ADVERTISEMENT

ರೈತರು ಕಷ್ಟದಲ್ಲಿದ್ದರೆ ಸಿದ್ದರಾಮಯ್ಯ ಡ್ಯಾನ್ಸ್‌ ಮಾಡ್ತಿದ್ದಾರೆ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2023, 12:37 IST
Last Updated 4 ನವೆಂಬರ್ 2023, 12:37 IST
ಶ್ರೀರಾಮುಲು ಮತ್ತು ಸಿದ್ದರಾಮಯ್ಯ
ಶ್ರೀರಾಮುಲು ಮತ್ತು ಸಿದ್ದರಾಮಯ್ಯ    

ಗದಗ: ‘ರಾಜ್ಯದ ರೈತರು ಬರದ ಸಂಕಷ್ಟದಲ್ಲಿ ಬೇಯುತ್ತಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಣಿದು ಕುಪ್ಪಳಿಸುತ್ತಿದ್ದಾರೆ’ ಎಂದು ಮಾಜಿ ಸಚಿವ ಶ್ರೀರಾಮುಲು ಕಿಡಿಕಾರಿದರು.

ಹಂಪಿಯಲ್ಲಿ ಈಚೆಗೆ ನಡೆದ ‘ಕರ್ನಾಟಕ ಸಂಭ್ರಮ–50’ರ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಡಾನ್ಸ್‌ ಮಾಡಿದ್ದಕ್ಕೆ ಅವರು ಶನಿವಾರ ನಗರದಲ್ಲಿ ಈ ರೀತಿ ಲೇವಡಿ ಮಾಡಿದರು.

‘ಬರದ ಕಾರಣ ಬೆಳೆಹಾನಿಯಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೆಲಸವಿಲ್ಲದೇ ಗುಳೆ ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಏನೂ ಆಗಿಲ್ಲ ಎಂಬ ಸಂತೋಷದಲ್ಲಿ ಇದ್ದಾರೆ. ಈ ಸರ್ಕಾರದ ಬಗ್ಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ’ ಎಂದು ಹರಿಹಾಯ್ದರು.

ADVERTISEMENT

‘ಒಂದು ವೇಳೆ ಬೇರೆ ಪಕ್ಷದ ಮುಖ್ಯಮಂತ್ರಿ ಅಥವಾ ಸಚಿವರು ಈ ರೀತಿ ಕುಣಿದು ಕುಪ್ಪಳಿಸಿದ್ದರೆ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದರು’ ಎಂದು ಟೀಕಿಸಿದರು.

‘ಸಿದ್ದರಾಮಯ್ಯ ಅವರು ಒಂದು ಐದು ವರ್ಷ ನಾನೇ ಸಿಎಂ ಎನ್ನುತ್ತಾರೆ. ಮತ್ತೊಂದು ಜಿಲ್ಲೆಗೆ ಹೋದಾಗ, ಹೈಕಮಾಂಡ್ ಹೇಳಿದ್ದಕ್ಕೆ ಬದ್ಧವಾಗಿರುತ್ತೇವೆ ಎನ್ನುತ್ತಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಿಎಂ ಕುರ್ಚಿ ಮೇಲೆ ಕಣ್ಣಾಕಿದ್ದಾರೆ. ಜಿ.ಪರಮೇಶ್ವರ ದಲಿತ ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಬರದ ಸಂಕಷ್ಟದಲ್ಲಿರುವ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರಗಳಿವು’ ಎಂದು ಹೇಳಿದರು.

‘ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಪರೀಕ್ಷೆಯಲ್ಲಿ ಅಕ್ರಮ ನಡೆದಾಗ ಸಣ್ಣ ಖರ್ಗೆ ಬೊಬ್ಬೆ ಹೊಡೆದರು. ಈಗ ಅವರದ್ದೇ ಸರ್ಕಾರ ಇದೆ. ಈಚೆಗೆ ನಡೆದ ನೇಮಕಾತಿ ಪರೀಕ್ಷೆಯಲ್ಲೂ ಮತ್ತೇ ಅಕ್ರಮ ನಡೆದಿದೆ. ಭ್ರಷ್ಟಾಚಾರ ನಡೆಸಿ ಹಣ ಸಂಗ್ರಹಿಸಿ ಎಲ್ಲ ರಾಜ್ಯಗಳಿಗೂ ಕಳಿಸಬೇಕು ಎಂದು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ’ ಎಂದು ಆರೋಪ ಮಾಡಿದರು.

‘ಪಂಚ ರಾಜ್ಯಗಳಲ್ಲಿ ಚುನಾವಣೆ ಇರುವುದರಿಂದ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆ ನಡೆದಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ’ ಎಂದರು.

‘ನೀವು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಪ್ರಯತ್ನ ಮಾಡಿದೆ. ಆಗಲ್ಲ ಅಂತ ಗೊತ್ತಾಗಿ ಬಿಟ್ಟುಬಿಟ್ಟೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.