ಯವಸ್ಥೆ 10ರಿಂದ 12 ಸಾವಿರ ಜನರಿಗೆ ಲೀಲಾ ಲೆವರ್ ಸಂಸ್ಥೆಯಿಂದ ಹತ್ತಿಕಾಳ ಕೂಟದಲ್ಲಿ ಊಟದ ವ್ಯವಸ್ಥೆ ಬಟ್ಟೆ ವ್ಯಾಪಾರಸ್ಥರಿಂದ ನೀರು ಹಾಗೂ ಮಜ್ಜಿಗೆ ವ್ಯವಸ್ಥೆ ಕಾಮರತಿ ಉತ್ಸವ ಸಮಿತಿಯಿಂದ 10 ಸಾವಿರ ಜನರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.