
ಗಜೇಂದ್ರಗಡ: ತಾಲ್ಲೂಕಿನ ಗೋಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಸಕೊಪ್ಪ ಗ್ರಾಮದಲ್ಲಿ ಮುಖ್ಯ ಚರಂಡಿಗಳು ಹೂಳು ತುಂಬಿಕೊಂಡಿದ್ದು, ದುರ್ವಾಸನೆ ಬೀರುತ್ತಿವೆ.
ಸುಮಾರು 120 ಕುಟುಂಬಗಳಿರುವ ಚಿಕ್ಕ ಗ್ರಾಮವಾದ ನಾಗರಸಕೊಪ್ಪದಲ್ಲಿ ಬಹುತೇಕ ಓಣಿಗಳಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ ಗ್ರಾಮದ ಎರಡು ಮುಖ್ಯ ಚರಂಡಿಗಳು ಶಿಥಿಲಗೊಂಡಿದ್ದು, ಹೂಳು ತುಂಬಿಕೊಂಡು ದುರ್ವಾಸನೆ ಬೀರುತ್ತಿವೆ. ಗ್ರಾಮದಿಂದ ಬೆಣಸಮಟ್ಟಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯ ಓಣಿಯಲ್ಲಿ ಬೀದಿದೀಪಗಳು ಬೆಳಗುತ್ತಿಲ್ಲ.
ಗ್ರಾಮದಲ್ಲಿ ಸಮುದಾಯ ಶೌಚಾಲಯವಿಲ್ಲ, ಅಲ್ಲದೆ ಜನರು ವೈಯಕ್ತಿಕ ಶೌಚಾಲಯ ಬಳಸದೆ ರಸ್ತೆ ಬದಿಯಲ್ಲಿ ಬಯಲುಶೌಚಕ್ಕೆ ತೆರಳುತ್ತಿರುವುದರಿಂದ ಅಲ್ಲಿನ ನಿವಾಸಿಗಳಿಗೆ ಹಾಗೂ ಜಮೀನುಗಳಿಗೆ ತೆರಳುವ ರೈತರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಹಲವು ವರ್ಷಗಳಿಂದ ಬಳಕೆಯಾಗದೆ, ಪಾಳು ಬಿದ್ದಿದೆ. ಅಲ್ಲದೆ ಗಜೇಂದ್ರಗಡ-ಕುಷ್ಟಗಿ ಮುಖ್ಯ ರಸ್ತೆಯಿಂದ ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು, ಪಾದಚಾರಿಗಳು ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿದೆ.
‘ನಾಗರಸಕೊಪ್ಪ ಗ್ರಾಮದಲ್ಲಿ ವರ್ಷಕ್ಕೆ ಎರಡು ಬಾರಿ ಮುಖ್ಯ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿಯೂ ಸ್ವಚ್ಛತೆ ಮಾಡಿಸಲಾಗುತ್ತಿದೆ. ಬೀದಿದೀಪಗಳು ಬೆಳಗದ ಸ್ಥಳಗಳಲ್ಲಿ ದುರಸ್ತಿ ಮಾಡಿಸಲಾಗುವುದು’ ಎಂದು ಗೋಗೇರಿ ಗ್ರಾಮ ಪಂಚಾಯಿತಿ ಪಿಡಿಒ ಶರಣಪ್ಪ ನರೇಗಲ್ಲ ತಿಳಿಸಿದ್ದಾರೆ.
ನಿಲುಗಡೆಯಾಗದ ಬಸ್‌ಗಳು: ನಾಗರಸಕೊಪ್ಪ ಗ್ರಾಮದಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಗಜೇಂದ್ರಗಡ ಪಟ್ಟಣಕ್ಕೆ ತೆರಳುತ್ತಿದ್ದಾರೆ. ಆದರೆ ಗಜೇಂದ್ರಗಡ-ಕುಷ್ಟಗಿ ಮುಖ್ಯರಸ್ತೆಯಲ್ಲಿ ಬಸ್‌ಗಳು ನಿಲುಗಡೆಯಾಗುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಗೋಗೇರಿ ಗ್ರಾಮಕ್ಕೆ ತೆರಳಿ ಅಲ್ಲಿಂದ ಬಸ್‌ನಲ್ಲಿ ತೆರಳಬೇಕು. ಇಲ್ಲವೇ ಖಾಸಗಿ ವಾಹನಗಳಲ್ಲಿ ತೆರಳುವಂತ ದುಃಸ್ಥಿತಿಯಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರು ಗಜೇಂದ್ರಗಡ-ಕುಷ್ಟಗಿ ಮುಖ್ಯರಸ್ತೆಯಿಂದ ನಾಗರಸಕೊಪ್ಪ ಗ್ರಾಮದವರೆಗೆ ಸಿಸಿ ರಸ್ತೆ ನಿರ್ಮಿಸುವ ಭರವಸೆ ನೀಡಿದ್ದಾರೆ. ಗ್ರಾಮದಲ್ಲಿನ ಮುಖ್ಯ ಚರಂಡಿಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದುವಿಜಯಲಕ್ಷ್ಮೀ ಮುತ್ತಣ್ಣ ಲ್ಯಾವಕ್ಕಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಗೋಗೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.