ADVERTISEMENT

ಮಾತು, ಕೃತಿಯ ನಡುವೆ ಅಂತರವಿಲ್ಲ: ಬಸವರಾಜ ಹೊರಟ್ಟಿ

ವಿಧಾನ ಪರಿಷತ್‌ ಪ್ರವೇಶಿಸಿ 41 ವರ್ಷಗಳ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 16:13 IST
Last Updated 30 ಜುಲೈ 2021, 16:13 IST
‘ಬಸವರಾಜ ಹೊರಟ್ಟಿ ವಿಧಾನ ಪರಿಷತ್‌ ಪ್ರವೇಶಕ್ಕೆ 41ನೇ ವರ್ಷದ ಸಂಭ್ರಮ’ ಕಾರ್ಯಕ್ರಮಕ್ಕೆ ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಚಾಲನೆ ನೀಡಿದರು
‘ಬಸವರಾಜ ಹೊರಟ್ಟಿ ವಿಧಾನ ಪರಿಷತ್‌ ಪ್ರವೇಶಕ್ಕೆ 41ನೇ ವರ್ಷದ ಸಂಭ್ರಮ’ ಕಾರ್ಯಕ್ರಮಕ್ಕೆ ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಚಾಲನೆ ನೀಡಿದರು   

ಗದಗ: ‘ನನ್ನ ಮಾತು ಮತ್ತು ಕೃತಿಯ ನಡುವೆ ಅಂತರವಿಲ್ಲ. ಮೊದಲ ಬಾರಿಗೆ ವಿಧಾನ ಪರಿಷತ್‌ ಪ್ರವೇಶಿಸಿದಾಗ ಕೊಟ್ಟ ಮಾತಿನಂತೆ ಶಿಕ್ಷಕರ‌ ಮನಸ್ಸಿಗೆ ಎಂದಿಗೂ ನೋವುಂಟು ಮಾಡುವುದಿಲ್ಲ‌’ ಎಂದು ವಿಧಾನ ‍‍ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ‘ಬಸವರಾಜ ಹೊರಟ್ಟಿ ವಿಧಾನ ಪರಿಷತ್‌ ಪ್ರವೇಶಕ್ಕೆ 41ನೇ ವರ್ಷದ ಸಂಭ್ರಮ’ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಹಿಂದೆ ಶಿಕ್ಷಕರ ಬದುಕು ಕಷ್ಟದಲ್ಲಿತ್ತು. ಉದ್ಯೋಗ ಭದ್ರತೆಯೂ ಇರಲಿಲ್ಲ. ಶಿಕ್ಷಕರನ್ನು ನಡೆಸಿಕೊಳ್ಳುತ್ತಿದ್ದ ರೀತಿ ನೋಡಿದಾಗ ಸಂಕಟವಾಗುತ್ತಿತ್ತು. ಇದನ್ನು ನಿವಾರಿಸಲೆಂದೇ ಎಲ್ಲರನ್ನೂ ಒಗ್ಗೂಡಿಸಿ ಶಿಕ್ಷಕರ ಸಂಘ ಕಟ್ಟಲಾಯಿತು. ಶಿಕ್ಷಕರ ಧ್ವನಿಯಾಗಿ ನಿಲ್ಲಲು ವಿಧಾನ ಪರಿಷತ್‌ ಪ್ರವೇಶಿಸುವ ಅವಕಾಶ ಕೂಡ ಸಿಕ್ಕಿತು. ಅಂದಿನಿಂದ ಇಂದಿನವರೆಗೂ ಶಿಕ್ಷಕರ ಪ್ರೀತಿ ನನ್ನ ಮೇಲಿದೆ. ನಾನು ಸಹ ಶಿಕ್ಷಕರ ನಂಬಿಕೆ ಕಳೆದುಕೊಳ್ಳದಂತೆ ನಡೆದುಕೊಂಡಿದ್ದೇನೆ. ಒಬ್ಬ ಶಿಕ್ಷಕ ಒಂದು ವೋಟು ಹಾಕಿ ನನ್ನನ್ನು ಗೆಲ್ಲಿಸಿದರೆ ಅವರಿಗಾಗಿ ನಾನು ಆರು ವರ್ಷಗಳ ಕಾಲ ಬದ್ಧತೆಯಿಂದ ಕೆಲಸ ಮಾಡಿದ್ದೇನೆ’ ಎಂದು ಹೇಳಿದರು.

ADVERTISEMENT

‘ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕರು ಇಂದಿಗೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶಿಕ್ಷಕರ ಪ್ರತಿನಿಧಿಯಾಗಿ ನನ್ನ ಕೆಲಸಗಳು ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ನಡೆದುಕೊಳ್ಳುತ್ತೇನೆ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಮಾತನಾಡಿ, ‘ಬಸವರಾಜ ಹೊರಟ್ಟಿ ಸಭಾಪತಿ ಸ್ಥಾನ ಅಲಂಕರಿಸಲು ಯಾವುದೇ ಲಾಬಿ ಮಾಡಿಲ್ಲ. ಅವರ ಸಾಮರ್ಥ್ಯ, ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಆ ಸ್ಥಾನವೇ ಅವರ ಮನೆ ಬಾಗಿಲಿಗೆ ಹುಡುಕಿಕೊಂಡು ಬಂತು’ ಎಂದು ಹೇಳಿದರು.

‘ಒಬ್ಬ ವ್ಯಕ್ತಿ ಏಳು ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗುವುದು ಸಾಮಾನ್ಯದ ಮಾತಲ್ಲ. ಅವರುಕೊಟ್ಟ ಮಾತಿನಂತೆ ನಡೆದ ಕಾರಣ ನಿರಂತರವಾಗಿ ಆಯ್ಕೆ ಆಗಿ ದಾಖಲೆ ನಿರ್ಮಿಸಿದರು’ ಎಂದು ಹೇಳಿದರು.

ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ. ಬಸವರಾಜ ಧಾರವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ಕನಕದಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಬಿ.ಎಫ್‌.ದಂಡಿನ, ಕರ್ನಾಟಕ ರಾಜ್ಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಕಾರ್ಯದರ್ಶಿ ಎಂ.ಎನ್‌.ಚಂದ್ರೇಗೌಡ, ಡಿ.ಬಿ.ಹುಯಿಲಗೋಳ, ಸರಫರಾಜ ಉಮಚಗಿ, ಬಸವರಾಜ ನೆಲವಿಗಿ, ರವಿ ಮೂಲಿಮನಿ, ಜಿ.ಆರ್‌.ಭಟ್‌, ಡಾ.ಶರಣು ಗೋಗೇರಿ, ವಿವೇಕಾನಂದಗೌಡ ಪಾಟೀಲ ಇದ್ದರು.

ಸಭಾ ಕಾರ್ಯಕ್ರಮದ ನಂತರ ಬಸವರಾಜ ಹೊರಟ್ಟಿ ಅವರು ಶಿಕ್ಷಕರೊಂದಿಗೆ ಸಂವಾದ ನಡೆಸಿದರು.

ಸರ್ಕಾರಕ್ಕೆ ನಿರ್ದೇಶನ ನೀಡಿ: ಸಂಕನೂರ
‘ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ಇವೆ. ಅವು ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಡಲೇ ನಿವಾರಿಸದಿದ್ದರೆ ಉಳಿಯುವುದೇ ಕಷ್ಟ’ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಆತಂಕ ವ್ಯಕ್ತಪಡಿಸಿದರು.

‘ನಿವೃತ್ತಿಯಿಂದ ತೆರವಾದ ಹುದ್ದೆಗಳ ಭರ್ತಿ, 1995ರ ನಂತರ ಪ್ರಾರಂಭಗೊಙಡ ಶಾಲೆಗಳಿಗೆ ಅನುದಾನ, 2006ರ ನಂತರ ನೇಮಕ ಆದವರಿಗೆ‌ ಪಿಂಚಣಿ ಸೌಲಭ್ಯ ಹೀಗೆ ಹಲವಾರು ಜ್ವಲಂತ ಸಮಸ್ಯೆಗಳು ಇನ್ನೂ ಉಳಿದುಕೊಂಡಿವೆ. ಈ ವಿಷಯದ ಬಗ್ಗೆ ಸದನದೊಳಗೆ ಚರ್ಚೆ ಆಗುವಾಗ ಸಮಸ್ಯೆ ಪರಿಹರಿಸುವಂತೆ ಸರ್ಕಾರಕ್ಕೆ‌ ಮಾರ್ಗದರ್ಶನ ಮಾಡಬೇಕು’ ಎಂದು ಅವರು ಮನವಿ ಮಾಡಿದರು.

ಶಿಕ್ಷಣ ಕ್ಷೇತ್ರದಿಂದ ಸಭಾಪತಿ ಹುದ್ದೆಗೆ ಏರಿದ ಬಸವರಾಜ ಹೊರಟ್ಟಿ ಅವರದ್ದು ಬಹುಮುಖ ವ್ಯಕ್ತಿತ್ವ. ಅಭಿಮಾನಿಗಳು ಪ್ರೀತಿಯ ತೋರಣದಿಂದ‌ ಅವರ ಕೊರಳು ತುಂಬಿಸಿದ್ದಾರೆ.
-ಶಶಿ‌ ಸಾಲಿ, ಅವ್ವ ಸೇವಾ ಟ್ರಸ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.