ADVERTISEMENT

ನರೇಗಲ್:‌ ಸ್ವಚ್ಛತೆ ಕಾಣದ ಜಕ್ಕಲಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 5:20 IST
Last Updated 21 ಫೆಬ್ರುವರಿ 2024, 5:20 IST
ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದಲ್ಲಿ ಚರಂಡಿಯಲ್ಲಿ ತುಂಬಿರುವ ತ್ಯಾಜ್ಯ
ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದಲ್ಲಿ ಚರಂಡಿಯಲ್ಲಿ ತುಂಬಿರುವ ತ್ಯಾಜ್ಯ   

ನರೇಗಲ್:‌ ಅಧಿಕಾರ ಚುಕ್ಕಾಣಿ ಹಿಡಿಯುವ ಸಲುವಾಗಿ ಅವಿಶ್ವಾಸ ಗೊತ್ತುವಳಿ ಮಂಡಿಸುವಲ್ಲಿ ಸದಾ ಮುಂದಿರುವ ಸಮೀಪದ ಜಕ್ಕಲಿ ಗ್ರಾಮದಲ್ಲಿ ಸ್ವಚ್ಛತೆ ಮಾಯವಾಗಿದೆ. ಕೊಳಚೆ ನೀರಿನಿಂದ ತುಂಬಿರುವ ಚರಂಡಿ, ಮನೆಯ ಮುಂದೆ ತಿಂಗಳಾನುಗಟ್ಟಲೆ ಬಿದ್ದಿರುವ ಕಸದ ರಾಶಿ, ದುರ್ವಾಸನೆ ನಡುವೆಯೇ ವಾಸ ಮಾಡಬೇಕಾದ ಪರಿಸ್ಥಿತಿಯನ್ನು ಗ್ರಾಮದ ಜನರು ಎದುರಿಸುತ್ತಿದ್ದಾರೆ.

ಬಸ್‌ ನಿಲ್ದಾಣದ ಸಮೀಪದಲ್ಲಿ ಕಸದ ರಾಶಿ ಯಾವಾಗಲೂ ತುಂಬಿರುತ್ತದೆ. ಅಲ್ಲಿನ ಸುತ್ತಮುತ್ತಲಿನ ಅಂಗಡಿಯವರು ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ವಾಹನಕ್ಕೆ ಹಾಕದೇ ರಸ್ತೆಗೆ ಚೆಲ್ಲುತ್ತಾರೆ. ಇದರಿಂದ ಐತಿಹಾಸಿಕ ಹಿನ್ನಲೆ ಹೊಂದಿರುವ ಜಕ್ಕಲಿ ಗ್ರಾಮಕ್ಕೆ ಕಸದ ರಾಶಿ ಸ್ವಾಗತ ಕೋರುತ್ತದೆ. ಸಮೀದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಕಸದ ರಾಶಿ ತುಂಬಿದೆ. ಪ್ಲಾಸ್ಟಿಕ್‌ ಬಾಟಲ್‌, ಹಾಳೆ ಹಾಗೂ ವ್ಯಸನದ ವಸ್ತುಗಳನ್ನು ಅಲ್ಲಿಯೇ ಬಿಸಾಡಿದ್ದಾರೆ. ಇದರಿಂದ ರಸ್ತೆ ವರೆಗೂ ದುರ್ನಾತ ಬೀರುತ್ತಿದೆ. ಇದರ ಪಕ್ಕದಲ್ಲಿಯೇ ಇರುವ ದೊಡ್ಡ ಚರಂಡಿಯಲ್ಲೂ ಕಸ ಹಾಕುತ್ತಾರೆ ಇದರಿಂದ ಕೊಳಚೆ ನೀರಿನ ಪ್ರಭಾವ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆ ನೀಡುತ್ತಿದೆ.

ಗ್ರಾಮ ಚವಡಿ ಹತ್ತಿರ ಇರುವ ಚರಂಡಿ ಹಾಗೂ ರಂಗಣ್ಣವರ ಓಣಿಯ ಚರಂಡಿಗಳು ತ್ಯಾಜ್ಯ ವಸ್ತುಗಳಿಂದ ತುಂಬಿವೆ. ನೀರು ಹರಿದು ಹೋಗಲು ಅವಕಾಶವಿಲ್ಲದಂತಾಗಿದೆ. ಇದರಿಂದ ಸೊಳ್ಳೆಗಳ ಉತ್ಪತ್ತಿ ಜಾಸ್ತಿಯಾಗಿದ್ದು ಡೆಂಗಿ, ಮಲೇರಿಯಾದಂತ ರೋಗಗಳಿಗೆ ಕಾರಣವಾಗಿದೆ. ಅನೇಕ ಕಡೆಗಳಲ್ಲಿ ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ADVERTISEMENT

‘ಈಚೆಗೆ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು ಬಸ್‌ ನಿಲ್ದಾಣದ ಸಮೀಪದಲ್ಲಿ ಬಿದ್ದಿರುವ ಕಸವನ್ನು ಸ್ವಚ್ಛಗೊಳಿಸುವಂತೆ ಹಾಗೂ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ಇಲ್ಲಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ಕೊಟ್ಟು ಹೋಗಿದ್ದಾರೆ. ಆದರೂ ಪಿಡಿಒ ಸೇರಿದಂತೆ ಎಲ್ಲರೂ ನಿರ್ಲಕ್ಷ್ಯತನ ಮಾಡುತ್ತಿದ್ದಾರೆ’ ಎಂದು ಕರವೇ ಗದಗ ಜಿಲ್ಲಾ ಘಟಕದ ಉಪಾಧ್ಯಕ್ಷ ಉಮೇಶ ಮೇಟಿ ಆರೋಪಿಸಿದರು.

ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದ ಬಸ್‌ ನಿಲ್ದಾಣದ ಸಮೀಪದ ಶೌಚಾಲಯದಲ್ಲಿ ಮದ್ಯದ ಪ್ಯಾಕೆಟ್‌ಗಳು ಬಿದ್ದಿರುವುದು
ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದ ಬಸ್‌ ನಿಲ್ದಾಣದ ಸಮೀಪದಲ್ಲಿ ರಸ್ತೆ ಪಕ್ಕದಲ್ಲಿ ಹಾಕಲಾಗಿರುವ ಕಸದ ರಾಶಿ

Quote - ಬಸ್‌ ನಿಲ್ದಾಣದ ಸಮೀಪದ ಅಂಗಡಿಕಾರರಿಗೆ ಎಷ್ಟೇ ತಿಳಿವಳಿಕೆ ನೀಡಿದರೂ ಕಸ ರಸ್ತೆಗೆ ಹಾಕುತ್ತಿದ್ದಾರೆ. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಲಾಗುವುದು ಗಂಗವ್ವ ಜಂಗಣ್ಣವರ ಅಧ್ಯಕ್ಷೆ ಗ್ರಾಮ ಪಂಚಾಯ್ತಿ ಜಕ್ಕಲಿ

Quote - ಸಿಬ್ಬಂದಿ ಮತ್ತು ಜನಪ್ರತಿನಿಧಿಗಳು ಗ್ರಾಮದ ಸ್ವಚ್ಚತೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುತ್ತಿಲ್ಲ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಉಮೇಶ ಮೇಟಿ ಕರವೇ ಜಿಲ್ಲಾ ಘಟಕದ ಉಪಾಧ್ಯಕ್ಷ

Cut-off box - ಹೊಂದಾಣಿಕೆ ಕೊರತೆ; ಅಭಿವೃದ್ಧಿಗೆ ಹಿನ್ನೆಡೆ ಇಲ್ಲಿನ ಚುನಾಯಿತ ಜನಪ್ರತಿನಿಧಿಗಳ ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿ ನಡುವೆ ಹೊಂದಾಣಿಕೆ ಇಲ್ಲದಿರುವುದರಿಂದ ಹಾಗೂ ಗ್ರಾ.ಪಂ ಅಧ್ಯಕ್ಷರ ವಿರುದ್ಧ ಆಗಾಗ ಅವಿಶ್ವಾಸ ಗೊತ್ತುವಳಿ ಮಂಡಿಸುವ ಘಟನೆಗಳು ಆಗಾಗ ನಡೆಯುತ್ತಿರುವ ಕಾರಣ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ. ಅಧಿಕಾರದ ಆಸೆಗಾಗಿ ಆಯ್ಕೆಯಾದವರು ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನ ಮಾಡುತ್ತಿಲ್ಲ. ಇದರಿಂದ ಗ್ರಾಮದ ನಿವಾಸಿಗಳು ದಿನಂಪ್ರತಿ ಪಂಚಾಯಿತಿಗೆ ಹಿಡಿಶಾಪ ಹಾಕುತ್ತಿದ್ದಾರೆ ಎನ್ನುವುದು ಗ್ರಾಮಸ್ಥರ ಬಲವಾದ ಆರೋಪವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.