ADVERTISEMENT

KSRTC Strike | ನೌಕರರ ಮುಷ್ಕರ: ಸಂಚಾರ ಅಸ್ತವ್ಯಸ್ತ

ಸರ್ಕಾರಿ ಬಸ್‌ಗಳಿಲ್ಲದ ಕಾರಣಕ್ಕೆ ಖಾಸಗಿ ಬಸ್‌ಗಳನ್ನು ಅವಲಂಬಿಸಿದ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 4:11 IST
Last Updated 6 ಆಗಸ್ಟ್ 2025, 4:11 IST
ಗದಗ ನಗರದ ಪಂಡಿತ್‌ ಪುಟ್ಟರಾಜ ಗವಾಯಿ ಬಸ್‌ ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತಿದ್ದ ಬಸ್‌ಗಳು
ಗದಗ ನಗರದ ಪಂಡಿತ್‌ ಪುಟ್ಟರಾಜ ಗವಾಯಿ ಬಸ್‌ ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತಿದ್ದ ಬಸ್‌ಗಳು   
ಶಾಲಾ ಕಾಲೇಜು ವಿದ್ಯಾರ್ಥಿಗಳು, ನೌಕರರ ಪರದಾಟ | ಖಾಸಗಿ ವಾಹನಗಳಲ್ಲಿ ಹೆಚ್ಚು ಹಣ ವಸೂಲಿ– ಆರೋಪ | ಸಂಜೆ 4 ಗಂಟೆಯಿಂದ ಸರ್ಕಾರಿ ಬಸ್‌ಗಳ ಸಂಚಾರ ಆರಂಭ

ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಚಾಲಕರು ಹಾಗೂ ನಿರ್ವಾಹಕರು ಬೆಂಬಲ ಸೂಚಿಸಿದ್ದರಿಂದ ಮಂಗಳವಾರ ಗದಗ ಜಿಲ್ಲೆಯ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಹಾಗೂ ಖಾಸಗಿ ನೌಕರರು ನಿಗದಿತ ಸ್ಥಳ ತಲುಪಲು ಪರದಾಡಿದರು.

ಮುಷ್ಕರದ ಕಾರಣಕ್ಕೆ ಮಂಗಳವಾರ ಬೆಳಿಗ್ಗೆಯಿಂದಲೇ ಖಾಸಗಿ ಮಿನಿಬಸ್‌ಗಳು, ಆಟೊಗಳು ಬಸ್‌ ನಿಲ್ದಾಣದ ಹೊರಗೆ, ಒಳಗೆ ಜಮಾವಣೆಗೊಂಡಿದ್ದವು. ಸರ್ಕಾರಿ ಬಸ್‌ಗಳು ಇಲ್ಲದ ಕಾರಣಕ್ಕೆ ಪ್ರಯಾಣಿಕರು ಬೇರೆ ಸ್ಥಳಗಳಿಗೆ ತೆರಳಲು ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಯಿತು. ಖಾಸಗಿ ವಾಹನಗಳ ನಿರ್ವಾಹಕರು ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆಯುತ್ತಿದ್ದಾರೆ ಎಂಬ ದೂರುಗಳು ಅಲ್ಲಲ್ಲಿ ಕೇಳಿಬಂದವು.

ADVERTISEMENT

ನಿಲ್ದಾಣದಲ್ಲೇ ಉಳಿದ ಬಸ್‌ಗಳು:

ಸಾರಿಗೆ ನೌಕರರ ಸಂಘದವರು ಕರೆ ನೀಡಿದ್ದ ಮುಷ್ಕರಕ್ಕೆ ಗದಗ ಜಿಲ್ಲೆಯ ಚಾಲಕ ಮತ್ತು ನಿರ್ವಾಹಕರು ಬೆಂಬಲ ಸೂಚಿಸಿದ್ದರಿಂದಾಗಿ ಮಂಗಳವಾರ ಬೆಳಿಗ್ಗೆ ಯಾವುದೇ ಬಸ್ ಸಂಚರಿಸಲಿಲ್ಲ. ಇದರಿಂದಾಗಿ, ಎಲ್ಲ ಬಸ್‌ಗಳು ನಿಲ್ದಾಣದಲ್ಲೇ ಸಾಲುಗಟ್ಟಿ ನಿಂತಿದ್ದವು.

ಬಸ್ ಸಂಚಾರ ಬಂದ್ ಇರುವ ಮಾಹಿತಿ ತಿಳಿಯದ ಕೆಲವರು ನಿಲ್ದಾಣಕ್ಕೆ ಬಂದಿದ್ದರು. ಮಂಗಳವಾರ ಬೆಳಿಗ್ಗೆ ಏಕಾಏಕಿ ಮಳೆ ಆರಂಭಗೊಂಡಿದ್ದರಿಂದ ಬೇರೆ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಕೆಲವು ಪ್ರಯಾಣಿಕರು ರೈಲು ನಿಲ್ದಾಣಕ್ಕೆ ತೆರಳಿದರೆ, ಇನ್ನೂ ಕೆಲ ಪ್ರಯಾಣಿಕರು ಮನೆಗಳಿಗೆ ವಾಪಸಾದರು.

‘ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕರು ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಮಂಗಳವಾರ 56 ಬಸ್‌ಗಳು ಮಾತ್ರ ಸಂಚಾರ ನಡೆಸಿದವು. ಮಂಗಳವಾರ ಸಂಜೆ 4 ಗಂಟೆಯಿಂದ ಬಸ್‌ ಸಂಚಾರ ಯಥಾರೀತಿ ಆರಂಭಗೊಂಡಿದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಡಿ. ದೇವರಾಜು ತಿಳಿಸಿದರು.

ಪೊಲೀಸ್‌ ಬಂದೋಬಸ್ತ್‌: 

ಸಾರಿಗೆ ಬಸ್‌ ನೌಕರರು ಹಮ್ಮಿಕೊಂಡಿರುವ ಮುಷ್ಕರದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಸ್‌ ನಿಲ್ದಾಣಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ಗದಗ ನಗರದ ಹೊಸ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ, ಯಾವುದೇ ಅಹಿತಕರ ಘಟನೆಗಳು ನಡೆಯಲು ಅವಕಾಶ ನೀಡದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಿದರು.

ಗದಗ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್‌ ಜಗದೀಶ್‌ ಬಂದೋಬಸ್ತ್‌ ಪರಿಶೀಲಿಸಿದರು
ಸಾರಿಗೆ ನೌಕರರ ಮುಷ್ಕರದ ಕಾರಣಕ್ಕೆ ಜನರು ಖಾಸಗಿ ವಾಹನಗಳನ್ನು ಅವಲಂಬಿಸಿದರು
ಬಸ್‌ಗಳಿಗೆ ಕಾಯ್ದು ಕುಳಿತಿದ್ದ ಪ್ರಯಾಣಿಕರು

560 ಮಾರ್ಗಗಳಲ್ಲಿ ಸಂಚಾರ ಬಂದ್‌

ಗದಗ ಜಿಲ್ಲಾ ವಿಭಾಗದ 2319 ಚಾಲಕರು ಹಾಗೂ ನಿರ್ವಾಹಕರು ಕೆಲಸಕ್ಕೆ ಗೈರಾಗಿದ್ದರಿಂದ ಜಿಲ್ಲೆಯ 8 ಡಿಪೊಗಳಲ್ಲಿ ಪ್ರತಿನಿತ್ಯ 560 ರೂಟ್‌ಗಳಲ್ಲಿ ಸಂಚರಿಸಬೇಕಿದ್ದ ಬಸ್‌ಗಳ ಸಂಚಾರ ಬಂದ್ ಆಗಿದ್ದವು. ಸಾರಿಗೆ ಅಧಿಕಾರಿಗಳು ರಾತ್ರಿ ಸಂಚರಿಸಿದ್ದ ಬಸ್‌ಗಳ ಪ್ರಯಾಣವನ್ನು ಕೆಲ ಕಾಲ ಮುಂದುವರಿಸಿದ್ದರು. ಗದಗದಿಂದ ನವಲಗುಂದ ಹಾಗೂ ನರಗುಂದಕ್ಕೆ ಕೆಲ ಬಸ್‌ಗಳು ಸಂಚರಿಸಿದವು. ಜಿಲ್ಲೆಯ 8 ಡಿಪೊಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಶಾಂತಿಯುತ ವಾತಾವರಣವಿತ್ತು. ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಕಾರಣದಿಂದ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆ ಆಗದಿರಲೆಂದು ಜಿಲ್ಲಾಡಳಿತ ಹಾಗೂ ಆರ್‌ಟಿಒ ಪರ್ಯಾಯವಾಗಿ ಜಿಲ್ಲೆಯೊಳಗೆ ಹಾಗೂ ರೋಣ ಮುಂಡರಗಿ ಶಿರಹಟ್ಟಿ ಹಾಗೂ ಪಕ್ಕದ ಜಿಲ್ಲೆ ಕೊಪ್ಪಳಕ್ಕೆ ತೆರಳಲು ಖಾಸಗಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.