
ನರಗುಂದ: ನರಗುಂದ ಬ್ಲಾಕ್‌ನ ಮಲಪ್ರಭಾ ಕಾಲುವೆಗಳಿಗೆ ನವಿಲುತೀರ್ಥ ಜಲಾಶಯದ ನೀರು ಸಮರ್ಪಕವಾಗಿ ಹರಿಯದಿದ್ದಕ್ಕೆ ಆಕ್ರೋಶಗೊಂಡ ರೈತರು ಶುಕ್ರವಾರ ಪಟ್ಟಣದ ನೀರಾವರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಎರಡು ಗಂಟೆಗಳ ಕಾಲಕ್ಕಿಂತಲೂ ಹೆಚ್ಚು ಸಮಯ ಪ್ರತಿಭಟನೆ ನಡೆಸಿದ ರೈತರು ಅಧಿಕಾರಿಗಳು ಬಂದು ಸ್ಪಷ್ಟನೆ ನೀಡಬೇಕು ಅಲ್ಲಿಯವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ಆದರೆ ನೀರಾವರಿ ಇಲಾಖೆ ಎಂಜಿನಿಯರ್‌ಗಳು ಬೆಂಗಳೂರಿಗೆ ತೆರಳಿದ್ದರು.
ಕೊನೆಗೆ ಸಿಬ್ಬಂದಿ ಮೂಲಕ ವಿಷಯ ತಿಳಿದ ಎಂಜಿನಿಯರ್ ಕುರಿ ಅವರು ದೂರವಾಣಿ ಮೂಲಕ ರೈತರೊಂದಿಗೆ ಮಾತನಾಡಿ, ಈಗಾಗಲೇ ನೀರು ಬಿಡಲಾಗಿದೆ. ಹೆಚ್ಚಿನ ನೀರು ನಾಳೆ ಬಿಡಲಾಗುವುದೆಂದು ತಿಳಿಸಿದರು. ಆಗ ಸಮಾಧಾನಗೊಂಡ ರೈತರು ಪ್ರತಿಭಟನೆ ನಿಲ್ಲಿಸಿದರು.
ರೈತಸೇನೆ ಮುಖಂಡ ಎಸ್.ಬಿ.ಜೋಗಣ್ಣವರ ಮಾತನಾಡಿ, ನ.11ರಿಂದಲೇ ಕಾಲುವೆಗಳಿಗೆ ನೀರು ಹರಿಸುತ್ತಿದ್ದಾರೆ. ಆದರೆ ಕನಿಷ್ಠ 900 ಕ್ಯೂಸೆಕ್ ನೀರು ಹರಿಸಿದಾಗ ನರಗುಂದ ಭಾಗದಲ್ಲಿ ಸಂಪೂರ್ಣ ನೀರು ದೊರೆಯುತ್ತದೆ. ಆದರೆ ಈಗ ಕೇವಲ 200ಕ್ಯೂಸೆಕ್ ನೀರು ಹರಿಸಲಾಗಿದೆ. ಇಷ್ಟು ಕಡಿಮೆ ನೀರಿಗೆ ನಮ್ಮ ಜಮೀನುಗಳಿಗೆ ನೀರು ತಲುಪುವುದಿಲ್ಲ. ಅದಕ್ಕಾಗಿ ಪ್ರತಿಭಟನೆ ನಡೆಸಲಾಯಿತು. ಈಗ 600ಕ್ಯೂಸೆಕ್ ನೀರು ಬಿಡಲಾಗಿದೆ. ಆ ನೀರು ನಮಗೆ ತಲುಪಬೇಕಾದರೆ ಎರಡು ದಿನ ಬೇಕು. ಆದ್ದರಿಂದ ಶನಿವಾರ ಒಟ್ಟು 900 ಕ್ಯೂಸೆಕ್ ನೀರು ಹರಿಸಬೇಕು. ಇಲ್ಲವಾದರೆ ಮತ್ತೆ ನೀರಾವರಿ ಕಚೇರಿ ಎದುರು ಪ್ರತಿಭಟನೆ ನಿಶ್ಚಿತ ಎಂದು ಜೋಗಣ್ಣವರ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಹನಮಂತ ಸರನಾಯ್ಕರ, ಎಸ್.ಕೆ.ಗಿರಿಯಣ್ಣವರ, ಎಂ.ಆರ್.ಪಾಟೀಲ ಹಾಗೂ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.