ADVERTISEMENT

ಲಕ್ಷ್ಮೇಶ್ವರ | ಹೆಸರು ಒಕ್ಕಣೆಗೆ ಯಂತ್ರ ಬಳಕೆ: ಕೂಲಿ ಕಾರ್ಮಿಕರಿಗೆ ಬೇಡಿಕೆ

ನಾಗರಾಜ ಎಸ್‌.ಹಣಗಿ
Published 23 ಆಗಸ್ಟ್ 2025, 4:25 IST
Last Updated 23 ಆಗಸ್ಟ್ 2025, 4:25 IST
ಲಕ್ಷ್ಮೇಶ್ವರ ತಾಲ್ಲೂಕು ಅಡರಕಟ್ಟಿ ಗ್ರಾಮದ ರೈತ ಗಂಗನಗೌಡ ಪಾಟೀಲ ಯಂತ್ರ ಬಳಸಿ ಹೆಸರು ಒಕ್ಕಣೆ ಮಾಡಿಸಿದರು
ಲಕ್ಷ್ಮೇಶ್ವರ ತಾಲ್ಲೂಕು ಅಡರಕಟ್ಟಿ ಗ್ರಾಮದ ರೈತ ಗಂಗನಗೌಡ ಪಾಟೀಲ ಯಂತ್ರ ಬಳಸಿ ಹೆಸರು ಒಕ್ಕಣೆ ಮಾಡಿಸಿದರು   

ಲಕ್ಷ್ಮೇಶ್ವರ: ಮೂರು ವಾರಗಳಿಂದ ನಿರಂತರವಾಗಿ ಸುರಿದ ಮಳೆ ಇದೀಗ ಬಿಡುವು ಕೊಟ್ಟಿದ್ದು, ಅಳಿದುಳಿದ ಹೆಸರು ಒಕ್ಕಣಿಗೆ ರೈತರು ಮುಂದಾಗಿದ್ದಾರೆ.

ಸಾವಿರಾರು ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದ ಹೆಸರು ಬೆಳೆ ಅತಿವೃಷ್ಟಿಯಿಂದಾಗಿ ಶೇ 75ಕ್ಕಿಂತಲೂ ಹೆಚ್ಚು ಹಾಳಾಗಿದೆ. ಕೊಯ್ಲಿಗೆ ಬಂದಿದ್ದ ಬೆಳೆ ಮೂರು ವಾರಗಳವರೆಗೆ ಸುರಿದ ಮಳೆಯಿಂದ ನಾಶವಾಗಿದೆ. ನಿರಂತರ ಮಳೆಯಿಂದಾಗಿ ಸರಿಯಾದ ವೇಳೆಗೆ ಹೆಸರುಕಾಯಿ ಬಿಡಿಸಲು ರೈತರಿಗೆ ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ ಹೆಸರು ಮಳೆಗೆ ಸಿಕ್ಕು ಹಾಳಾಗಿ ರೈತರಿಗೆ ಸಂಕಷ್ಟ ತಂದೊಡ್ಡಿದೆ.

ಹೆಸರು ಬೆಳೆ ಹಸಿರು ಬಂಗಾರ ಎಂದೇ ಪ್ರಸಿದ್ಧ. ಮುಂಗಾರು ಆರಂಭದಲ್ಲಿ ರೈತರು ಹೆಸರನ್ನು ಬಿತ್ತನೆ ಮಾಡುತ್ತಾರೆ. ಇದು ಅಕ್ಕಡಿಕಾಳುಗಳಲ್ಲಿ ಮುಖ್ಯ ಬೆಳೆಯಾಗಿದೆ. ಹೆಸರುಕಾಳಿಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಹೀಗಾಗಿ ರೈತರೂ ಇದನ್ನು ಬಿತ್ತನೆ ಮಾಡುತ್ತಾರೆ. ಈ ವರ್ಷ ಕೂಡ ತಾಲ್ಲೂಕಿನಾದ್ಯಂತ 10 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಭೂಮಿಯಲ್ಲಿ ಬಿತ್ತನೆ ಆಗಿತ್ತು. ಆದರೆ ಅತಿವೃಷ್ಟಿ ಬೆಳೆಯನ್ನೇ ಆಪೋಶನ ಪಡೆದಿದ್ದು, ರೈತರು ಚಿಂತಾಕ್ರಾಂತನಾಗಿದ್ದಾರೆ.

ADVERTISEMENT

ಮಳೆ ಸ್ವಲ್ಪ ಬಿಡುವು ನೀಡಿದ್ದರಿಂದ ಸಿಕ್ಕಷ್ಟು ಫಸಲಿಗೋಸ್ಕರ ರೈತರು ದೊಡ್ಡ ದೊಡ್ಡ ಯಂತ್ರಗಳ ಮೊರೆ ಹೋಗಿದ್ದಾರೆ. ಒಮ್ಮೆಲೇ ಹೆಸರುಕಾಯಿ ಬಿಡಿಸಲು ರೈತರು ಮುಂದಾಗಿರುವುದರಿಂದ ಕೃಷಿ ಕೂಲಿಕಾರರಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಇದರಿಂದಾಗಿ ಕೂಲಿ ದರವೂ ಹೆಚ್ಚಳವಾಗಿದೆ. ಒಬ್ಬ ಕೃಷಿ ಕೂಲಿಕಾರನಿಗೆ ದಿನಕ್ಕೆ ₹300ರಿಂದ ₹400 ಕೂಲಿ ಕೊಡಬೇಕಾಗಿದೆ. ಇಷ್ಟು ಕೊಟ್ಟರೂ ಆಳುಗಳ ಸಮಸ್ಯೆ ಕಾಡುತ್ತಿದೆ. ಆದ್ದರಿಂದ ರೈತರು ಬೃಹತ್ ಯಂತ್ರಗಳ ಮೊರೆ ಹೋಗಿದ್ದಾರೆ.

ಯಂತ್ರಗಳನ್ನು ಬಳಸಿದರೆ ಶೇ 10–20ರಷ್ಟು ಕಾಳು ಹೊಲದಲ್ಲೇ ಬೀಳುತ್ತದೆ. ಆದರೆ ಅನಿವಾರ್ಯ. ಮಳೆ ಮತ್ತೆ ಯಾವಾಗ ಬರುತ್ತದೆಯೋ ಎಂಬ ಭಯ ರೈತರಲ್ಲಿದೆ. ಹೀಗಾಗಿ ಬಂದಷ್ಟು ಫಸಲನ್ನು ಪಡೆಯುವ ಸಲುವಾಗಿ ರೈತರು ದಿನಾಲೂ ಹೆಣಗಾಡಬೇಕಾಗಿದೆ. ಒಂದು ಎಕರೆ ಹೊಲದಲ್ಲಿನ ಬೆಳೆಯನ್ನು ಒಕ್ಕಣೆ ಮಾಡಿಕೊಡಲು ಒಂದು ಗಂಟೆಗೆ ₹2,500 ಬಾಡಿಗೆ ಕೊಡಬೇಕಾಗಿದೆ. ಹೇಗಾದರೂ ಸರಿ ಒಕ್ಕಣಿ ಮುಗಿಸಲೇಬೇಕಾದ ಅನಿವಾರ್ಯ ನಿರ್ಮಾಣವಾಗಿದೆ ಎಂದು ರೈತರು ಅಲವತ್ತುಕೊಂಡಿದ್ದಾರೆ. 

ಈ ವರ್ಷ ಸತತವಾಗಿ ಸುರಿದ ಮುಂಗಾರು ಮಳೆಗೆ ಹೆಸರು ಪೀಕು ಹಾಳಾಗಿದೆ. ಸರ್ಕಾರ ರೈತರಿಗೆ ಬೆಳೆ ಹಾನಿ ಪರಿಹಾರ ಕೊಡಬೇಕು
ವಿರೂಪಾಕ್ಷಪ್ಪ ಮುದಕಣ್ಣವರ ಹುಲ್ಲೂರು ಗ್ರಾಮದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.