
ಲಕ್ಷ್ಮೇಶ್ವರ: ಯುವ ರೈತರು ಕೃಷಿ ಕ್ಷೇತ್ರದಲ್ಲಿ ವಿನೂತನ ಪ್ರಯೋಗ ಮಾಡುತ್ತ ಯಶಸ್ಸು ಕಂಡು ಇತರ ರೈತರಿಗೆ ಮಾದರಿ ಆಗುತ್ತಿದ್ದಾರೆ. ಅಂಥವರ ಸಾಲಿನಲ್ಲಿ ಪಟ್ಟಣದ ತಾಲ್ಲೂಕು ರಾಮಗೇರಿ ಗ್ರಾಮದ ಮಹೇಂದ್ರ ಬೆಟಗೇರಿ ಕೂಡ ಒಬ್ಬರು.
25 ವರ್ಷಗಳ ಹಿಂದೆ ಅವರ ತಂದೆ ನಾಟಿ ಮಾಡಿದ್ದ 400 ಸಾಗವಾನಿ, 250 ಮಹಾಗನಿ, 300 ಶ್ರೀಗಂಧದ ಗಿಡಗಳು ಇಂದು ದೊಡ್ಡ ಮರಗಳಾಗಿ ಬೆಳೆದು ನಿಂತಿವೆ. ಮಹೇಂದ್ರ ಅವರು ತಂದೆ ನಾಟಿ ಮಾಡಿದ್ದ ಗಿಡಗಳ ಪಾಲನೆಯೊಂದಿಗೆ 500 ಅಡಿಕೆ ಗಿಡ ನಾಟಿ ಮಾಡಿದ್ದಾರೆ. ಐದು ವರ್ಷಗಳಿಂದ ಕುರಿ, ಆಡು, ದೇಸಿ ಆಕಳು ಹಾಗೂ ನಾಟಿ ಕೋಳಿ ಸಾಕಣೆಯಲ್ಲಿ ತೊಡಗಿದ್ದಾರೆ.
‘ಶೈಲೇಜ್’ ಹೆಸರಿನ ಟಾನಿಕ್ ತಯಾರಿಸುವ ಅವರು ಮೆಕ್ಕೆಜೋಳ, ಬೆಲ್ಲ, ಉಪ್ಪು, ಮಿನರಲ್ ಮಿಕ್ಸರ್, ಜವಾರಿ ಆಕಳ ಮಜ್ಜಿಗೆ ಮಿಶ್ರಣವನ್ನು ಬ್ಯಾರೆಲ್‍ಗಳಲ್ಲಿ ತುಂಬಿಸಿ ಕಳೆಯಲು ಬಿಡುತ್ತಾರೆ. ಒಂದು ತಿಂಗಳ ನಂತರ ಈ ಮಿಶ್ರಣ ಜಾನುವಾರುಗಳಿಗೆ ನೀಡುತ್ತಾರೆ. ಇದರಿಂದ ಕುರಿ ಮತ್ತು ದೇಶಿ ಆಕಳು ದಷ್ಟಪುಷ್ಟವಾಗಿವೆ.
ಹುಲಕೋಟಿಯ ಕೆವಿಕೆಯಲ್ಲಿ ಆಧುನಿಕ ಕೃಷಿ ಕುರಿತು ತರಬೇತಿ ಪಡೆಯುವ ಅವರು ಜೀವಾಮೃತ, ಗೋಕೃಪಾಮೃತ, ಘನ ಜೀವಾಮೃತ ತಯಾರಿಸಿ ಬೆಳೆಗಳಿಗೆ ಬಳಸುತ್ತಾರೆ. ಇದೀಗ ಮಹೇಂದ್ರ ಅವರು ಸಾಂಪ್ರದಾಯಿಕ ಪದ್ಧತಿಯಂತೆ ಎತ್ತಿನ ಗಾಣದ ಅಡುಗೆ ಎಣ್ಣೆ ತಯಾರಿಸಲು ಪ್ರಾರಂಭಿಸಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರಿನಿಂದ ಬಾಗೇಮರದಿಂದ ಸಿದ್ಧಪಡಿಸಿದ ಎಣ್ಣೆಗಾಣ ತರಿಸಿದ್ದಾರೆ. ಎಣ್ಣೆಗಾಣ ನಿರ್ಮಿಸಲು ₹80 ಸಾವಿರ ಖರ್ಚು ಮಾಡಿದ್ದಾರೆ. ಶೇಂಗಾ, ಕೊಬ್ಬರಿ, ಕುಸುಬಿ ಸೇರಿದಂತೆ ಎಲ್ಲ ರೀತಿಯ ಎಣ್ಣೆ ತಯಾರಿಸುತ್ತಿದ್ದಾರೆ. ಗಾಣದಲ್ಲಿ ತಯಾರಿಸಲಾದ ಎಣ್ಣೆಯನ್ನು ಸೋಲಾರ್ ಡ್ರೈಯರ್ ಟೆಂಟ್‍ನಲ್ಲಿ ಇಡುತ್ತಾರೆ. ಇದರಿಂದ ಎಣ್ಣೆ ಶುದ್ಧೀಕರಣ ಆಗುತ್ತದೆ. ಶುದ್ಧೀಕರಿಸಿದ ಎಣ್ಣೆಯನ್ನು ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡುತ್ತಾರೆ.
ಶೇಂಗಾ ಎಣ್ಣೆ ಲೀಟರ್ ₹390, ಕೊಬ್ಬರಿ ಎಣ್ಣೆ ₹630, ಕುಸುಬಿ ಎಣ್ಣೆ ₹650 ದರದಂತೆ ಮಾರಾಟ ಮಾಡುತ್ತಾರೆ. ಪರಿಶುದ್ಧ ಎಣ್ಣೆ ತಯಾರಿಸಿ ಹುಬ್ಬಳ್ಳಿ, ರಾಯಚೂರು, ಗದಗ, ಬೆಂಗಳೂರು, ದಾವಣಗೆರೆವರೆಗೂ ಮಾರಾಟ ಮಾಡುತ್ತಾರೆ.
‘ರೈತರು ಕೇವಲ ಕೃಷಿಯನ್ನು ನೆಚ್ಚಿಕೊಳ್ಳದೆ ಅದರೊಂದಿಗೆ ಒಕ್ಕಲುತನ ಆಧಾರಿತ ಉಪಕಸುಬುಗಳನ್ನು ಮಾಡಿದಾಗ ಮಾತ್ರ ಲಾಭ ಗಳಿಸಲು ಸಾಧ್ಯ’ ಎಂದು ಸಾವಯವ ಕೃಷಿಕ ಬಸವರಾಜ ಬೆಂಡಿಗೇರಿ ಹಾಗೂ ಪ್ರಗತಿಪರ ರೈತ ಮಹೇಶ ಲಿಂಬಯ್ಯಸ್ವಾಮಿಠ ಹೇಳಿದರು.
ಗಾಣದಲ್ಲಿ ತಯಾರಿಸಲಾದ ಅಡುಗೆ ಎಣ್ಣೆ ಸಾವಯವ ರೈತ ಲೇಬಲ್ ಹೆಸರಲ್ಲಿ ಮಾರಾಟ ಮಾಡಲು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಎಣ್ಣೆಗೆ ಬೇಡಿಕೆ ಹೆಚ್ಚಾಗಲಿದೆಮಹೇಂದ್ರ ಬೆಟಗೇರಿ ಪ್ರಗತಿಪರ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.