ಗದಗ: ‘26ನೇ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ಅರೆಸೇನಾ ಪಡೆಗಳ ಯೋಧರು, ವೀರನಾರಿಯರ ಸಹಯೋಗದಲ್ಲಿ ಜುಲೈ 26ರಂದು ಬೆಳಿಗ್ಗೆ 11ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ರಕ್ತದಾನ ಶಿಬಿರ ಮತ್ತು ಹುತಾತ್ಮ ವೀರಯೋಧರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸಲಿಂಗಪ್ಪ ಮುಂಡರಗಿ ತಿಳಿಸಿದರು.
‘1999ರ ಕಾರ್ಗಿಲ್ ಯುದ್ಧ, 1961ರ ಭಾರತ-ಚೀನಾ ಯುದ್ಧ ಹಾಗೂ 1971ರಲ್ಲಿ ಭಾರತ-ಪಾಕಿಸ್ತಾನ ನಡುವೆ ನಡೆದ ಯುದ್ಧದ ಸನ್ನಿವೇಶಗಳನ್ನು ಮೆಲುಕು ಹಾಕುವುದರ ಜತೆಗೆ ಯುವಕರಿಗೆ ದೇಶಭಕ್ತಿ, ದೇಶಪ್ರೇಮ ಅರಿವು ಮೂಡಿಸಲಾಗುತ್ತದೆ. ಇದೇ ಸಂದರ್ಭದಲ್ಲಿ 1971ರಲ್ಲಿ ನಡೆದ ಯುದ್ಧದಲ್ಲಿ ಭಾಗಿಯಾಗಿದ್ದ 12 ಜನ ಮಾಜಿ ಯೋಧರಿಗೆ ಸನ್ಮಾನ ನಡೆಯಲಿದೆ’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನರಗುಂದ ಪತ್ರಿವನ ಮಠದ ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಜಿ.ಎಸ್. ಪಾಟೀಲ, ಶಾಸಕರಾದ ಸಿ.ಸಿ.ಪಾಟೀಲ, ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, 38 ಕೆಎಆರ್ ಎನ್‍ಸಿಸಿ ಕರ್ನಲ್ ಭುವನ್ ಖರೆ ಹಾಗೂ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ರಾಜ್ಯ ಘಟಕದ ಅಧ್ಯಕ್ಷ ಡಾ. ಶಿವಣ್ಣ ಎನ್.ಕೆ. ಪಾಲ್ಗೊಳ್ಳುವರು’ ಎಂದು ತಿಳಿಸಿದರು.
ಮಾಜಿ ಯೋಧರಾದ ಚಂದ್ರಶೇಖರಪ್ಪ ಬಿಳೆಯಲಿ, ನಿಂಗಪ್ಪ ಚೋರಗಸ್ತಿ, ವಸಂತ ವಾಲ್ಮೀಕಿ, ಸಂಗಪ್ಪ ಗೊಂದಿ, ಪ್ರಕಾಶಪ್ಪ ಬಂಡಿಹಾಳ, ಚನ್ನಪ್ಪ ಹೊಸಮನಿ ಇದ್ದರು.
ಕಾರ್ಗಿಲ್ ವಿಜಯೋತ್ಸವವನ್ನು ಈವರೆಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಅರೆಸೇನಾ ಪಡೆಗಳ ಯೋಧರು ವೀರನಾರಿಯರ ನೇತೃತ್ವದಲ್ಲಿ ಆಚರಿಸಿಕೊಂಡು ಬರಲಾಗುತ್ತಿದ್ದು ಸರ್ಕಾರ ವತಿಯಿಂದ ಆಚರಣೆ ಮಾಡಬೇಕುಬಸಲಿಂಗಪ್ಪ ಮುಂಡರಗಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.