ADVERTISEMENT

ಮುಂಡರಗಿ: ಸಾಹಿತ್ಯ ಕ್ಷೇತ್ರದ ಧ್ರುವತಾರೆ ಅನ್ನದಾನೀಶ್ವರ ಶ್ರೀ

160ಕ್ಕೂ ಹೆಚ್ಚು ಗ್ರಂಥಗಳ ರಚನೆ; ವಿಶ್ವವಿದ್ಯಾಲಯಗಳ ಪಠ್ಯವಾದ ಶ್ರೀಗಳ ಬರಹಗಳು

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 5:34 IST
Last Updated 17 ಜನವರಿ 2026, 5:34 IST
ಇಂಗ್ಲಿಷ ಭಾಷೆಗೆ ಭಾಷಾಂತರಗೊಂಡಿರುವ ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿ ಅವರ ಗ್ರಂಥ
ಇಂಗ್ಲಿಷ ಭಾಷೆಗೆ ಭಾಷಾಂತರಗೊಂಡಿರುವ ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿ ಅವರ ಗ್ರಂಥ   

ಮುಂಡರಗಿ: ಮಠದ ಪೀಠಾಧಿಪತಿಗಳಾದವರು ನಿತ್ಯ ಪೂಜೆ, ಪುನಸ್ಕಾರ, ಪ್ರವಚನ, ಧರ್ಮಬೋಧನೆ ಇವೇ ಮೊದಲಾದ ಸೀಮಿತ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದರೆ, ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದ ದಶಮ ಪೀಠಾಧಿಪತಿ ಅನ್ನದಾನೀಶ್ವರ ಮಹಾಶಿವಯೋಗಿಗಳು ನಿತ್ಯ ತ್ರಿಕಾಲ ಪೂಜಾ ಕೈಂಕರ್ಯದ ಜತೆಗೆ ಸಾಹಿತ್ಯ ರಚನೆ, ಸಮಾಜಸೇವೆ, ಶಿಕ್ಷಣ ಸಂಸ್ಥೆಗಳ ನಿರ್ವಹಣೆ, ಧರ್ಮ ಪ್ರಚಾರ, ಪರಿಸರ ಸಂರಕ್ಷಣೆ, ಕೃಷಿ ಕಾಯಕ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ತ್ರಿಭಾಷಾ ಪಂಡಿತರಾದ ಶ್ರೀಗಳು ಪುರಾಣ, ಪುಣ್ಯಕಥೆ, ಪ್ರವಾಸಕಥನ, ಕಾವ್ಯ, ವಚನ, ಚುಟುಕು, ವಿಮರ್ಶೆ, ಸಂಶೋಧನೆ, ಜೀವನ ಚರಿತ್ರೆ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ.

ಓದು ಹಾಗೂ ಸಾಹಿತ್ಯ ರಚನೆಯು ಶ್ರೀಗಳಿಗೆ ಪ್ರಿಯವಾದ ಕ್ಷೇತ್ರವಾಗಿದ್ದು, ಅವರು ಈವರೆಗೆ 160ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಮಠದಲ್ಲಿ ಜಗದ್ಗುರು ಅನ್ನದಾನೀಶ್ವರ ಪ್ರಸಾರಮಾಲೆಯನ್ನು ಆರಂಭಿಸಿ, 275ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ.

ADVERTISEMENT

ಶ್ರೀಗಳು ಬರೆದಿರುವ ಹಲವಾರು ಗ್ರಂಥಗಳು ಇಂಗ್ಲಿಷ್ ಸೇರಿ ದೇಶದ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. ಕಾಶಿ ಸೇರಿ ದೇಶದ ವಿವಿಧ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಪಾಂಡಿತ್ಯಪೂರ್ಣ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಶ್ರೀಗಳು ರಚಿಸಿದ ಸಾಹಿತ್ಯದ ಮೇಲೆ ನಾಲ್ಕು ಮಂದಿ ಪಿಎಚ್.ಡಿ. ಹಾಗೂ ಹಲವಾರು ವಿದ್ವಾಂಸರು ಎಂ.ಫಿಲ್. ಪದವಿ ಪಡೆದಿದ್ದಾರೆ. ಇವರ ಬರಹಗಳು ವಿಶ್ವವಿದ್ಯಾಲಯಗಳಲ್ಲಿ ಪಠ್ಯಗಳಾಗಿವೆ. ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಪ್ರತಿ ಮಂಗಳವಾರ ಪ್ರಕಟವಾಗುವ ಅವರ ‘ವಚಾನಾಮೃತ’ವು ಗ್ರಂಥ ರೂಪದಲ್ಲಿ ಪ್ರಕಟವಾಗಿದ್ದು, ಅದು ನಾಡಿನ ಸಾವಿರಾರು ಓದುಗರ ಮನ ಗೆದ್ದಿದೆ.

ಶ್ರೀಗಳ ಸಾಹಿತ್ಯ ಸೇವೆ ಮನಗಂಡು ಹಂಪಿ ಕನ್ನಡ ವಿಶ್ವವಿದ್ಯಾಲಯವು ಅವರಿಗೆ ಪ್ರತಿಷ್ಠಿತ ನಾಡೋಜ ಪುರಸ್ಕಾರ ನೀಡಿ ಗೌರವಿಸಿದೆ. ಕರ್ನಾಟಕ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದೆ. ಜತೆಗೆ ನಾಡಿನ ಹಲವಾರು ಸಂಘ, ಸಂಸ್ಥೆಗಳು, ಮಠ, ಮಾನ್ಯಗಳು ಪೂಜ್ಯರಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಶ್ರೀಜಗದ್ಗುರು ಅನ್ನದಾನೀಶ್ವರ ಅಧ್ಯಯನ ಪೀಠ ಸ್ಥಾಪಿಸಲಾಗಿದ್ದು, ಅಲ್ಲಿ ನೂರಾರು ವಿದ್ಯಾರ್ಥಿನಿಯರು ಶ್ರೀಗಳ ಸಾಹಿತ್ಯದ ಅಧ್ಯಯನ ಹಾಗೂ ಸಂಶೋಧನಾ ಕಾರ್ಯದಲ್ಲಿ ತೊಡಗಿದ್ದಾರೆ.

ಮುಂಡರಗಿಯ ಅನ್ನದಾನೀಶ್ವರ ಮಾಹಾಸ್ವಾಮಿಜಿಗಳ ಸಮಗ್ರ ಸಾಹಿತ್ಯವನ್ನೊಳಗೊಂಡ ಸಾಹಿತ್ಯ ಸಂಪುಟಗಳು

ರಾಜ್ಯೋತ್ಸವ ಪುರಸ್ಕಾರಕ್ಕೆ ಅರ್ಹರು

‘ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳು ತಮ್ಮ ದೈನಂದಿನ ಚಟುವಟಿಕೆಗಳ ಜತೆಗೆ ಸಾಹಿತ್ಯ ಶಿಕ್ಷಣ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಕೃಷಿ ಮಾಡಿದ್ದಾರೆ. ಸಾಹಿತ್ಯ ಸೇವೆ ಹಾಗೂ ಗ್ರಂಥ ಪ್ರಕಟಣೆಯ ವಿಷಯದಲ್ಲಿ ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಅವರ ಸಾಹಿತ್ಯ ಸೇವೆ ಜನಮನ್ನಣೆ ಗಳಿಸಿದ್ದು ಹಂಪಿ ಕನ್ನಡ ವಿಶ್ವವಿದ್ಯಾಲಯ ಕರ್ನಾಟಕ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳು ಅವರನ್ನು ಪುರಸ್ಕರಿಸಿವೆ. ಅವರು ನೂರಾರು ಗ್ರಂಥಗಳನ್ನು ರಚಿಸಿದ್ದು ಅನ್ಯರ ಹಲವಾರು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಬೇಕು ಎನ್ನುವುದು ಲಕ್ಷಾಂತರ ಭಕ್ತರ ಒತ್ತಾಸೆಯಾಗಿದೆ. ಸರ್ಕಾರ ಈ ಕುರಿತು ಗಮನ ಹರಿಸಬೇಕು' ಎಂದು ಅನ್ನದಾನೀಶ್ವರ ವಿದ್ಯಾ ಸಮಿತಿಯ ಆಡಳಿತಾಧಿಕಾರಿ ಡಾ.ಬಿ.ಜಿ.ಜವಳಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.