ADVERTISEMENT

ಪ್ರವಾಹ ಪೀಡಿತರಿಗೆ ‘ಆಸರೆ’ಯಾಗದ ಮನೆಗಳು

ಮೂಲ ಗ್ರಾಮ ತೊರೆಯಲು ಗ್ರಾಮಸ್ಥರ ಹಿಂದೇಟು; ಪಾಳುಬಿದ್ದಿವೆ ಸಾವಿರಾರು ಮನೆಗಳು

ಜೋಮನ್ ವರ್ಗಿಸ್
Published 9 ಆಗಸ್ಟ್ 2019, 8:46 IST
Last Updated 9 ಆಗಸ್ಟ್ 2019, 8:46 IST
ರೋಣ ಮತ್ತು ಹೊಳೆಆಲೂರು ಮಾರ್ಗದ ಮಧ್ಯದಲ್ಲಿ ನಿರ್ಮಿಸಿರುವ ಆಸರೆ ಮನೆಗಳು ಜಾಲಿ ಮುಳ್ಳಿನಿಂದ ಆವೃತವಾಗಿದೆ
ರೋಣ ಮತ್ತು ಹೊಳೆಆಲೂರು ಮಾರ್ಗದ ಮಧ್ಯದಲ್ಲಿ ನಿರ್ಮಿಸಿರುವ ಆಸರೆ ಮನೆಗಳು ಜಾಲಿ ಮುಳ್ಳಿನಿಂದ ಆವೃತವಾಗಿದೆ   

ಗದಗ: ದಶಕದ ನಂತರ ಜಿಲ್ಲೆಯಲ್ಲಿ ಮತ್ತೆ ಮಲಪ್ರಭಾ ನದಿ ಮತ್ತು ಬೆಣ್ಣೆಹಳ್ಳದ ಪ್ರವಾಹ ಉಂಟಾಗಿದ್ದು, ರೋಣ ಮತ್ತು ನರಗುಂದ ತಾಲ್ಲೂಕಿನ 13 ಗ್ರಾಮಗಳ 15 ಸಾವಿರಕ್ಕೂ ಹೆಚ್ಚು ಜನರು ನೆರೆ ಹಾವಳಿಗೆ ತತ್ತರಿಸಿದ್ದಾರೆ.

ಜಿಲ್ಲೆಯಲ್ಲಿ 2007 ಮತ್ತು 2009ರಲ್ಲಿ ಪ್ರವಾಹ ಉಂಟಾದಾಗ, ಈ ಎರಡೂ ತಾಲ್ಲೂಕುಗಳ ನದಿದಂಡೆಯ ಗ್ರಾಮಸ್ಥರನ್ನು ಶಾಶ್ವತವಾಗಿ ಸ್ಥಳಾಂತರಿಸಲು ಜಿಲ್ಲಾಡಳಿತವು 6,500 ‘ಆಸರೆ’ ಮನೆಗಳನ್ನು ನಿರ್ಮಿಸಿತ್ತು. ಆದರೆ, ಗ್ರಾಮಸ್ಥರು ಮೂಲ ಗ್ರಾಮಗಳನ್ನು ತೊರೆದು ಈ ಮನೆಗಳಿಗೆ ಬರಲು ಹಿಂದೇಟು ಹಾಕಿದ್ದರು. ಹೀಗಾಗಿ ನಿರ್ಮಿಸಿದ್ದ ಮನೆಗಳಲ್ಲಿ ಶೇ 90ರಷ್ಟು ಮನೆಗಳು ಜನವಸತಿ ಇಲ್ಲದೇ ಪಾಳುಬಿದ್ದಿವೆ.

ರೋಣ ತಾಲ್ಲೂಕಿನ ಹೊಳೆಆಲೂರ, ಹೊಳೆಮಣ್ಣೂರ, ಅಮರಗೋಳ, ಗಾಡಗೋಳಿ, ಕುರುವಿನಕೊಪ್ಪ, ಯಾ.ಸ ಹಡಗಲಿ, ಮಾಳವಾಡ, ಮೆಣಸಗಿ, ಬಿ.ಎಸ್‌. ಬೇಲೇರಿ, ಬಸರಕೋಡ, ಹೊಳೆಹಡಗಲಿ ಗ್ರಾಮಸ್ಥರಿಗಾಗಿ ರೋಣ– ಹೊಳೆಆಲೂರು ಮಾರ್ಗದ ಮಧ್ಯೆ 11 ನವಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗಿದೆ. ನಿರ್ಮಿತಿ ಕೇಂದ್ರ, ಬೆಂಗಳೂರಿನ ಸೇವಾ ಭಾರತಿ ಸಂಸ್ಥೆ, ಜಿಂದಾಲ್‌ ಕಂಪೆನಿ, ಮೈಸೂರಿನ ಸಿಟಿಜನ್‌ ಫೋರಂ, ಕೆಆರ್‌ಐಡಿಎಲ್‌ ಇಲ್ಲಿ ಒಟ್ಟು 5,295 ಮನೆಗಳನ್ನು ನಿರ್ಮಿಸಿದೆ. 4,822 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನೂ ವಿತರಣೆ ಮಾಡಲಾಗಿದೆ. ಆದರೆ, ಜಿಲ್ಲಾಡಳಿತದ ಅಂಕಿ ಅಂಶದ ಪ್ರಕಾರ ಇದುವರೆಗೆ ಇಲ್ಲಿಗೆ ಸ್ಥಳಾಂತರಗೊಂಡವರು 568 ಮಂದಿ ಮಾತ್ರ.

ADVERTISEMENT

ನರಗುಂದ ತಾಲ್ಲೂಕಿನ ಕುರ್ಲಗೇರಿ, ಸುರಕೊಡ, ಬೂದಿಹಾಳ ಗ್ರಾಮಗಳನ್ನು ಸ್ಥಳಾಂತರಿಸಿ, ಅಲ್ಲಿನ ನಿವಾಸಿಗಳಿಗೂ 1,200ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು. ಈಗ ಆ ಮನೆಗಳಲ್ಲಿ ಬೆರಳೆಣಿಕೆಯ ಜನರು ಮಾತ್ರ ವಾಸವಿದ್ದಾರೆ. ‘ಆಸರೆ ಮನೆಗಳು ಮೂಲ ಗ್ರಾಮದಿಂದ 8ರಿಂದ 10 ಕಿ.ಮೀ ದೂರದಲ್ಲಿವೆ. ಸಮರ್ಪಕ ಮೂಲಸೌಕರ್ಯ ಅಭಿವೃದ್ಧಿಯಾಗಿಲ್ಲ. ಇಡೀ ಪ್ರದೇಶದಲ್ಲಿ ಜಾಲಿಮುಳ್ಳು ಬೆಳೆದು ನಿಂತಿದೆ’ ಎನ್ನುವುದು ಗ್ರಾಮಸ್ಥರ ದೂರು.

‘ಜಮೀನು, ಜಾನುವಾರುಗಳನ್ನು ಬಿಟ್ಟು, ಈ ಆಸರೆ ಮನೆಯಲ್ಲಿ ಬದುಕುವುದು ಕಷ್ಟ. ಪ್ರವಾಹ ಇಳಿದ ನಂತರ ಮತ್ತೆ ಮೂಲ ಗ್ರಾಮಕ್ಕೇ ಹೋಗುತ್ತೇವೆ’ ಎಂದು ಕುರುವಿನಕೊಪ್ಪ ಗ್ರಾಮದ ಬಸಮ್ಮ ಕುರಿ ಹೇಳಿದರು.

ನೀರಿನಲ್ಲಿ ಹೋಮ:ಪ್ರವಾಹ ತಗ್ಗಿದ ನಂತರ ಜನರು ತಮ್ಮ ಮೂಲ ಗ್ರಾಮಗಳಿಗೆ ಹೊರಟು ಹೋಗುತ್ತಾರೆ. ಆಸರೆ ಮನೆಗಳಲ್ಲಿ ನೆಲೆಸುವುದಿಲ್ಲ. ಹೀಗಾಗಿ ಮನೆಗಳನ್ನು ನಿರ್ಮಿಸುವ ಬದಲು, ಬೆಣ್ಣೆಹಳ್ಳದ ಒತ್ತುವರಿ ತೆರವು ಮಾಡುವುದೇ ಉಚಿತ ಎಂಬ ಸಲಹೆಯನ್ನು ಅಂದಿನ ಅಧಿಕಾರಿಗಳು ನೀಡಿದ್ದರು. ಆದರೆ, ಜನಪ್ರತಿನಿಧಿಗಳು ಇದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಹಳ್ಳ ಒತ್ತವರಿಯಾಗಿರುವುದರಿಂದ ಮಳೆಗಾಲದಲ್ಲಿ ನೀರು ಕೃಷಿ ಭೂಮಿಗೆ ನುಗ್ಗುತ್ತದೆ. ಗ್ರಾಮ ಜಲಾವೃತಗೊಳ್ಳುತ್ತದೆ. ‘ಸರ್ಕಾರ ಈ ಮನೆಗಳಿಗಾಗಿ ಖರ್ಚು ಮಾಡಿದ ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.