ADVERTISEMENT

ಮೊಹರಂ ಮೇಲೆ ಕೊರೊನಾ ಕರಿನೆರಳು: ಹರಕೆ ತೀರಿಸಲು ವೇಷದಾರಿಗಳ ಅಲೆದಾಟ

ಸರಳ ಆಚರಣೆಗೆ ಸೀಮಿತ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 16:13 IST
Last Updated 18 ಆಗಸ್ಟ್ 2021, 16:13 IST
ಮೊಹರಂ ಸಂದರ್ಭದಲ್ಲಿ ಜೋರು ವ್ಯಾಪಾರ ಇರುತ್ತಿದ್ದ ನರಗುಂದದಲ್ಲಿ ಬುಧವಾರ ವಹಿವಾಟು ನೀರಸವಾಗಿತ್ತು
ಮೊಹರಂ ಸಂದರ್ಭದಲ್ಲಿ ಜೋರು ವ್ಯಾಪಾರ ಇರುತ್ತಿದ್ದ ನರಗುಂದದಲ್ಲಿ ಬುಧವಾರ ವಹಿವಾಟು ನೀರಸವಾಗಿತ್ತು   

ನರಗುಂದ: ಹಿಂದೂ ಮುಸ್ಲಿಮರು ಸೇರಿ ಭಾವೈಕ್ಯದಿಂದ ಆಚರಿಸುವ ಮೊಹರಂ ಹಬ್ಬಕ್ಕೆ ಈ ಬಾರಿಯೂ ಕೊರೊನಾ ಛಾಯೆ ಬಿದ್ದಿದೆ.

ಮಸೀದಿಗಳಲ್ಲಿ ಅಲೈ ದೇವರುಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಅಲ್ಲಿಯೇ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸರಳವಾಗಿ ನೈವೇದ್ಯ, ಪೂಜೆ ನಡೆಯಲಿದೆ. ಕಳೆದ ವರ್ಷ ಕೂಡ ಮೊಹರಂ ಸರಳ ಆಚರಣೆಗೆ ಸೀಮಿತವಾಗಿತ್ತು. ಈ ವರ್ಷವಾದರೂ ಹೆಜ್ಜೆ ಕುಣಿತ ಹಾಕಿ ಪಂಜಾಗಳ ಮೆರವಣಿಗೆ ಮಾಡಬೇಕು ಎಂಬ ಆಸೆಯಲ್ಲಿದ್ದವರಿಗೆ ಕೊರೊನಾ ನಿರಾಸೆ ಮೂಡಿಸಿದೆ. ಇದರಿಂದ ಮೊಹರಂ ಸಂಭ್ರಮ ಇಲ್ಲವಾಗಿದೆ.

ಬುಧವಾರ ಖತಲ್‌ರಾತ್ರಿ ಆಚರಣೆಯಲ್ಲಿ ಸಂಪ್ರದಾಯದ ಪ್ರಕಾರ ಬೆಲ್ಲ (ಮಕ್ತುಂ ಸಕ್ಕರೆ), ಕುದುರೆ ಮುಖ ಸಮರ್ಪಿಸುವುದು, ಹರಕೆ ಹೊರುವುದು, ತೀರಿಸುವುದು ಬಹುತೇಕ ಎಲ್ಲ ಮಸೀದಿಗಳಲ್ಲಿ ನಡೆಯಿತು. ಗುರುವಾರ ಅಲೈದೇವರುಗಳನ್ನು ಹೊಳೆಗೆ ಕಳಿಸುವ ವಿಧಾನ ಸಾಂಪ್ರದಾಯಿಕವಾಗಿ ನಡೆಯಲಿದೆ.

ADVERTISEMENT

ಮೊಹರಂ ಹಬ್ಬಕ್ಕೋಸ್ಕರ ತಮ್ಮ ಬೇಡಿಕೆಗಳು ಈಡೇರಲಿ ಎಂದು ಬಹುರೂಪಿಗಳು ಹಾಗೂ ಹರಕೆ ಬೇಡಿಕೊಂಡವರು ಅಳ್ಳೊಳ್ಳಿ ಬವ್ವ ವೇಷಧಾರಿಗಳು, ಹುಲಿ ವೇಷಧಾರಿಗಳು ಮೌನವ್ರತದೊಂದಿಗೆ ಊರೂರು ಅಲೆದಾಡಿ ಭಿಕ್ಷೆ ಬೇಡಿ ಆ ಕಾಣಿಕೆಯನ್ನು ದೇವರಿಗೆ ಸಲ್ಲಿಸುತ್ತಾರೆ. ಹೀಗೆ ಮಾಡುವುದರಿಂದ ವೇಷಧಾರಿಗಳ ಕುಟುಂಬದ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಈಗಲೂ ಇದೆ. ಪಟ್ಟಣದಲ್ಲಿ ಸವದತ್ತಿ, ಬಾಗಲಕೋಟೆ, ಮಮಟಗೇರಿ ಸೇರಿದಂತೆ ಮೊದಲಾದ ಸ್ಥಳಗಳಿಂದ ಬಂದ ವೇಷಧಾರಿಗಳು ಸಂಚರಿಸಿದ್ದು ಕಂಡು ಬಂತು.

‘ಹೋದ ವರ್ಷ ನಮ್ಮ ಕುಟುಂಬದಿಂದ ಅಲೈದೇವರುಗಳಿಗೆ ಬೇಡಿಕೊಂಡಿದ್ದರಿಂದ ನಮ್ಮ ಸಹೋದರ ಹುಲಿ ವೇಷಧಾರಿಯಾಗಿ ಸಂಚರಿಸಿ ಭಿಕ್ಷೆ ಬೇಡಿದ. ಅಲ್ಲಿ ಸಿಕ್ಕ ಹಣವನ್ನು ದೇವರಿಗೆ ಅರ್ಪಿಸಲಾಗುವುದು’ ಎಂದು ಮಮಟಗೇರಿಯ ಹನಮಂತ ಚವ್ಹಾಣ ಹೇಳಿದರು‌.

‘ಮೊಹರಂ ಹಬ್ಬದ ಮೊದಲ ಐದು ದಿನ, ಮೂರು ದಿನ, ಎರಡು ದಿನಗಳ ಫಕೀರರಾಗುವುದು ಸಂಪ್ರದಾಯ. ಇದಕ್ಕೆ ಬೇಕಾದ ವಿವಿಧ ಸಾಮಗ್ರಿಗಳ ಮಾರಾಟದ ಮೇಲೂ ಕೊರೊನಾ ಕರಿನೆರಳು ಬಿದ್ದಿದೆ. ಕೊರೊನಾದಿಂದಾಗಿ ಈ ಬಾರಿ ವ್ಯಾಪಾರ ಅಷ್ಟಾಗಿ ನಡೆದಿಲ್ಲ’ ಎಂದು ವರ್ತಕರು ಹೇಳಿದರು.

‘ಮೊಹರಂ ಆಚರಣೆಗೆ ಕೊರೊನಾ ತೊಂದರೆ ತಂದೊಡ್ಡಿದೆ. ವ್ಯಾಪಾರ ಕಡಿಮೆಯಾಗಿದೆ’ ಎಂದು ಮೊಹರಂ ಸಾಮಗ್ರಿಗಳ ವ್ಯಾಪಾರಿ ಎಂ.ಡಿ.ಅತ್ತಾರ ಹೇಳಿದರು.

‘ಕೊರೊನಾ, ಪ್ರವಾಹ, ಅತಿವೃಷ್ಟಿ ಮೊಹರಂ ಆಚರಣೆಗೆ ತಡೆ ಒಡ್ಡಿದೆ. ಸಂಪ್ರದಾಯದ ಕಾರಣ ನೆಪಕ್ಕೆ ಆಚರಿಸಬೇಕಿದೆ’ ಎಂದು ಪಟ್ಟಣದ ದ್ಯಾವನಗೌಡ ಪಾಟೀಲ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.