ADVERTISEMENT

ಕನ್ನಡ ಶಾಲೆಗಳ ಸಂಖ್ಯೆ ಹೆಚ್ಚಲಿ: ಸಾಹಿತಿ ಚಂದ್ರಶೇಖರ ವಸ್ತ್ರದ ಆಶಯ

ರಾಜ್ಯಮಟ್ಟದ ವಿಶೇಷ ಕಮ್ಮಟ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 4:40 IST
Last Updated 22 ನವೆಂಬರ್ 2025, 4:40 IST
ನರೇಗಲ್‌ ಪಟ್ಟಣದ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ  ಕಮ್ಮಟವನ್ನು ಗಣ್ಯರು ಉದ್ಘಾಟಿಸಿದರು
ನರೇಗಲ್‌ ಪಟ್ಟಣದ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ  ಕಮ್ಮಟವನ್ನು ಗಣ್ಯರು ಉದ್ಘಾಟಿಸಿದರು   

ನರೇಗಲ್: ‘ಕನ್ನಡ ನಾಡಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಸಂಖ್ಯೆ ಕುಸಿಯುತ್ತಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಬದ್ಧತೆಯಿಂದ ಕನ್ನಡ ಶಾಲೆಗಳ ಸಂಖ್ಯೆ ಹೆಚ್ಚಲು ಶ್ರಮಿಸಬೇಕು’ ಎಂದು ಸಾಹಿತಿ ಚಂದ್ರಶೇಖರ ವಸ್ತ್ರದ ಹೇಳಿದರು.

ಪಟ್ಟಣದ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅನ್ನದಾನೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಬಿಸಿಎ ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ,  ಐ.ಕ್ಯು.ಎ.ಸಿ ಹಾಗೂ ಕನ್ನಡ ವಿಭಾಗದ ವತಿಯಿಂದ ಶುಕ್ರವಾರ ನಡೆದ ರಾಜ್ಯಮಟ್ಟದ ವಿಶೇಷ ಕಮ್ಮಟಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಕಲಿಕೆ ಎಂದಿಗೂ ಹಾಸ್ಯಾಸ್ಪದ ಆಗಬಾರದು. ಅದು, ಜೀವನಕ್ಕೆ ಬೆಳಕು ನೀಡುವಂತಿರಬೇಕು. ಓದದಿದ್ದರೂ, ಬರೆಯದಿದ್ದರೂ ರೈತರು ನಮಗೆಲ್ಲ ಅನ್ನ ನೀಡುತ್ತಾನೆ. ಅವರದು ಬದುಕಿನ ಭಾಷೆ. ಅಂತಹ ಭಾಷೆ ನಮ್ಮ ಮಕ್ಕಳ ಪ್ರೇರಣೆ ಆಗಬೇಕು. ಮಕ್ಕಳ ಮನದಲ್ಲಿ ಭಾಷೆ ಅಚ್ಚೊತ್ತುವಂತೆ ಕಲಿಸಬೇಕು ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಬಿ.ಎಫ್. ಚೇಗರೆಡ್ಡಿ, ‘ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದರೂ ಸಾಕಷ್ಟು ಅನುದಾನವಾಗಲೀ, ಸೌಕರ್ಯವಾಗಲಿ ದೊರೆತಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಕನ್ನಡಕ್ಕೆ ಸಿಗಬೇಕಾದ ಸೌಲಭ್ಯಗಳಿಗೆ ಶ್ರಮಿಸಬೇಕು’ ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯೆ ದಾಕ್ಷಾಯಣಿ ಹುಡೇದ ಆಶಯ ನುಡಿಗಳನ್ನಾಡಿದರು.

ನಿವೃತ್ತ ಪ್ರಾಚಾರ್ಯ ಹೊಳಿಯಪ್ಪ ಯಲಬುರ್ಗಿ, ಪ್ರಾಚಾರ್ಯ ಎಸ್. ಜಿ. ಕೇಶಣ್ಣವರ, ಪುಂಡಲೀಕ ಮಾದರ, ಕಲ್ಲಯ್ಯ ಹಿರೇಮಠ, ಐಕ್ಯುಎಸಿ ಸಂಯೋಜಕ ಡಿ. ಎಲ್. ಪವಾರ ಇದ್ದರು. 

‘ಆಯೋಗದ ವರದಿ ಜಾರಿಯಾಗಲಿ’

‘ನಾವು ನವೆಂಬರ್ ಒಂದರ ಕನ್ನಡಿಗರಾಗಬಾರದು. ಅದೊಂದೇ ದಿನ ಕನ್ನಡದ ಬಗ್ಗೆ ಮಾತನಾಡಿ ನಂತರ ಅದನ್ನು ಮರೆಯುವುದನ್ನು ಸಹಿಸಲಾಗದು. ಕನ್ನಡ ಶಬ್ದಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ವಿವಿಧ ಆಯೋಗಗಳು ಮಂಡನೆ ಮಾಡಿರುವ ವರದಿಗಳನ್ನು ಅನುಷ್ಠಾನಕ್ಕೆ ತರಬೇಕು. ಆಗ ಕನ್ನಡಕ್ಕೆ ಮಹತ್ವದ ಸ್ಥಾನ ದೊರೆಯುತ್ತದೆ. ಕನ್ನಡ ಉಸಿರಲ್ಲಿ ಬೆರೆತಾಗ ಚಿರಸ್ಥಾಯಿ ಆಗುತ್ತದೆ’ ಎಂದು ಸಾಹಿತಿ ಚಂದ್ರಶೇಖರ ವಸ್ತ್ರದ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.