
ನರಗುಂದ: ತಾಲ್ಲೂಕು ಸೇರಿದಂತೆ ಗದಗ, ಬೆಳಗಾವಿ, ಧಾರವಾಡ, ಬಾಗಲಕೋಟೆ ಸೇರಿದಂತೆ ನಾಲ್ಕು ಜಿಲ್ಲೆಯ 11 ತಾಲ್ಲೂಕಿನಲ್ಲಿ ಹರಿಯುತ್ತಿರುವ ಮಲಪ್ರಭಾ ನದಿಗೆ ಮಹದಾಯಿ ನದಿ ಹಾಗೂ ಕಳಸಾ ಬಂಡೂರಿ ನಾಲೆಗಳನ್ನು ಜೋಡಿಸಿ ಈ ಭಾಗದ ಜಮೀನುಗಳಿಗೆ ನೀರಾವರಿ ರೂಪಿಸುವ ಮಹದಾಯಿ, ಕಳಸಾ ಬಂಡೂರಿ ಯೋಜನೆ ಇಂದಿಗೂ ಕನಸಾಗಿಯೇ ಉಳಿದಿದೆ. ಯೋಜನೆ ಅನುಷ್ಟಾನಕ್ಕಾಗಿ ನಾಲ್ಕು ದಶಕಗಳಿಂದ ರೈತರ ಹೋರಾಟ ನಡೆದೇ ಇದೆ.
ಆರಂಭದಲ್ಲಿ ಕಳಸಾ ಬಂಡೂರಿ ನಾಲೆ ಜೋಡಿಸಬೇಕೆಂದು ಈ ಭಾಗದ ರೈತರ ಹೋರಾಟ ನಡೆಸಿದರು. 25 ವರ್ಷಗಳ ಹಿಂದೆ ವಿಜಯ ಕುಲಕರ್ಣಿ ನೇತೃತ್ವದಲ್ಲಿ ಕಳಸಾ ಬಂಡೂರಿಯ 7.32 ಟಿಎಂಸಿ ಅಡಿ ನೀರು ಪಡೆಯಲು ನರಗುಂದದಲ್ಲಿ ಹೋರಾಟ ನಡೆಯಿತು. ಈ ಹೋರಾಟದಲ್ಲಿ ಈಗಿನ ಬಿಜೆಪಿ ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿಗಳು ಭಾಗವಹಿಸಿ ಇದರ ಲಾಭ ಪಡೆದರು. ಇವರಲ್ಲಿ ಬಸವರಾಜ ಬೊಮ್ಮಾಯಿ, ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ, ಸಿ.ಸಿ.ಪಾಟೀಲ, ಪಿ.ಸಿ.ಗದ್ದಿಗೌಡ್ರ ಪ್ರಮುಖರು.
ಆ ಹೋರಾಟದ ಫಲವಾಗಿ ಅಂದಿನ ನೀರಾವರಿ ಮಂತ್ರಿ ಕೆ.ಎಸ್.ಈಶ್ವರಪ್ಪ ಕಳಸಾ ಬಂಡೂರಿ ಕಾಮಗಾರಿಗೆ ಭೂಮಿಪೂಜೆ ನಡೆಸಿದ್ದರು. ಆದರೆ, ಗೋವಾ ರಾಜ್ಯದ ತಕರಾರಿನಿಂದ ನನೆಗುದಿಗೆ ಬಿದ್ದಿತು.
ನಂತರ ಬಂದ ಕಾಂಗ್ರೆಸ್ ಸರ್ಕಾರ ಮಹದಾಯಿ ಹೆಸರಿನಲ್ಲಿ ಯೋಜನೆ ರೂಪಿಸಿ, ನ್ಯಾಯಮಂಡಳಿ ರಚಿಸಿತು. ಇದರಿಂದ 27 ಟಿಎಂಸಿ ಅಡಿ ನೀರು ಪಡೆಯುವ ಯೋಜನೆ ಇದಾಗಿದೆ.
ಮತ್ತೇ 2015ರಲ್ಲಿ ನರಗುಂದದಲ್ಲಿ ರೈತ ಸೇನೆಯ ವೀರೇಶ ಸೊಬರದಮಠ, ಶಂಕರ ಅಂಬಲಿ ನೇತೃತ್ವದಲ್ಲಿ ಮಹದಾಯಿ ಅನುಷ್ಟಾನಕ್ಕೆ ಹೋರಾಟ ಆರಂಭವಾಯಿತು. ಆರಂಭದ ಎರಡು ವರ್ಷ ಹೋರಾಟ ವಿಭಿನ್ನ ರೂಪ ಪಡೆದು ಜನಾಂದೋಲನವಾಯಿತು. ಈಗಲೂ ಅಂದಿನಿಂದ ನಿತ್ಯ ಧರಣಿ ಮುಂದುವರಿದಿದೆ. ಈ ಹೋರಾಟದ ಪರಿಣಾಮವೆಂಬಂತೆ 2018ರಲ್ಲಿ ನ್ಯಾಯಮಂಡಳಿ ನೀರು ಹಂಚಿಕೆ ಮಾಡಿತು. ನಂತರ ಅಧಿಸೂಚನೆ ಹೊರಡಿಸಲಾಯಿತು. ಆದರೆ, ಗೋವಾದ ನಿರಂತರ ತಕರಾರು, ಪರಿಸರ ಇಲಾಖೆ, ಜೈವಿಕ ಮಂಡಳಿ ಅನುಮತಿ ಇಲ್ಲದಿರುವುದು, ಹುಲಿ ಕಾರಿಡಾರ್ ನೆಪ ಹೀಗೆ ಒಂದಿಲ್ಲೊಂದು ಕಾರಣ ಒಡ್ಡಿ ಯೋಜನೆ ಜಾರಿಯಾಗದಂತಾಗಿದೆ. ಇದರ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ ಆರೋಪ, ಪ್ರತ್ಯಾರೋಪ ಮಾಡುತ್ತಾ ಕಾಲದೂಡುತ್ತಿವೆ. ಮಹದಾಯಿ, ಕಳಸಾ ಬಂಡೂರಿ ನೀರು ಮಾತ್ತ ಹರಿದಿಲ್ಲ.
ಯೋಜನೆ ಶೀಘ್ರ ಅನುಷ್ಟಾನಗೊಳಿಸಿ:
ಸೊಬರದಮಠ ಕಳಸಾ ಬಂಡೂರಿ ಯೋಜನೆ ಅನುಷ್ಟಾನದಲ್ಲಿ ಕೇಂದ್ರ ಸರ್ಕಾರದ ಪಾತ್ರ ಹೆಚ್ಚಾಗಿದೆ. ಇದಕ್ಕೆ ಕೂಡಲೇ ಪರಿಸರ ವನ್ಯಜೀವಿ ಮಂಡಳಿಯಿಂದ ಅನುಮತಿ ನೀಡಬೇಕು. ಈಗಾಗಲೇ ನ್ಯಾಯಮಂಡಳಿಯಿಂದ ನೀರು ಹಂಚಿಕೆಯಾಗಿದೆ. ಅದನ್ನು ಪಡೆಯಲು ಗೋವಾದ ತಕರಾರು ಗಮನಿಸುವುದು ಸರಿಯಾದ ಕ್ರಮ ಅಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಈ ಭಾಗದ ಜನರ ಸಮಸ್ಯೆ ಅರಿತು ಕಳಸಾ ಬಂಡೂರಿ ಅನುಷ್ಟಾನಗೊಳಿಸಬೇಕು.–ವೀರೇಶ ಸೊಬರದಮಠ ಅಧ್ಯಕ್ಷರು ರೈತಸೇನಾ ಕರ್ನಾಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.