ADVERTISEMENT

ಗದಗ | ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿ,100 ವರ್ಷ ಹಳೆಯದ್ದು: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 23:44 IST
Last Updated 12 ಜನವರಿ 2026, 23:44 IST
<div class="paragraphs"><p>ಲಕ್ಕುಂಡಿಯಲ್ಲಿ ದೊರೆತ ಚಿನ್ನಾಭರಣ&nbsp;</p></div>

ಲಕ್ಕುಂಡಿಯಲ್ಲಿ ದೊರೆತ ಚಿನ್ನಾಭರಣ 

   

ಗದಗ: ‘ಲಕ್ಕುಂಡಿಯಲ್ಲಿ ಸಿಕ್ಕಿರುವುದು ನಿಧಿ ಅಲ್ಲ ಅಂತ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ರಮೇಶ್ ಮೂಲಿಮನಿ ಬಾಯ್ತಪ್ಪಿನಿಂದ ಹೇಳಿಕೆ ನೀಡಿದರು’ ಎಂದು ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ತಿಳಿಸಿದರು.

ಸೋಮವಾರ ಇಲ್ಲಿ ರಮೇಶ್‌ ಮೂಲಿಮನಿ ಅವರ ಜತೆಗೂಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿಕ್ಕಿದ್ದು 100 ವರ್ಷಕ್ಕೂ ಹಳೆಯ ಆಭರಣಗಳು. ಈ ಬಗ್ಗೆ ನಡೆಯುತ್ತಿರುವ ಅಧ್ಯಯನ ಪೂರ್ಣಗೊಂಡ ನಂತರವಷ್ಟೇ ಅದು ಯಾವ ಕಾಲದ್ದು, ಎಷ್ಟು ಹಳೆಯದ್ದು ಎಂಬ ಬಗ್ಗೆ ಮಾಹಿತಿ ಸಿಗಲಿದೆ’ ಎಂದರು.

ADVERTISEMENT

‘ರಾಜ್ಯ ಪುರಾತತ್ವ ಇಲಾಖೆಯ ತಜ್ಞೆ ಸ್ಮಿತಾ ರೆಡ್ಡಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡುವರು. ಅವರ  ತನಿಖೆಯಿಂದ ಇನ್ನಷ್ಟು ಮಾಹಿತಿ ಲಭ್ಯವಾಗಲಿವೆ’ ಎಂದು ತಿಳಿಸಿದರು.

‘ರಿತ್ತಿ ಕುಟುಂಬಸ್ಥರು ಚಿನ್ನವನ್ನು ಜಿಲ್ಲಾಡಳಿತಕ್ಕೆ ನೀಡಿ, ಪ್ರಾಮಾಣಿಕತೆ ತೋರಿದ್ದಾರೆ. ಸರ್ಕಾರದ ಜತೆಗೆ ಚರ್ಚಿಸಿ, ಕುಟುಂಬಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.

‘ಮನೆ ನಿರ್ಮಾಣಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ. ಆ ಸ್ಥಳದಲ್ಲಿ ಮತ್ತಿನ್ನೇನು ಸಿಗುವುದಿಲ್ಲ ಎಂದು ತಜ್ಞರು ದೃಡೀಕರಿಸಿದ ನಂತರ ಮನೆ ನಿರ್ಮಾಣಕ್ಕೆ ಸೂಚಿಸಲಾಗುವುದು. ಎರಡು ದಿನಗಳಲ್ಲಿ ಉತ್ತರ ಸಿಗಲಿದೆ’ ಎಂದರು.

ರಮೇಶ್ ಮೂಲಿಮನಿ ಅವರು, ‘ಚಿನ್ನ ಸಿಕ್ಕಿದೆ ಎಂದು ತಿಳಿದಂತೆ ಸ್ಥಳಕ್ಕೆ ಭೇಟಿ ನೀಡಿದ್ದೆ. ಸಿಕ್ಕ ಆಭರಣಗಳು 100 ವರ್ಷ ಮೀರಿದವು ಎಂದು ಅಂದಾಜಿಸಲಾಗಿದೆ. ಕರ್ನಾಟಕ ನಿಕ್ಷೇಪ ನಿಧಿಯಡಿ ಭೂಮಿಯೊಳಗೆ ₹10ಕ್ಕಿಂತ ಹೆಚ್ಚಿನ ಮೌಲ್ಯದ ಏನೇ ಸಿಕ್ಕರೂ 1962ಕಾಯ್ದೆ ಪ್ರಕಾರ ಸರ್ಕಾರಕ್ಕೆ ಸೇರಿದ್ದಾಗಿದೆ’ ಎಂದರು.

ನಿಧಿ ಒಪ್ಪಿಸಿ ಪ್ರಾಮಾಣಿಕತೆ ಮೆರೆದವರ ಒಳ್ಳೆತನ ಅಲ್ಲಗಳೆಯಲು ಸಾಧ್ಯವೇ ಇಲ್ಲ. ಅವರಿಗೆ ಆ ಜಾಗ ಬೇಡ ಅಂದರೆ ಸರ್ಕಾರದ ಜತೆಗೆ ಮಾತನಾಡಿ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಗುವುದು.
ಸಿ.ಎನ್‌.ಶ್ರೀಧರ್ ಜಿಲ್ಲಾಧಿಕಾರಿ

‘ಬೇರೆ ಕಡೆ ಮನೆ ಕಟ್ಟಿಸಿಕೊಡಿ’

‘ನಿಧಿ ಸಿಕ್ಕ ಜಾಗ ಅಪಶಕುನ. ಅಲ್ಲಿ ದೇವಸ್ಥಾನ ನಿರ್ಮಿಸಲಿ. ಲಕ್ಷ್ಮಿ ದೇವಸ್ಥಾನದ ಹಿಂಬದಿ ಚಿನ್ನದ ಆಭರಣಗಳಿದ್ದ ತಂಬಿಗೆ ಸಿಕ್ಕಿದ್ದು ಅಲ್ಲಿ ಸರ್ಪದ ಕಾವಲಿದೆ. ನಿಧಿ ಸಿಕ್ಕ ಜಾಗ ನಮಗೆ ಬೇಡ. ದೇವರಿಗೆ ಇರಲಿ. ನಮಗೆ ಬೇರೆಡೆ ಮನೆ ಕಟ್ಟಿಸಿಕೊಡಿ’ ಎಂದು ಗಂಗಗವ್ವ ರಿತ್ತಿ ಕುಟುಂಬದವರು ಬೇಡಿಕೆ ಇಟ್ಟರು. ‘ನಿಧಿ ಸಿಕ್ಕ ಜಾಗ ಬೆಂಕಿ ಇದ್ದಂತೆ. ಬೆಂಕಿ ಕಟ್ಟಿಕೊಂಡು ಹೋದರೆ ಸೆರಗು ಸುಡುವುದೇ. ಮಗ ಇದ್ದಾನೆ. ಅವನಿಗೆ ಯಾವುದಾದರೂ ಸರ್ಕಾರಿ ಕೆಲಸ ಕೊಡಿಸಬೇಕು’ ಎಂದು ಆಗ್ರಹಿಸಿದ್ದಾರೆ. ‘ಬಾಲಕನಿಗೆ ಪಿಯುಸಿವರೆಗೆ ಉಚಿತ ಶಿಕ್ಷಣದ ವ್ಯವಸ್ಥೆ ಮಾಡಲಾಗುವುದು’ ಎಂದು ಬಿ.ಎಚ್‌.ಪಾಟೀಲ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಸಿದ್ದು ಪಾಟೀಲ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.