
ಮುಳಗುಂದ: ‘ಮಣ್ಣು ಮತ್ತು ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು, ರೈತರು ರಿವಾರ್ಡ್‌ನಂತಹ ಉಪಯುಕ್ತ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಪಟ್ಟಣದ ಎಸ್.ಜೆ.ಜೆ.ಎಂ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಲಾನಯನ ಇಲಾಖೆ, ಕೃಷಿ ಇಲಾಖೆ, ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರಗಳ ಆಶ್ರಯದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಸಿರಿಧಾನ್ಯ ಮೇಳ, ರಿವಾರ್ಡ್ ಯೋಜನೆ ಹಾಗೂ ರೈತರಿಗೆ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ನೀಲಗುಂದ ವಲಯದಲ್ಲಿ ಕಣವಿ ಹೊಸೂರು, ಮುಳಗುಂದ, ನೀಲಗುಂದ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಅನುಷ್ಠಾನಗೊಂಡ ರಿವಾರ್ಡ್ ಯೋಜನೆಯಿಂದ 4,800ಕ್ಕೂ ಅಧಿಕ ರೈತ ಕುಟುಂಬಗಳಿಗೆ ನೆರವಾಗಿದೆ. ₹16 ಕೋಟಿ ವೆಚ್ಚದ ಯೋಜನೆಯ ಪೈಕಿ ಒಟ್ಟು ₹10.51 ಕೋಟಿಯ ಕಾಮಗಾರಿ ಪೂರ್ಣಗೊಂಡಿದೆ’ ಎಂದರು.
‘ಇನ್ನುಳಿದ ಹಣದಲ್ಲಿ ವಿವಿಧ ಕೃಷಿ ಆಧಾರಿತ ಕಾರ್ಯಕ್ರಮಗಳನ್ನು ಸಿದ್ಧಪಡಿಸಲು ಸೂಚಿಸಲಾಗಿದೆ. ಈ ಭಾಗದ ರೈತರಿಗೆ ಆಕಳು, ಎಮ್ಮೆಗಳನ್ನ ನೀಡಿದರೆ ಗ್ರಾಮೀಣ ಭಾಗದ ಹೈನೋದ್ಯಮದಲ್ಲಿ ಉತ್ತಮ ಪ್ರಗತಿ ಸಾಧ್ಯವಾಗುತ್ತದೆ’ ಎಂದು ಹೇಳಿದರು.
‘ಒಟ್ಟು 14,500 ಎಕರೆ ಭೂಮಿಯಲ್ಲಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು ಬದು ನಿರ್ಮಾಣ, 27 ಚೆಕ್ ಡ್ಯಾಂಗಳು, 110 ಕೃಷಿಹೊಂಡಗಳು ಹಾಗೂ 70 ಸ್ವಸಹಾಯ ಸಂಘಗಳಿಗೆ ತಲಾ ₹50 ಸಾವಿರದಂತೆ ನೆರವು ವಿತರಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ‘ಸಿರಿಧಾನ್ಯ ಸಮೃದ್ಧ ಆಹಾರವಾಗಿದ್ದು, ಕಡಿಮೆ ನೀರು, ಖರ್ಚಿನಲ್ಲಿ ಬೆಳೆಯಬಹುದಾಗಿದೆ. ಆರೋಗ್ಯ ವೃದ್ಧಿಗೂ ಸಹಕಾರಿಯಾಗಿದೆ. ಸಿರಿಧಾನ್ಯ ಬೆಳೆದ ರೈತರ ಖಾತೆಗೆ ಪ್ರೋತ್ಸಾಹಧನವನ್ನು ಈಗಾಗಲೇ ಜಮೆ ಮಾಡಲಾಗಿದೆ’ ಎಂದರು.
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ರೈತರನ್ನು ಸನ್ಮಾನಿಸಲಾಯಿತು.
ವಿವಿಧ ಮಳಿಗೆಗಳನ್ನ ಸಚಿವರು ಉದ್ಘಾಟಿಸಿದರು. ಸ್ವ ಸಹಾಯ ಸಂಘಗಳಿಗೆ ಚೆಕ್ ವಿತರಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ತಾಲೂಕು ಹಾಗೂ ಜಿಲ್ಲಾಮಟ್ಟದ ರೈತರನ್ನು ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಕೃಷಿ ಇಲಾಖೆಯ ಅಧಿಕಾರಿ ಸ್ಪೂರ್ತಿ ಜಿ.ಎಸ್., ಸಹಾಯಕ ಕೃಷಿ ಅಧಿಕಾರಿ ಮಲ್ಲಯ್ಯ ಕೊರವನವರ, ಎಸ್.ಎಂ. ನೀಲಗುಂದ, ಎಂ.ಡಿ. ಭಟ್ಟೂರ, ಷಣ್ಮುಖಪ್ಪ ಬಡ್ನಿ, ನಾಗರಾಜ ದೇಶಪಾಂಡೆ, ಕೆ.ಎಲ್. ಕರಿಗೌಡ್ರ ಇದ್ದರು.
‘ಖರ್ಚು ಕಡಿಮೆಯಾದರೆ ಕೃಷಿ ಲಾಭದಾಯಕ’
‘ಗದಗ ತಾಲ್ಲೂಕಿನ ಹಲವು ಭಾಗಗಳಲ್ಲಿ ಮಣ್ಣು ನೀರು ಪರಿಸರ ಸಂರಕ್ಷಣೆ ಹಾಗೂ ಕೃಷಿ ಉತ್ತೇಜನಕ್ಕೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರೈತರ ಅನುಕೂಲಕ್ಕಾಗಿ ಈ ಯೋಜನೆಯನ್ನು ಕಾಳಜಿಯಿಂದ ಜಾರಿಗೊಳಿಸಲಾಗಿದೆ’ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು. ‘ಕೃಷಿಯನ್ನು ಲಾಭದಾಯಕವಾಗಿಸಲು ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ರೈತರೇ ಉತ್ಪಾದಿಸಬೇಕು. ಇವುಗಳನ್ನು ಮಾರುಕಟ್ಟೆಯಿಂದ ಖರೀದಿಸುವುದನ್ನು ಕಡಿಮೆ ಮಾಡಬೇಕು. ಖರ್ಚು ಕಡಿಮೆಯಾದರೆ ಕೃಷಿ ಲಾಭದಾಯಕ ಆಗುವುದರಲ್ಲಿ ಸಂಶಯವಿಲ್ಲ’ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಮಣ್ಣು ನೀರು ಸಂರಕ್ಷಣೆಗೆ ಹೆಚ್ಚು ಅನುಕೂಲಕರ ವಾತಾವರಣವಿದ್ದು ಪ್ರತಿಯೊಬ್ಬರು ಮಕ್ಕಳಂತೆ ಮಣ್ಣು ಹಾಗೂ ನೀರನ್ನು ಪರಿಸರವನ್ನು ಸಂರಕ್ಷಣೆ ಮಾಡಿಟ್ಟುಕೊಳ್ಳುವ ಅಗತ್ಯವಿದೆ.–ರಾಜೇಂದ್ರ ಸಿಂಗ್ ಅಂತರಾಷ್ಟ್ರೀಯ ಜಲತಜ್ಞ
ರೈತರು ಸ್ವಾವಲಂಬನೆಯಿಂದ ಬದುಕಬೇಕಾದರೆ ಬೆಳೆಗಳಿಗೆ ಅಧಿಕ ಬೆಲೆ ಸಿಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ವಿಶೇಷ ಕಾನೂನುಗಳನ್ನು ರೂಪಿಸಬೇಕು.-ಡಿ.ಆರ್.ಪಾಟೀಲ ಮಾಜಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.