ADVERTISEMENT

ಬರಡು ಭೂಮಿಯಲ್ಲಿ ಬಂಗಾರ ಬೆಳೆದ ಪದವೀಧರ

ಬರಡಾಗಿದ್ದ ಭೂಮಿಯನ್ನು ನಂದನವನವನ್ನಾಗಿ ಪರಿವರ್ತಿಸಿದ ಯುವ ಕೃಷಿಕ

ಲಕ್ಷ್ಮಣ ಎಚ್.ದೊಡ್ಡಮನಿ
Published 16 ಜುಲೈ 2019, 20:00 IST
Last Updated 16 ಜುಲೈ 2019, 20:00 IST
ಸೂರ್ಯಕಾಂತಿ ಬೆಳೆಯ ನಡುವೆ ಡಂಬಳ ಹೋಬಳಿ ಪೇಠಾಲೂರ ಗ್ರಾಮದ ರೈತ ಹಾಲೇಶ ಪರಪ್ಪ ಶಿರನಹಳ್ಳಿ
ಸೂರ್ಯಕಾಂತಿ ಬೆಳೆಯ ನಡುವೆ ಡಂಬಳ ಹೋಬಳಿ ಪೇಠಾಲೂರ ಗ್ರಾಮದ ರೈತ ಹಾಲೇಶ ಪರಪ್ಪ ಶಿರನಹಳ್ಳಿ   

ಡಂಬಳ: ಇಲ್ಲಿಗೆ ಸಮೀಪದ ಪೇಠಾಲೂರ ಗ್ರಾಮದ ಹಾಲೇಶ ಪರಪ್ಪ ಶಿರನಹಳ್ಳಿಎಂಎ, ಬಿಇಡಿ ಪದವೀಧರರು. ದಶಕಗಳ ಕಾಲ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ ಅವರು, ಅಲ್ಲಿ ನೆಲೆ ನಿಲ್ಲುವುದು ಕಷ್ಟ ಎನಿಸಿದಾಗ, ಮರಳಿ ಊರಿಗೆ ಬಂದು, ಜಮೀನಿನತ್ತ ಹೆಜ್ಜೆ ಹಾಕಿದವರು.

ಈಗವರು ಸಂಪೂರ್ಣ ಸಾವಯವ ಕೃಷಿಕ. ಜಾಲಿಕಂಟು ಬೆಳೆದು ಬರಡಾಗಿದ್ದ ತಮ್ಮ 12 ಎಕರೆ ಜಮೀನನ್ನು ಪರಿಶ್ರಮದ ಬೆವರಿನಿಂದ ನಂದನವನವನ್ನಾಗಿ ರೂಪಿಸಿದ್ದಾರೆ. ಮೆಕ್ಕೆಜೋಳ, ಸೂರ್ಯಕಾಂತಿ, ಈರುಳ್ಳಿ, ಗೋಧಿ, ಕಡಲೆ ಸೇರಿದಂತೆ ಬಹುವಿಧ ಬೆಳೆಗಳನ್ನು ಬೆಳೆದು ವರ್ಷಕ್ಕೆ ₹5ರಿಂದ ₹6 ಲಕ್ಷ ಆದಾಯ ಪಡೆಯುತ್ತಿದ್ದಾರೆ.

ಮೊದಲು ಜಮೀನಿನಲ್ಲಿ ಬೆಳೆದು ನಿಂತಿದ್ದ ಜಾಲಿಕಂಟಿಯನ್ನು ತೆಗೆದುಹಾಕಿ ಭೂಮಿ ಸಮತಟ್ಟು ಮಾಡಿದೆ. ₹3 ಸಾವಿರಕ್ಕೆ ಒಂದು ಟ್ರಾಕ್ಟರ್‌ನಂತೆ 50ರಿಂದ 60 ಟ್ರಾಕ್ಟರ್‌ನಷ್ಟು ಸಗಣಿ ಗೊಬ್ಬರವನ್ನು ಜಮೀನಿಗೆ ಹಾಕಿದರು. ಗ್ರಾಮದ ಕೆರೆಯಲ್ಲಿನ ಕಪ್ಪು ಮಿಶ್ರಿತ ಫಲವತ್ತಾದ 150ರಿಂದ 200 ಟ್ರಾಕ್ಟರ್‌ನಷ್ಟು ಹೂಳನ್ನು ಜಮೀನಿಗೆ ಹಾಕಿದರು. ಇದರ ಫಲವಾಗಿ ಕಳೆದೊಂದು ದಶಕದಿಂದ ಇತರೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಸಮೃದ್ಧ ಬೆಳೆ ತೆಗೆಯುತ್ತಿದ್ದಾರೆ.

ADVERTISEMENT

‘ಬೆಳೆ ಕಟಾವು ಮಾಡಿದ ನಂತರ, ಕೃಷಿ ತ್ಯಾಜ್ಯವನ್ನು ಸುಡುವುದಿಲ್ಲ. ಅದನ್ನು ಜಮೀನಿನಲ್ಲೇ ಬಿಟ್ಟು ನೇಗಿಲು ಹೊಡೆಯುತ್ತೇವೆ. ಕೃಷಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಸಾವಯವ ಗೊಬ್ಬರ ಹಾಕುತ್ತೇವೆ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಮಣ್ಣು ಮೃದುವಾಗಿ ಇರುತ್ತದೆ’ ಎಂದು ತಮ್ಮ ಕೃಷಿ ಪದ್ಧತಿಯನ್ನು ವಿವರಿಸಿದರು ಹಾಲೇಶ.

ಸಾವಯವ ಪದ್ಧತಿ ಅನುಸರಿಸುತ್ತಿರುವುದರಿಂದ ಅವರಿಗೆ ಒಂದು ಎಕರೆಗೆ 30 ಕ್ವಿಂಟಲ್‌ ಮೆಕ್ಕೆಜೋಳ, 15 ಕ್ವಿಂಟಲ್‌ ಬಿಟಿ ಹತ್ತಿ, 18 ಕ್ವಿಂಟಲ್‌ನಷ್ಟು ಸೂರ್ಯಕಾಂತಿ ಬೆಳೆ ಇಳುವರಿ ಲಭಿಸುತ್ತಿದೆ. ಐದು ಗುಂಟೆಯಲ್ಲಿ ಒಂದೂವರೆ ಕ್ವಿಂಟಲ್‌ ಈರುಳ್ಳಿ, ಎಕರೆಗೆ 6 ಕ್ವಿಂಟಲ್‌ನಷ್ಟು ಕಡಲೆ ಇಳುವರಿ ಬಂದಿದೆ. ಒಂದು ಎಕರೆ ಪ್ರದೇಶದಿಂದ 22 ಚೀಲ ಬಿಳಿ ಜೋಳದ ಇಳುವರಿ ಬಂದಿದೆ. ‘ತಂದೆ ಪರಪ್ಪ ಹಾಗೂ ಪತ್ನಿ ಚನ್ನಮ್ಮ, ಸಹೋದರರು ಸೇರಿದಂತೆ ಇಡೀ ಕುಟುಂಬವೇ ಕೃಷಿ ಚಟುವಟಿಕೆಗಳಲ್ಲಿ ಕೈಜೋಡಿಸಿದೆ’ ಎಂದು ವಿವರಣೆ ನೀಡಿದರು.

‘ನಾವು ಬೆಳೆದ ಬಹುತೇಕ ಬೆಳೆಗಳನ್ನು ಕಟಾವು ಮಾಡಿದ ನಂತರ, ತಕ್ಷಣ ಮಾರುಕಟ್ಟೆಗೆ ಕಳುಹಿಸುವುದಿಲ್ಲ. ಮಾರುಕಟ್ಟೆಯಲ್ಲಿ ಬೆಲೆಯ ಮಾಹಿತಿ ಪಡೆದು, ನಂತರ ಬೆಲೆ ಹೆಚ್ಚಳವಾಗಿದ್ದಾಗ ಮಾರಾಟ ಮಾಡುತ್ತೇವೆ. ಅಲ್ಲಿಯ ತನಕ ಮನೆಯಲ್ಲಿಯೇ ಸಂಗ್ರಹ ಮಾಡಿಟ್ಟಿರುತ್ತೇವೆ. ಇದರಿಂದ ಬೆಲೆ ಕುಸಿತದ ಭೀತಿ ಇಲ್ಲ’ ಎಂದರು.

*
ಪ್ರತಿಯೊಬ್ಬ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಬೇಕು. ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಒದಗಿಸಬೇಕು. ಇದರಿಂದ ಸುಶಿಕ್ಷಿತರು ಸಹ ಕೃಷಿ ಕ್ಷೇತ್ರದತ್ತ ಬರುತ್ತಾರೆ.
–ಹಾಲೇಶ ಪರಪ್ಪ ಶಿರನಹಳ್ಳಿ, ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.