ಲಕ್ಷ್ಮೇಶ್ವರ: ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಬುಧವಾರ 500 ಚೀಲ ಗೊಬ್ಬರ ಮಾರಾಟ ಮಾಡಲಾಯಿತು. ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಪಿಎಸ್‍ಐ ನಾಗರಾಜ ಗಡದ ಅವರ ಸಮ್ಮುಖದಲ್ಲಿ ರೈತರು ಸರದಿ ಸಾಲಲ್ಲಿ ನಿಂತು ಗೊಬ್ಬರ ಖರೀದಿಸಿದರು.
ಪ್ರಸ್ತುತ ವರ್ಷ ತಾಲ್ಲೂಕಿನಲ್ಲಿ ಗೋವಿನಜೋಳದ ಬಿತ್ತನೆ ಪ್ರದೇಶ ಅಂದಾಜಿಗಿಂತ 3 ಸಾವಿರ ಹೆಕ್ಟೇರ್ ಹೆಚ್ಚಾಗಿದ್ದು, ಇದು ಪರೋಕ್ಷವಾಗಿ ಗೊಬ್ಬರ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ತಾಲ್ಲೂಕಿನಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಗೊಬ್ಬರ ಬೇಡಿಕೆ ಅಧಿಕವಾಗಿದೆ.
‘ಹರಳು ರೂಪದ ಯೂರಿಯಾ ಗೊಬ್ಬರ ರೈತರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಾರಣ ಕೇಂದ್ರ ಸರ್ಕಾರ ನ್ಯಾನೋ ಯೂರಿಯಾ ಬಿಡುಗಡೆ ಮಾಡಿದ್ದು, ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ನ್ಯಾನೋ ಯೂರಿಯಾ ಕುರಿತು ತಾಲ್ಲೂಕಿನಲ್ಲಿ ಪ್ರಾತ್ಯಕ್ಷಿಕೆ ನಡೆಸಿ ಅದರ ಮಹತ್ವ ಮತ್ತು ಉಪಯೋಗದ ಕುರಿತು ಸಮಗ್ರವಾಗಿ ಮಾಹಿತಿ ನೀಡಲಾಗಿದೆ. ಆದರೆ ರೈತರು ಅದರ ಬಳಕೆಗೆ ಮುಂದಾಗುತ್ತಿಲ್ಲ’ ಎಂದು ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.