ADVERTISEMENT

ಕರ್ನಾಟಕ ಸಂಭ್ರಮ 52; ಸಂಗೀತದಲ್ಲಿ ಕರುನಾಡ ವೈಭವ: ಎಚ್‌.ಕೆ. ಪಾಟೀಲ ಚಾಲನೆ

ಕನ್ನಡ ನಾಡು, ನುಡಿಯ ಸಂಗೀತ ಕಾರ್ಯಕ್ರಮ: ಸಚಿವ ಎಚ್‌.ಕೆ. ಪಾಟೀಲ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 8:27 IST
Last Updated 5 ನವೆಂಬರ್ 2025, 8:27 IST
ಗದಗ ನಗರದ ಪಂಡಿತ್‌ ಭೀಮಸೇನ ಜೋಶಿ ರಂಗ ಮಂದಿರದಲ್ಲಿ ನಡೆದ ಕರ್ನಾಟಕ ಸಂಭ್ರಮ–52 ಸಂಗೀತ ಕಾರ್ಯಕ್ರಮವನ್ನು ಸಚಿವ ಎಚ್‌.ಕೆ. ಪಾಟೀಲ ಉದ್ಘಾಟಿಸಿದರು
ಗದಗ ನಗರದ ಪಂಡಿತ್‌ ಭೀಮಸೇನ ಜೋಶಿ ರಂಗ ಮಂದಿರದಲ್ಲಿ ನಡೆದ ಕರ್ನಾಟಕ ಸಂಭ್ರಮ–52 ಸಂಗೀತ ಕಾರ್ಯಕ್ರಮವನ್ನು ಸಚಿವ ಎಚ್‌.ಕೆ. ಪಾಟೀಲ ಉದ್ಘಾಟಿಸಿದರು   

ಗದಗ: ‘ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಗದಗ ನಗರದಲ್ಲಿ ‘ಕರ್ನಾಟಕ ಸಂಭ್ರಮ-50’ ಕಾರ್ಯಕ್ರಮವನ್ನು ಎರಡು ವರ್ಷಗಳ ಹಿಂದೆ ಅದ್ದೂರಿಯಾಗಿ ಆಚರಿಸಲಾಗಿತ್ತು. ಪ್ರಸ್ತುತ ಕರ್ನಾಟಕ ಸಂಭ್ರಮ–52ರ ಅಂಗವಾಗಿ ನಾವು ಮತ್ತೆ ಕನ್ನಡ ನಾಡು, ನುಡಿ ವೈಭವವನ್ನು ಸಂಗೀತದಲ್ಲಿ ಆಸ್ವಾದಿಸುವ ಅವಕಾಶ ಸಿಕ್ಕಿದೆ’ ಎಂದು ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗದಗ ನಗರಸಭೆ ವತಿಯಿಂದ ನಗರದ ಪಂಡಿತ್‌ ಭೀಮಸೇನ ಜೋಶಿ ರಂಗಮಂದಿರದಲ್ಲಿ ಆಯೋಜಿಸಿದ್ದ ‘ಕರ್ನಾಟಕ ಸಂಭ್ರಮ 52’– ಕನ್ನಡ ನಾಡು, ನುಡಿಯ ಕುರಿತಾದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕನ್ನಡ ನಾಡು ನುಡಿಯ ಸೊಗಸು, ಅದರ ಸಂಗೀತದ ಸ್ಪಂದನೆ, ನಮ್ಮ ಸಂಸ್ಕೃತಿಯ ಆತ್ಮವಾಗಿದೆ’ ಎಂದರು.

ADVERTISEMENT

‘ಹುಯಿಲಗೋಳ ನಾರಾಯಣರಾಯರು, ಪಂಡಿತ್ ಪುಟ್ಟರಾಜ ಗವಾಯಿ, ಗಂಗೂಬಾಯಿ ಹಾನಗಲ್ ಮತ್ತು ಪಂಡಿತ್ ಭೀಮ್‌ಸೇನ್ ಜೋಶಿ ಮುಂತಾದ ಮಹಾನ್ ಸಂಗೀತ ಕಲಾವಿದರ ಭೂಮಿಯಾದ ಗದಗ ನೆಲದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಕನ್ನಡದ ಭಾಷೆ, ನೆಲ, ಜಲ, ಸಂಸ್ಕೃತಿಯ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ’ ಎಂದರು.

‘ಬೆಳಗಾವಿಯಲ್ಲಿ 1973ರಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ಗಂಗೂಬಾಯಿ ಹಾನಗಲ್ ಅವರು ಹಾಡಿ ಜನಮನ ಗೆದ್ದಿದ್ದರು’ ಎಂಬುದನ್ನು ಸ್ಮರಿಸಿದರು.

ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಶರಣು ಗೋಗೇರಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಧ್ಯಾಪಕ ಬಾಹುಬಲಿ ಜೈನ್‌ ನಿರೂಪಣೆ ಮಾಡಿದರು.

ಗದಗ–ಬೆಟಿಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಾಮಾಂಕಿತ ಸದಸ್ಯ ಸಿದ್ದು ಪಾಟೀಲ, ನಗರಸಭೆ ಸದಸ್ಯರು ಇದ್ದರು.

ಕನ್ನಡ ನುಡಿ ಸೊಬಗು ಮೆರೆದ ಸಂಗೀತ ಸಂಜೆ

ಸಂಗೀತ ಕಲಾವಿದರಾದ ಸಾದ್ವಿನಿ ಕೊಪ್ಪ ಡಾ. ಶ್ರೀರಾಮ ಕಾಸರ್ ತಬಲಾ ವಾದಕ ವಿಜಯಕುಮಾರ್ ಕೀಬೋರ್ಡ್ ವಾದಕ ಬಸವರಾಜ್ ಹಾಗೂ ರಿದಂ ಪ್ಯಾಡ್ ವಾದಕ ನಂದೀಶ್ ಬುವಾ ತಂಡದವರು ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿಯ ಮಹಿಮೆ ಸಾರುವ ಸಂಗೀತ ಪ್ರಸ್ತುತಪಡಿಸಿದರು.  ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’ ಎಂಬ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.  ಬಳಿಕ ರಾಜನ್–ನಾಗೇಂದ್ರ ಸಂಯೋಜನೆಯ ‘ಈ ದೇಶ ಚನ್ನಾ ಈ ಮಣ್ಣು ಚಿನ್ನ’ (ಚಿತ್ರ: ಪರಸಂಗದ ಗೆಂಡೆತಿಮ್ಮ) ಗೀತೆಯನ್ನು ಡಾ. ಶ್ರೀರಾಮ ಕಾಸರ್ ಭಾವಪೂರ್ಣವಾಗಿ ಹಾಡಿದರು. ‘ತರವಲ್ಲ ತಗಿ ನಿನ್ನ ತಂಬೂರಿಸ್ವರ ಬರದೇ ಬಾರಿಸದಿರು ತಂಬೂರಿ” ‘ಸೋರುತಿಹುದು ಮನೆಯ ಮಾಳಿಗೆ ಅಜ್ಞಾನದಿಂದ’ ಹಾಗೂ ‘ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ ಕೋಡಗನ ಕೋಳಿ‌ ನುಂಗಿತ್ತ’ ಗೀತೆಗಳು ಕಲಾರಸಿಕರ ಮನಗೆದ್ದವು. ‘ನಮ್ಮ ಕಡೆ ಸಾಂಬಾರ ಅಂದ್ರೆ ನಿಮ್ಮ ಕಡೆ ತಿಳಿಯೋದಿಲ್ಲ’ ಹಾಗೂ ‘ಕೇಳಿಸದೇ ಕಲ್ಲುಕಲ್ಲಿನಲಿ ಕನ್ನಡ ನುಡಿ’ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ‘ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ ‘ಹೃದಯ ಸಮುದ್ರ ಕಲಕಿ ಉಕ್ಕಿದೆ ದ್ವೇಷದ ಬೆಂಕಿ’ ಗೀತೆಗಳ ಸೊಬಗಿನಲ್ಲಿ ಪ್ರೇಕ್ಷಕರು ಮಿಂದೆದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.