ADVERTISEMENT

ಮುಳಗುಂದ | ಅಭಿವೃದ್ಧಿಗೆ ಕಾದಿರುವ ಎಪಿಎಂಸಿ ಉಪ ಮಾರುಕಟ್ಟೆ

ಮುಳಗುಂದ ವಾರದ ಸಂತೆಯಲ್ಲಿ ತರಕಾರಿ, ದಿನಸಿ ವ್ಯಾಪರಿಗಳಿಗೆ ತಪ್ಪದ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 6:38 IST
Last Updated 9 ಫೆಬ್ರುವರಿ 2026, 6:38 IST
ಮುಳಗುಂದ ಎಪಿಎಂಸಿ ಉಪ ಮಾರುಕಟ್ಟೆ ಆವರಣದಲ್ಲಿ ಶಿಥಿಲ ಸ್ಥಿತಿಯಲ್ಲಿರುವ ಅಥಿತಿಗೃಹ ಕಟ್ಟಡ
ಮುಳಗುಂದ ಎಪಿಎಂಸಿ ಉಪ ಮಾರುಕಟ್ಟೆ ಆವರಣದಲ್ಲಿ ಶಿಥಿಲ ಸ್ಥಿತಿಯಲ್ಲಿರುವ ಅಥಿತಿಗೃಹ ಕಟ್ಟಡ   

ಮುಳಗುಂದ: ಪಟ್ಟಣದಲ್ಲಿ ಪ್ರತಿ ಬುಧವಾರ ವಾರದ ಸಂತೆ ನಡೆಯುವ ಎಪಿಎಂಸಿ ಉಪ ಮಾರುಕಟ್ಟೆ ಆರಂಭಗೊಂಡು ಒಂದು ದಶಕವೇ ಕಳೆದಿದೆ. ಆದರೂ ಈವರೆಗೂ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಆಗಿಲ್ಲ. ಹೀಗಾಗಿ ಕೃಷಿಕರು, ತರಕಾರಿ, ದಿನಸಿ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ತೊಂದರೆ ತಪ್ಪಿಲ್ಲ.

ನೂರಾರು ವರ್ಷಗಳಿಂದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿರುವ ಮುಳಗುಂದ ಪಟ್ಟಣವು ವಾರದ ಸಂತೆ ಮಾರುಕಟ್ಟೆ, ವ್ಯಾಪಾರ, ಬ್ಯಾಂಕ್ ವ್ಯವಹಾರ ಸೇರಿದಂತೆ ನಿತ್ಯ ಗ್ರಾಮೀಣ ಜನರಿಗೆ ಸೌಲಭ್ಯ ಒದಗಿಸುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಸಂತೆ ಮಾರುಕಟ್ಟೆ ಅಭಿವೃದ್ಧಿ ಬೇಡಿಕೆ ಇನ್ನೂ ಈಡೇರಿಲ್ಲ.

ಎಪಿಎಂಸಿ ಆವರಣ ಮತ್ತು ಗೇಟ್ ಬಳಿ ಮಳೆ ನೀರು ಹೊರ ಸಾಗಿಸಲು ಸೂಕ್ತ ಚರಂಡಿ ಇಲ್ಲ. ಇದರಿಂದಾಗಿ ಮಳೆಗಾಲದಲ್ಲಿ ನೀರು ನಿಂತು, ಸೊಳ್ಳೆಗಳು ಉತ್ಪತ್ತಿಯಾಗಿ ವ್ಯಾಪಾರಿಗಳು, ಬರುವ ಗ್ರಾಹಕರಿಗೆ ತೊಂದರೆ ಉಂಟಾಗಿದೆ. ಹೊರ ಭಾಗದಲ್ಲಿ ಕೂಡ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಜತೆಗೆ ಸಂತೆ ದಿನ ವಿಪರೀತ ವಾಹನ ದಟ್ಟಣೆ ಉಂಟಾಗುತ್ತಿದ್ದು, ಮುಖ್ಯ ರಸ್ತೆ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಪೊಲೀಸರು ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ADVERTISEMENT

ಎಪಿಎಂಸಿ ಆವರಣವು ವಿಶಾಲವಾಗಿದ್ದು, ಒಂದು ಭಾಗದಲ್ಲಿ ಎರಡು ಶೆಡ್‌ಗಳು ಇವೆ. ಇನ್ನೊಂದು ಭಾಗದಲ್ಲಿ ಖಾಲಿ ಜಾಗವಿದ್ದು ಅಲ್ಲಿ ಕೂಡ ಶೆಡ್‌ ಹಾಗೂ ಹೊರ ಭಾಗದಲ್ಲಿ ಚರಂಡಿ ನಿರ್ಮಾಣದ ಅಗತ್ಯವಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಇಲ್ಲಿನ ರೈತರು, ವ್ಯಾಪಾರಿಗಳ ಸಂಘ ಮನವಿ ಮಾಡಿತ್ತು. ಇದಕ್ಕೆ ಗದಗ ಎಪಿಎಂಸಿ ಸಮಿತಿ ಸ್ಪಂದಿಸಿದೆ. ಆದರೆ, ಸ್ಥಳೀಯ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ. ನೀರು ನಿಲ್ಲುವ ಜಾಗದಲ್ಲಿ ಮಣ್ಣು ಹಾಕಿ ಗುಂಡಿ ಮುಚ್ಚುವ ಕಾಮಗಾರಿ ನಡೆದಿದೆ. ಆದರೂ ನೀರು ನಿಲ್ಲುವ ತೊಂದರೆ ತಪ್ಪಿಲ್ಲ ಎಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಭೀಮಪ್ಪ ಕೋಳಿ ಆರೋಪಿಸಿದರು.

ಸಂತೆ ದಿನ ತರಕಾರಿ ವ್ಯಾಪರಸ್ಥರಿಗೆ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಮತ್ತು ಸ್ವಚ್ಛತೆ ನಿರ್ವಹಣೆಯನ್ನು ಸ್ಥಳೀಯ ಪಟ್ಟಣ ಪಂಚಾಯಿತಿ ನಿರ್ವಹಿಸುತ್ತಿದೆ. ಆದರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಎಪಿಎಂಸಿ ಆಚೆಗೆ ಚರಂಡಿ ಇಲ್ಲದಿರುವುದೇ ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ.

ಎಪಿಎಂಸಿ ಆವರಣದಲ್ಲಿನ ಕಟ್ಟಡಗಳು, ಗೋದಾಮುಗಳು ಶಿಥಿಲಗೊಂಡಿದ್ದು, ಬೀಳುವ ಹಂತದಲ್ಲಿವೆ. ಅವುಗಳ ಪುನರ್‌ನಿರ್ಮಾಣ ಕಾಮಗಾರಿ ಕೂಡ ನಡೆಯಬೇಕಿದೆ. ಗದಗ ಎಪಿಎಂಸಿ ವತಿಯಿಂದ 2020ರಲ್ಲಿ ₹60 ಲಕ್ಷ ವೆಚ್ಚದಲ್ಲಿ ಶೆಡ್‌ ಮತ್ತು ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ನಡೆದಿದೆ. ಆದರೆ ಅದು ಅವೈಜ್ಞಾನಿಕವಾಗಿದ್ದು, ಮತ್ತಷ್ಟು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿದೆ. ಮೂಲಸೌಲಭ್ಯಗಳ ಅಭಿವೃದ್ಧಿ ಅಗತ್ಯವಿದ್ದು, ಸಂಬಂಧಿಸಿದ ಗದಗ ಎಂಪಿಎಂಸಿ ಸಮಿತಿ ಹಾಗೂ ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಳೆ ಸುರಿದು ಕೆಸರಾದ ಜಾಗದಲ್ಲೇ ದಿನಸಿ ಅಂಗಡಿ ತರಕಾರಿ ವ್ಯಾಪಾರಿಗಳು (ಸಂಗ್ರಹ ಚಿತ್ರ)
ಮಳೆ ಸುರಿದು ಕೆಸರಾದ ಜಾಗದಲ್ಲೇ ದಿನಸಿ ಅಂಗಡಿ ತರಕಾರಿ ವ್ಯಾಪಾರಿಗಳು (ಸಂಗ್ರಹ ಚಿತ್ರ)

ಯಾರು ಏನಂತಾರೆ?

ಚರಂಡಿ ನಿರ್ಮಾಣಕ್ಕೆ ಕ್ರಮ

ಎಪಿಎಂಸಿ ಒಳಗಿನ ಮಳೆ ನೀರು ಹೊರ ಸಾಗಿಸಲು ಚರಂಡಿ ವ್ಯವಸ್ಥೆ ಮಾಡಬೇಕಿದ್ದು ಯೋಜನೆ ರೂಪಿಸುತ್ತೇವೆ. ಹಿಂದಿನ ಭಾಗದಲ್ಲಿ ನೀರು ಹೋಗಲು ಪೈಪ್ ಮುಚ್ಚಿದೆ. ಹೀಗಾಗಿ ತೊಂದರೆ ಆಗುತ್ತಿದೆ.

–ಮಂಜುನಾಥ ಗುಳೇದ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ

ಮುಳಗುಂದ ಅಭಿವೃದ್ಧಿಗೆ ಕ್ರಮವಹಿಸಲಿ

50 ವರ್ಷಗಳ ಹಿಂದೆಯೇ ಗದಗ ಎಪಿಎಂಸಿಯ ಉಪ ಮಾರುಕಟ್ಟೆ ಪಟ್ಟಣದಲ್ಲಿ ಆರಂಭವಾಗಿದೆ. ಅಲ್ಪಸ್ವಲ್ಪ ಅಭಿವೃದ್ಧಿ ನಡೆದಿದೆ. ಆದರೂ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಗೆ ಒತ್ತಾಯಿಸಿ ಮನವಿ ಕೊಟ್ಟಿದ್ದೇವೆ. ಜತೆಗೆ ಸಂತೆ ದಿನ ವಾಹನ ದಟ್ಟಣೆ ಉಂಟಾಗುತ್ತಿದ್ದು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು.

–ಮಹಾಂತೇಶ ಎಸ್.ಕಣವಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ

ಶೀಘ್ರದಲ್ಲೇ ಕೆಲಸ ಆರಂಭ

ಮುಳಗುಂದ ಎಪಿಎಂಸಿ ಉಪ ಮಾರುಕಟ್ಟೆ ಆವರಣದಲ್ಲಿ ಮಳೆ ನೀರು ನಿಲ್ಲದಂತೆ ಮಣ್ಣು ಹಾಕಲಾಗಿದೆ. ಅತಿಥಿಗೃಹ ನೆಲಸಮಗೊಳಿಸಿ 8 ವಾಣಿಜ್ಯ ಮಳೆಗೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾಮಗಾರಿ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತು ಟೆಂಡರ್ ಆಗಿದೆ. ಶೀಘ್ರದಲ್ಲೇ ಕೆಲಸ ಆರಂಭಿಸಲಾಗುವುದು. ವಾರದ ಸಂತೆ ಬಾಡಿಗೆ ಆದಾಯ ಪಟ್ಟಣ ಪಂಚಾಯಿತಿಗೆ ಹೋಗುತ್ತಿದೆ. ಮಳೆ ನೀರು ಹೊರ ಸಾಗಿಸಲು ಚರಂಡಿ ಅಗತ್ಯವಿದ್ದು ಹೊರ ಭಾಗದಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿಯವರು ಕೆಲಸ ಕೈಗೊಳ್ಳಬೇಕು. ಈ ಕುರಿತು ಮನವಿ ಮಾಡಲಾಗಿದೆ. ಆದರೆ ಈವರೆಗೂ ಸ್ಪಂದಿಸಿಲ್ಲ

. –ಸುವರ್ಣ ವಾಲಿಕಾರ ಗದಗ ಎಪಿಎಂಸಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.