ADVERTISEMENT

ಗಜೇಂದ್ರಗಡ | ಗೋವಿನಜೋಳ ಬೆಲೆ ಕುಸಿತ: ರೈತ ಕಂಗಾಲು

ಶ್ರೀಶೈಲ ಎಂ.ಕುಂಬಾರ
Published 18 ಅಕ್ಟೋಬರ್ 2025, 4:44 IST
Last Updated 18 ಅಕ್ಟೋಬರ್ 2025, 4:44 IST
ಗಜೇಂದ್ರಗಡ ತಾಲ್ಲೂಕಿನ ಗ್ರಾಮವೊಂದರ ಬಡಾವಣೆಯ ಸಿಸಿ ರಸ್ತೆಯಲ್ಲಿ ರೈತರು ಗೋವಿನಜೋಳ ಒಣಗಿಸುತ್ತಿರುವುದು
ಗಜೇಂದ್ರಗಡ ತಾಲ್ಲೂಕಿನ ಗ್ರಾಮವೊಂದರ ಬಡಾವಣೆಯ ಸಿಸಿ ರಸ್ತೆಯಲ್ಲಿ ರೈತರು ಗೋವಿನಜೋಳ ಒಣಗಿಸುತ್ತಿರುವುದು   

ಗಜೇಂದ್ರಗಡ: ಅತಿವೃಷ್ಟಿಯಿಂದಾಗಿ ಹೆಸರು ಬೆಳೆ ಸಂಪೂರ್ಣ ಹಾಳಾಗಿದೆ. ಅಲ್ಪಸ್ವಲ್ಪ ಗೋವಿನಜೋಳದ ಫಸಲು ರೈತರ ಕೈ ಸೇರಿದೆ. ಆದರೆ ರೈತರ ಫಸಲು ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಬೆಲೆ ಕುಸಿತ ಕಂಡಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ತಾಲ್ಲೂಕಿನ ರೈತರು ನೀರಾವರಿ ಮತ್ತು ಖುಷ್ಕಿ ಜಮೀನುಗಳಲ್ಲಿ ಗೋವಿನ ಜೋಳ ಬೆಳೆದಿದ್ದು, ನಿತ್ಯ ಎಪಿಎಂಸಿಗೆ ಗೋವಿನ ಜೋಳ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಿಂದ ಪ್ರತಿ ದಿನ 10 ಸಾವಿರ ಚೀಲದಷ್ಟು ಗೋವಿನ ಜೋಳದ ಆವಕವಿದೆ. ಕಳೆದೊಂದು ತಿಂಗಳ ಹಿಂದೆ ಗೋವಿನ ಜೋಳ ಪ್ರತಿ ಕ್ವಿಂಟಲ್ ಗೆ ₹2,485 ಇತ್ತು. ಆದರೆ, ಮಾರುಕಟ್ಟೆಗೆ ರೈತರ ಫಸಲು ಬರುತ್ತಿದ್ದಂತೆ ದರದಲ್ಲಿ ಕುಸಿತವಾಗುತ್ತಿದೆ. ಸದ್ಯ ಪ್ರತಿ ಕ್ವಿಂಟಲ್‌ಗೆ ₹1,700ರಿಂದ ₹2,050ರವರೆಗೆ ಮಾರಾಟವಾಗುತ್ತಿದೆ. ಗುಣಮಟ್ಟವಿಲ್ಲದ ಗೋವಿನಜೋಳ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹1,300ಕ್ಕೆ ಮಾರಾಟವಾಗುತ್ತಿದೆ.

‘ಗೋವಿನಜೋಳದ ಆವಕ ಕಡಿಮೆಯಿದ್ದಾಗ ಪ್ರತಿ ಕ್ವಿಂಟಲ್‌ಗೆ ₹2,485ಕ್ಕೆ ಮಾರಾಟವಾಗುತ್ತಿತ್ತು. ದಿನ ಕಳೆದಂತೆ ಮಾರುಕಟ್ಟೆಗೆ ಫಸಲು ಹೆಚ್ಚಿನ ಪ್ರಮಾಣದಲ್ಲಿ ಆವಕ ಆಗುತ್ತಿರುವುದರಿಂದ ಬೆಲೆ ಕಡಿಮೆಯಾಗಿದೆ. ಅಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿಯೂ ರೈತರು ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳ ಬೆಳೆದಿರುವುದರಿಂದ ಹಾಗೂ ಮಾರುಕಟ್ಟೆಗೆ ಒಮ್ಮೆಲೆ ಫಸಲು ಆವಕ ಆಗುವುದರಿಂದ ಬೆಲೆ ಕಡಿಮೆಯಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

ಜಮೀನು ಹದಗೊಳಿಸುವುದು, ಬೀಜ-ಗೊಬ್ಬರ, ಆಳು, ಪಿಳಗುಂಟಿ ಹೊಡೆಯುವುದು, ಕಟಾವು ಮಾಡುವುದು ಸೇರಿದಂತೆ ಎಕರೆಗೆ ಸುಮಾರು ₹15ರಿಂದ ₹20 ಸಾವಿರದಷ್ಟು ಖರ್ಚಾಗುತ್ತದೆ. ಅಲ್ಲದೆ ರಾಶಿ ಮಾಡಿದ ಫಸಲನ್ನು ಬಿಸಿಲಿನಲ್ಲಿ ಒಣಗಿಸಿ ಹದಗೊಳಿಸುತ್ತೇವೆ. ಆದರೆ, ಪ್ರತಿವರ್ಷ ಮಾರುಕಟ್ಟೆಯಲ್ಲಿ ರೈತರ ಗೋವಿನ ಜೋಳದ ಬಂದಾಗಲೆಲ್ಲ ಬೆಲೆ ಕಡಿಮೆಯಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಭರಪೂರ ಭರವಸೆ ನೀಡುವ ರಾಜಕಾರಣಿಗಳು ರೈತನ ಫಸಲಿಗೆ ವೈಜ್ಞಾನಿಕ ಬೆಲೆ ಕೊಡಿಸುವಲ್ಲಿ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ದುರಂತ’ ಎಂದು ರೈತರಾದ ಅಂದಪ್ಪ ಅಂಗಡಿ, ಶರಣಪ್ಪ ಪಾಟೀಲ ಬೇಸರ ವ್ಯಕ್ತಪಡಿಸಿದರು.

ಗಜೇಂದ್ರಗಡ ಎಪಿಎಂಸಿಗೆ ರೈತರು ಟ್ರ್ಯಾಕ್ಟರ್‌ಗಳಲ್ಲಿ ಗೋವಿನಜೋಳದ ಫಸಲು ತರುತ್ತಿರುವುದು

ರೈತರಿಗಿಂತ ವರ್ತಕರಿಗೆ ಲಾಭ: ಆಕ್ರೋಶ

‘ಪ್ರತಿ ಬಾರಿ ರೈತರ ಫಸಲು ಮಾರುಕಟ್ಟೆಗೆ ಬರುತ್ತಿದ್ದಂತೆ ಖರೀದಿದಾರರು ದಿಢೀರ್‌ ಬೆಲೆ ಕಡಿಮೆ ಮಾಡುತ್ತಾರೆ. ಸಾಲ ಮಾಡಿ ಬಿತ್ತನೆ ಮಾಡಿರುವ ರೈತರು ಸಾಲ ತೀರಿಸಿದರೆ ಸಾಕು ಎಂಬ ಹತಾಶೆಯಿಂದ ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಾರೆ’ ಎಂದು ಜೈಭೀಮ ಸೇನೆಯ ಗಜೇಂದ್ರಗಡ ತಾಲ್ಲೂಕು ಘಟಕದ ಅಧ್ಯಕ್ಷ ಅಂದಪ್ಪ ರಾಠೋಡ ಹೇಳಿದರು. ‘ಆದರೆ ರೈತರ ಪರವಾಗಿ ಕೆಲಸ ಮಾಡಬೇಕಾದ ಸರ್ಕಾರಗಳು ರೈತ ಎಲ್ಲ ಫಸಲು ಮಾರಾಟ ಮಾಡಿದ ಮೇಲೆ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ಆರಂಭಿಸುತ್ತಾರೆ. ಇದರಿಂದ ರೈತರ ಹೆಸರಿನಲ್ಲಿ ವರ್ತಕರು ಲಾಭ ಪಡೆಯುತ್ತಾರೆಯೇ ಹೊರತು ರೈತರಿಗೆ ಯಾವುದೇ ಲಾಭ ಸಿಗುವುದಿಲ್ಲʼ ಎಂದು ಜೈ ಆಕ್ರೋಶ ವ್ಯಕ್ತಪಡಿಸಿದರು.

ಹಿಂಗಾರು ಬಿತ್ತನೆಗೆ ಸಿದ್ಧತೆ

ತಾಲ್ಲೂಕಿನಲ್ಲಿ 20 ದಿನಗಳಿಂದ ಮಳೆ ಬಿಡುವು ನೀಡಿದ್ದು ರೈತರು ಕಟಾವಿಗೆ ಬಂದಿರುವ ಗೋವಿನಜೋಳ ರಾಶಿ ಮಾಡಿ ಹಿಂಗಾರು ಬಿತ್ತನೆಗೆ ಹೊಲ ಹದಗೊಳಿಸುತ್ತಿದ್ದಾರೆ. ಈ ಬಾರಿ ನಿರಂತರ ಮಳೆಯಿಂದಾಗಿ ಎರಿ ಭೂಮಿಯಲ್ಲಿ ಕಟಾವಿಗೆ ಬಂದಿದ್ದ ಗೋವಿನಜೋಳದ ರಾಶಿ ಮಾಡಲು ಸಾಧ್ಯವಾಗಿರಲಿಲ್ಲ. ಸದ್ಯ ಮಳೆ ಬಿಡುವು ನೀಡಿದ್ದು ರೈತರು ಬೃಹತ್‌ ರಾಶಿ ಯಂತ್ರಗಳು ಹಾಗೂ ಸಾಂಪ್ರದಾಯಿಕವಾಗಿ ತೆನೆ ಮುರಿದು ರಾಶಿ ಮಾಡುತ್ತಿದ್ದಾರೆ. ತೇವಾಂಶವಿರುವ ಗೋವಿನ ಜೋಳದ ಕಾಳು ಒಣಗಿಸಲು ರೈತರು ಬಯಲು ಜಾಗೆ ನೂತನ ಬಡಾವಣೆಗಳ ಸಿಸಿ ರಸ್ತೆಯಲ್ಲಿ ಒಣ ಹಾಕಿರುವುದು ಸಾಮಾನ್ಯವಾಗಿದೆ. ಈಗಾಗಲೇ ಹಿಂಗಾರು ಬಿತ್ತನೆಗೆ 10-15 ದಿನಗಳಿರುವುದರಿಂದ ಗೋವಿನಜೋಳ ಬಿತ್ತನೆ ಮಾಡಿದ್ದ ರೈತ ಕುಟುಂಬದ ಕೆಲವರು ರಾಶಿ ಮಾಡಿರುವ ಗೋವಿನಜೋಳ ಒಣಗಿಸುವ ಕಾಯಕದಲ್ಲಿ ತೊಡಗಿದ್ದರೆ ಇನ್ನು ಕೆಲವರು ಹೊಲ ಹದಗೊಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಅಲ್ಲದೆ ಮಾರುಕಟ್ಟೆಯಲ್ಲಿ ಬೀಜ ಗೊಬ್ಬರ ಖರೀದಿಸಿ ಬಿತ್ತನೆಗೆ ಅಣಿಯಾಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.