ADVERTISEMENT

ದಲಿತ ಸಿಎಂ ಬಿಎಸ್‌ಪಿಯಿಂದಷ್ಟೇ ಸಾಧ್ಯ: ರಾಜ್ಯ ಪ್ರಧಾನ ಕಾರ್ಯದರ್ಶಿ ಈರಣ್ಣ ಜಿ.

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 5:42 IST
Last Updated 11 ಜುಲೈ 2021, 5:42 IST

ಗದಗ: ‘ರಾಜ್ಯದಲ್ಲಿ ದಲಿತ ಮುಖಂಡರೊಬ್ಬರು ಮುಖ್ಯಮಂತ್ರಿ ಆಗಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೆ ಕಾಂಗ್ರೆಸ್‌, ಬಿಜೆಪಿ ಅಥವಾ ಜೆಡಿಎಸ್‌ ಈ ಮೂರೂ ಪಕ್ಷಗಳು ದಲಿತರಿಗೆ ಸಿಎಂ ಪಟ್ಟ ನೀಡುವುದಿಲ್ಲ. ಆ ಕನಸು ಈಡೇರುವುದು ಬಿಎಸ್‌ಪಿಯಿಂದ ಮಾತ್ರ’ ಎಂದು ಬಹುಜನ ಸಮಾಜ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಈರಣ್ಣ ಜಿ.ಮೌರ್ಯ ಹೇಳಿದರು.

ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಜೋರಾಗಿ ನಡೆದಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರ ಅಭಿಮಾನಿಗಳು ನಮ್ಮ ನಾಯಕನೇ ಮುಂದಿನ ಸಿಎಂ ಎಂದು ಎಲ್ಲಡೆ ಪ್ರಚಾರ ಮಾಡುತ್ತಿದ್ದಾರೆ. ಇದರ ನಡುವೆ ಮೂರನೇ ಗುಂಪು ಕೆ.ಎಚ್‌.ಮುನಿಯಪ್ಪ, ಡಾ. ಜಿ.ಪರಮೇಶ್ವರ ಅವರ ಬೆಂಬಲಿಗರು ಅಲ್ಲಲ್ಲಿ ಸಭೆ ನಡೆಸಿ ಚರ್ಚಿಸುತ್ತಿದ್ದಾರೆ’ ಎಂದು ಹೇಳಿದರು.

‘ಡಾ. ಜಿ.ಪರಮೇಶ್ವರ ಅವರನ್ನು, ಅದಕ್ಕಿಂತ ಮುಂಚೆ ಖರ್ಗೆ ಸೇರಿ ಹಲವು ದಲಿತ ನಾಯಕರನ್ನು ಮುಂದಿಟ್ಟು ಚುನಾವಣೆ ನಡೆಸಿ, ಅಧಿಕಾರಕ್ಕೆ ಬಂದ ಕಾಂಗ್ರೆಸ್ ದಲಿತರನ್ನು ಸಿಎಂ ಮಾಡಲಿಲ್ಲ. ಈಗಾಗಲೇ ಕಾಂಗ್ರೆಸ್‍ನಲ್ಲಿ 3-4 ಗುಂಪುಗಳಾಗಿವೆ. ಇನ್ನು ಬಿಜೆಪಿ, ಜೆಡಿಎಸ್ ಸಹ ಇದರಿಂದ ಹೊರತಾಗಿಲ್ಲ’ ಎಂದು ಕಿಡಿಕಾರಿದರು.

ADVERTISEMENT

‘ದಲಿತ ನಾಯಕಿ ಮಾಯಾವತಿ ಅವರು ಮಾತ್ರ ಸ್ವಂತ ಬಲದ ಮೇಲೆ ನಾಲ್ಕು ಬಾರಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾದವರು. ದಲಿತರು ಸಿಎಂ ಹುದ್ದೆಗೆ ಏರುವುದು ಕೇವಲ ಬಿಎಸ್‍ಪಿಯಿಂದ ಮಾತ್ರ ಎನ್ನುವುದನ್ನು ಈಗಾಗಲೇ ಪಕ್ಷದ ವರಿಷ್ಠೆ ಮಾಯಾವರಿ ಸಾಬೀತು ಪಡಿಸಿದ್ದಾರೆ’ ಎಂದು ಹೇಳಿದರು.

‘ದಲಿತರನ್ನು ಮತ ಬ್ಯಾಂಕ್‍ ಆಗಿ ಬಳಸಿಕೊಂಡ ಕಾಂಗ್ರೆಸ್ ಎಂದಿಗೂ ದಲಿತರನ್ನು ಸಿಎಂ ಮಾಡುವುದಿಲ್ಲ. ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸೇರಿ ಯಾವುದೇ ಚುನಾವಣೆಗಳಲ್ಲಿ ದಲಿತರು ಕಾಂಗ್ರೆಸ್‍ಗೆ ಮತ ನೀಡುವಾಗ ಯೋಚಿಸಬೇಕು’ ಎಂದು ಹೇಳಿದರು.

ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ. ಗುರುಮೂರ್ತಿ, ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಸ್.ಕಟ್ಟಿಮನಿ, ಜಿಲ್ಲಾ ಸಂಯೋಜಕ ಬಸವರಾಜ ನವಲಗುಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.