ಲಕ್ಷ್ಮೇಶ್ವರ: ‘ಪರಿಸರ ರಕ್ಷಣೆಯ ಕಾಳಜಿ ಪ್ರತಿಯೊಬ್ಬರಲ್ಲಿ ಬಂದಾಗ ಮಾತ್ರ ಉತ್ತಮ ಪರಿಸರ ನಿರ್ಮಿಸಲು ಸಾಧ್ಯ. ಮುಂದಿನ ಪೀಳಿಗೆಗೆ ಬಾಲ್ಯದಿಂದಲೇ ಈ ಕಾಳಜಿ ಬೆಳೆಸಬೇಕಿದೆ’ ಎಂದು ಹಿರಿಯ ನ್ಯಾಯಾಧೀಶ ಭರತ್ ಯೋಗೀಶ್ ಕರಗುದರಿ ಹೇಳಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ, ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ವಕೀಲರ ಸಂಘ ಹಾಗೂ ಅರಣ್ಯ ಇಲಾಖೆಗಳ ಆಶ್ರಯದಲ್ಲಿ ವಿಶ್ವ ಭೂ ದಿನದ ಅಂಗವಾಗಿ ನ್ಯಾಯಾಲಯದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಭೂಮಿ ಮತ್ತು ಭಾರತೀಯ ಸಂಸ್ಕೃತಿ ನಡುವೆ ಅವಿನಾಭಾವ ಸಂಬಂಧ ಇದ್ದು, ಪಾಶ್ಚಾತ್ಯ ಸಂಸ್ಕೃತಿಯಿಂದ ಅದರ ಕೊಂಡಿ ಕಳಚಿದೆ. ವಕೀಲರು, ಸಿಬ್ಬಂದಿ ತಮ್ಮ ಹೆಸರಿನಲ್ಲಿ ಒಂದೊಂದು ಗಿಡ ನೆಟ್ಟು ಬೆಳೆಸುವ ಸಂಕಲ್ಪ ಮಾಡಿ ನ್ಯಾಯಾಲಯದ ಆವರಣವನ್ನು ಹಸಿರಾಗಿ ಕಾಣುವಂತೆ ಮಾಡಬೇಕು’ ಎಂದರು.
ವಕೀಲ ಎಸ್.ಪಿ. ಬಳಿಗಾರ ಮಾತನಾಡಿ, ‘1970ರಿಂದ ಏ. 22ರಂದು ವಿಶ್ವ ಭೂಮಿ ದಿನ ಆಚರಿಸಲಾಗುತ್ತಿದೆ. ಭೂಮಿ ನಮಗೆಲ್ಲ ತಾಯಿ ಇದ್ದಂತೆ. ಭೂಮಿಯಿಂದ ನಾವು ಏನನ್ನೇ ಪಡೆದರೂ ಭೂತಾಯಿ ಕೊಟ್ಟಳು ಎಂದು ಗೌರವದಿಂದ ಹೇಳುತ್ತೇವೆ. ಇಂಥ ಭೂಮಿ ರಕ್ಷಣೆ ನಮ್ಮೆಲ್ಲರ ಕರ್ತವ್ಯ’ ಎಂದು ತಿಳಿಸಿದರು.
ಸಹಾಯಕ ಅರಣ್ಯ ಅಧಿಕಾರಿ ಮೇಘನಾ ಮಾತನಾಡಿ, ‘ಕಾಯ್ದೆಯ ಪ್ರಕಾರ ಶೇ 33ರಷ್ಟು ಭೂಭಾಗ ಅರಣ್ಯದಿಂದ ಕೂಡಿರಬೇಕು. ಅರಣ್ಯ ರಕ್ಷಣೆಗೆ ಎಲ್ಲರೂ ಪ್ರಯತ್ನಿಸಬೇಕು. ಗದಗ ನಗರದಲ್ಲಿ ಅರಣ್ಯ ಭಾಗವನ್ನು ಹೆಚ್ಚಿಸುವುದಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರೊಂದಿಗೆ ಪ್ರಯತ್ನಿಸುತ್ತಿದೆ’ ಎಂದರು.
ವಕೀಲರ ಸಂಘದ ಅಧ್ಯಕ್ಷ ಬಿ.ವಿ. ನೇಕಾರ, ಪ್ರಧಾನ ಕಾರ್ಯದರ್ಶಿ ವಿ.ಎಸ್. ಪಶುಪತಿಹಾಳ, ವಕೀಲರಾದ ಬಿ.ಎಸ್. ಬಾಳೇಶ್ವರಮಠ, ವಿ.ಆರ್. ಪಾಟೀಲ, ಎ.ಟಿ. ಕಟ್ಟಿಮನಿ, ಎಸ್.ಡಿ. ಕಮತದ, ಆರ್.ಎಂ. ಪೂಜಾರ, ಪಿ.ಎಂ. ವಾಲಿ, ಎ.ಎ. ಬೇವಿನಗಿಡದ, ಎಸ್.ವೈ. ಗೊಬ್ಬರಗುಂಪಿ, ಆರ್.ಎಂ. ಕುರಿ, ಎಸ್.ಎಚ್. ಮುಳಗುಂದ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.