ಗದಗ: ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಅ.6ರಿಂದ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಶುಕ್ರವಾರ ನಡೆದ ಬೃಹತ್ ಪ್ರತಿಭಟನೆಯೊಂದಿಗೆ ಅಂತ್ಯಗೊಂಡಿತು.
ಮುಂದಿನ 15 ದಿನಗಳಲ್ಲಿ ಬಂಜಾರರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸದೇ ಇದ್ದಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು.
ಗೋರ ನಸಾಬ್‌ನಲ್ಲಿ (ಮಹಾ ನ್ಯಾಯ ಪಂಚಾಯಿತಿ) ನಿರ್ಣಯಿಸಿದ ನಿರ್ಣಯಗಳಿಗೆ ರಾಜ್ಯ ಸರ್ಕಾರ ಮನ್ನಣೆ ನೀಡದಿದ್ದರೆ ರಾಜ್ಯದ ಎಲ್ಲ ಜಿಲ್ಲೆಗಳ ಬಂಜಾರರು ಹಾಗೂ ಅವೈಜ್ಞಾನಿಕ ಮೀಸಲಾತಿಯಿಂದ ಬಾಧಿತರಾಗಿರುವ ಇತರೆ ಸಮುದಾಯಗಳೊಂದಿಗೆ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದು, ತಾಂಡಾಗಳಿಗೆ ಜನಪ್ರತಿನಿಧಿಗಳ ಪ್ರವೇಶ ನಿಷೇಧ ಹಾಗೂ ಹೆದ್ದಾರಿ ತಡೆ ಚಳವಳಿ ನಡೆಸುವ ಎಚ್ಚರಿಕೆ ಕೊಟ್ಟರು.
ಶುಕ್ರವಾರ ಜಿಲ್ಲೆಯ 72 ತಾಂಡಾಗಳ ಪೈಕಿ ನಾಯಕ, ಡಾವ್, ಕಾರಭಾರಿ, ಪಂಚರು ಹಾಗೂ ವಿವಿಧ ಸಮಾಜ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಬಂಜಾರ ಸಮುದಾಯದ ಜನರು ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ವಿರುದ್ಧ ಘೋಷಣೆ ಕೂಗಿದರು.
ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ ಅಂಗಡಿ ಮಾತನಾಡಿ, ‘ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ 12 ದಿನಗಳ ಕಾಲ ಜಿಲ್ಲೆಯ 72 ತಾಂಡಾಗಳ ಹಿರಿಯರ ನೇತೃತ್ವದಲ್ಲಿ ವಿವಿಧ ರೀತಿಯ ಪ್ರತಿಭಟನೆ ಮಾಡಲಾಯಿತು. ಆದರೆ, ಸರ್ಕಾರದಿಂದ ಈವರೆಗೆ ಯಾವ ಪ್ರತಿಕ್ತಿಯೆಯೂ ಬಂದಿಲ್ಲ. ಆದಕಾರಣ, ಗೋರ ನಸಾಬ್ (ಮಹಾ ಪಂಚಾಯಿತಿ) ಹಮ್ಮಿಕೊಂಡಿದ್ದು, ಇಲ್ಲಿ ತಗೆದುಕೊಳ್ಳುವ ನಿರ್ಣಯಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ತಿಳಿಸಿದರು.
ಮಾಜಿ ಶಾಸಕ ಪಿ.ರಾಜೀವ ಮಾತನಾಡಿ, ‘ಸರ್ಕಾರದ ನಿರ್ಧಾರದಿಂದ ಬಂಜಾರ ಸಮುದಾಯದಲ್ಲಿ ಆತಂಕ ಮೂಡಿದೆ. ನಮ್ಮ ಸಮಾಜ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದೆ’ ಎಂದರು.
ಲಿಂಗಸಗೂರಿನ ಸಿದ್ಧಲಿಂಗ ಸ್ವಾಮೀಜಿ, ಕುಮಾರ ಮಹಾರಾಜ, ಪ್ರಕಾಶ ಮಹಾರಾಜ, ತಿಪ್ಪೆಸ್ವಾಮಿ, ಕೊಪ್ಪಳದ ಬಾಬಾ ಗೋಸಾಯಿ, ಗಂಗಾನಾಯ್ಕ, ರಾಮಾನಾಯ್ಕ, ಸುರೇಶ ಬಳೂಟಗಿ, ಭರತ್ ನಾಯ್ಕ, ಆನಂದ ಅಂಗಡಿ, ಲೋಕೇಶ್ವರ ನಾಯ್ಕ, ಸುರೇಶ ರಜಪೂತ, ಸೋಮು ನಾಯ್ಕ ಸೇರಿದಂತೆ ಜಿಲ್ಲೆಯ 72 ತಾಂಡಾಗಳ ನಾಯಕ, ಡಾವ್, ಕಾರಭಾರಿ ಹಾಗೂ ವಿವಿಧ ಜಿಲ್ಲೆಯ ಬಂಜಾರ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬಂಜಾರ ಸಮಾಜವು ಈ ಹಿಂದಿನ ಬಿಜೆಪಿ ಸರ್ಕಾರ ಬಹಿಷ್ಕರಿಸಿ ಸಂಪೂರ್ಣ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿತು. ಆದರೂ ಈ ಸರ್ಕಾರ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದೆಡಾ.ಚಂದ್ರು ಲಮಾಣಿ ಶಾಸಕ
ಸರ್ಕಾರದ ಒಳಮೀಸಲಾತಿ ವರ್ಗೀಕರಣವು ಅವೈಜ್ಞಾನಿಕವಾಗಿದೆ. ಅಲ್ಲದೇ ಬಂಜಾರ ಸಮಾಜದ ಶಿಕ್ಷಣ ಉದ್ಯೋಗ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಅಂಕಿ ಅಂಶಗಳು ವಾಸ್ತವಿಕತೆಗೆ ದೂರವಾಗಿವೆಕೆ.ಬಿ.ಅಶೋಕ ನಾಯ್ಕ ಮಾಜಿ ಶಾಸಕ
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವುದನ್ನು ಬಿಟ್ಟು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ಕಾಂಗ್ರೆಸ್ ಸರ್ಕಾರ ಬಂಜಾರ ಜನಾಂಗಕ್ಕೆ ಕಡಿಮೆ ಮೀಸಲಾತಿ ನೀಡಿ ಅನ್ಯಾಯ ಮಾಡಿದೆಸುಭಾಶ ರಾಠೋಡ ನಿವೃತ್ತ ನ್ಯಾಯಾಧೀಶ
ತಾಂಡಾ ಜನರು ಅನ್ಯ ರಾಜ್ಯಗಳಿಗೆ ಹೊಟ್ಟೆಪಾಡಿಗಾಗಿ ವಲಸೆ ಹೋಗುತ್ತಾರೆ. ಆದರೂ ಈ ಸರ್ಕಾರ ನಮ್ಮ ಸಮಾಜದ ಜನರಿಗೆ ಮರಣ ಶಾಸನ ವಿಧಿಸಿ ಮತ್ತೇ 50 ವರ್ಷಗಳಷ್ಟು ಹಿಂದಕ್ಕೆ ದೂಡಿದೆಉಮೇಶ ಜಾಧವ ಮಾಜಿ ಸಂಸದ
ಗೋರ ನಸಾಬ್ ನಿರ್ಣಯಗಳು
• ಸ್ಪೃಶ್ಯ-ಅಸ್ಪೃಶ್ಯ ಎಂಬ ಅಸಾಂವಿಧಾನಿಕ ಪದ ಬಳಕೆಯನ್ನು ಕಡತದಿಂದ ತೆಗೆದುಹಾಕಿ ದಮನಿತ ಅಥವಾ ವಿಮುಕ್ತ ಜಾತಿಗಳೆಂದು ನಮೂದಿಸಬೇಕು
• ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು. ಅಲೆಮಾರಿಗಳನ್ನು ಹೊರತುಪಡಿಸಿ ಬಂಜಾರ ಭೋವಿ ಕೊರಚ ಕೊರಮ ಸಮುದಾಯಗಳಿಗೆ ಶೇ 6 ಮೀಸಲಾತಿ ನೀಡಬೇಕು
• ಅಲೆಮಾರಿಗಳಿಗೂ ಪ್ರತ್ಯೇಕ ಶೇ 1 ಮೀಸಲಾತಿ ನೀಡಬೇಕು
• ಖಾಸಗಿ ಉದ್ಯೋಗದಲ್ಲಿ ಕೂಡ ಮೀಸಲಾತಿ ಕಲ್ಪಿಸಬೇಕು
• ವಲಸೆ ಹೋದವರ ಮಾಹಿತಿ ಮತ್ತು ನಗರ ಪ್ರದೇಶದ ಜನರ ಅಪೂರ್ಣ ಮಾಹಿತಿಯೊಂದಿಗೆ ನಡೆದ ನ್ಯಾ. ನಾಗಮೋಹನದಾಸ್ ವರದಿಯನ್ನು ತಿರಸ್ಕರಿಸಿ ಕೇಂದ್ರ ಸರ್ಕಾರ ನಡೆಸುವ ಜಾತಿಗಣತಿವರೆಗೆ ಒಳಮೀಸಲಾತಿ ವರ್ಗೀಕರಣ ಆದೇಶವನ್ನು ರಾಜ್ಯ ಸರ್ಕಾರ ತಡೆಹಿಡಿಯಬೇಕು
* ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪರಿಶಿಷ್ಟ ಶಾಶ್ವತ ಆಯೋಗದಲ್ಲಿ ಬಂಜಾರರಿಗೆ ಪ್ರಾತಿನಿಧ್ಯ ನೀಡಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.