ADVERTISEMENT

ಉದ್ಯೋಗವಿಲ್ಲದೆ ಗ್ರಾಮವನ್ನೇ ತೊರೆದ ಯುವಕರು..!

ಬಿಕೋ ಎನ್ನುತ್ತಿದೆ ಶಿರಹಟ್ಟಿ ತಾಲ್ಲೂಕಿನ ಗಡಿ ಗ್ರಾಮ ಹೊಸಳ್ಳಿ

ಮಂಜುನಾಥ ಆರಪಲ್ಲಿ
Published 2 ಏಪ್ರಿಲ್ 2019, 19:45 IST
Last Updated 2 ಏಪ್ರಿಲ್ 2019, 19:45 IST
ಶಿರಹಟ್ಟಿ ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ಗುಳೆ ಹೋದ ಪರಿಣಾಮ ಮನೆಗಳಿಗೆ ಬೀಗ ಹಾಕಿರುವ ದೃಶ್ಯ
ಶಿರಹಟ್ಟಿ ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ಗುಳೆ ಹೋದ ಪರಿಣಾಮ ಮನೆಗಳಿಗೆ ಬೀಗ ಹಾಕಿರುವ ದೃಶ್ಯ   

ಶಿರಹಟ್ಟಿ: ಬರದ ಹಿನ್ನೆಲೆಯಲ್ಲಿ, ಉದ್ಯೋಗವಿಲ್ಲದೆ ಕೆಲಸ ಅರಸುತ್ತ ತಾಲ್ಲೂಕಿನ ಗಡಿ ಗ್ರಾಮವಾದ ಹೊಸಳ್ಳಿಯ ಯುವಕರು ಪುತ್ತೂರು, ಕುಂದಾಪೂರ, ಗೋವಾ, ಕೇರಳದತ್ತ ಗುಳೆ ಹೋಗಿದ್ದು, ಇಡೀ ಗ್ರಾಮವೇ ಜನರಿಲ್ಲದೆ ಬಿಕೋ ಎನ್ನುತ್ತಿದೆ.

ಕಳೆದ ಒಂದು ವಾರದಲ್ಲಿ ಈ ಗ್ರಾಮದಿಂದ 120ಕ್ಕೂ ಹೆಚ್ಚು ಯುವಕರು ದುಡಿಯಲು ನೆರೆಯ ರಾಜ್ಯಗಳತ್ತ ಮುಖ ಮಾಡಿದ್ದಾರೆ. ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ಮುಳುಗಿರುವುದರಿಂದ ಗುಳೆ ತಡೆಯಲು ಯಾವುದೇ ಕ್ರಮ ವಹಿಸಿಲ್ಲ ಎಂದು ದೂರುತ್ತಾರೆ ಗ್ರಾಮದಲ್ಲಿ ಉಳಿದಿರುವ ಬೆರಳೆಣಿಕೆಯ ಜನರು.

ಹೊಸಳ್ಳಿಯಲ್ಲಿ ಮೂಲಸೌಕರ್ಯ ಸಮರ್ಪಕವಾಗಿಲ್ಲ. ಗ್ರಾಮ ಪಂಚಾಯ್ತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸವಿಲ್ಲ. ಮಾಡಿದ ಕೆಲಸಕ್ಕೆ ವೇತನವೂ ಇಲ್ಲ. ನಮ್ಮ ಗ್ರಾಮ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂಬದು ಗ್ರಾಮಸ್ಥರ ಅಳಲು.‘ಗ್ರಾಮದಲ್ಲಿ ಯುಗಾದಿ ದಿನದಂದು ಜಾತ್ರೆ ಇದೆ. ಆದರೆ, ಹೊಟ್ಟೆಪಾಡಿಗೆ ದುಡಿಯಲು ಹೊರಗೆ ಹೋಗುವುದು ಅನಿವಾರ್ಯವಾಗಿರುವುದರಿಂದ ಯುವಕರೆಲ್ಲರೂ ಗ್ರಾಮ ತೊರೆಯುತ್ತಿದ್ದಾರೆ’ಎಂದು ಗ್ರಾಮದಲ್ಲಿರುವ ಕೆಲವು ವೃದ್ಧರು ಹೇಳಿದರು.

ADVERTISEMENT

ಕಡಕೋಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮ 1200 ಜನಸಂಖ್ಯೆ ಹೊಂದಿದ್ದು, 3 ಜನ ಗ್ರಾಮ ಪಂಚಾಯ್ತಿ ಸದಸ್ಯರನ್ನು ಹೊಂದಿದೆ. ಕುಗ್ರಾಮದಂತಿರುವ ಇದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯುವಲ್ಲೂ ವಿಫಲವಾಗಿದೆ.

‘ಎನ್‌ಆರ್‌ಇಜಿ ಯೋಜನೆಯಡಿ ಗುರಿ ಮೀರಿ ಸಾಧನೆ ಮಾಡಿದ್ದೇವೆ ಎಂದು ಹೇಳುವ ಅಧಿಕಾರಿಗಳು ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸಲಿ. ಕಡತಗಳಲ್ಲಿ ಮಾತ್ರ ಅಭಿವೃದ್ದಿಯಾದರೆ ಸಾಲದು. ದುಡಿಯುವ ಕೈಗಳಿಗೆ ಕೆಲಸ ನೀಡಬೇಕು’ ಎಂದು ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ನಿಂಗಪ್ಪ ಮಾಚೇನಹಳ್ಳಿ ಅಧಿಕಾರಿಗಳ ವಿರುದ್ದ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.