
ಮುಂಡರಗಿ: ಹೋಳಿ ಹುಣ್ಣಿಮೆ ಅಥವಾ ರಂಗ ಪಂಚಮಿಯಂದು ಸ್ತ್ರೀ ಪುರುಷರೆಂಬ ಭೇದವಿಲ್ಲದೆ ಎಲ್ಲರೂ ಬಣ್ಣ ಎರಚಿಕೊಂಡು ಸಂಭ್ರಮಿಸುವುದು ಸಾಮಾನ್ಯ. ಆದರೆ, ಮುಂಡರಗಿ ಪಟ್ಟಣ ಸೇರಿದಂತೆ ಪಟ್ಟಣದ ಸುತ್ತಮುತ್ತಲಿನ ಏಳು ಗ್ರಾಮಗಳಲ್ಲಿ ರತಿ, ಮನ್ಮಥರ ಪ್ರತಿಷ್ಠಾಪನೆ, ಕಾಮ ದಹನ ಹಾಗೂ ಹೋಳಿ ಆಡುವುದನ್ನು ತಲ ತಲಾಂತರದಿಂದ ಸಂಪೂರ್ಣ ನಿಷೇಧಿಸಲಾಗಿದೆ.
ಪಟ್ಟಣದ ಕನಕಪ್ಪನ ಗುಡ್ಡದ ಮೇಲೆ ಲಕ್ಷ್ಮಿಕನಕನರಸಿಂಹ ದೇವರಿದ್ದು, ಈ ಕಾರಣದಿಂದ ಇಲ್ಲಿ ಹೋಳಿ ಹುಣ್ಣಿಮೆ ಹಾಗೂ ಬಣ್ಣದೋಕುಳಿಯನ್ನು ಸ್ವಇಚ್ಛೆಯಿಂದ ನಿಷೇಧಿಸಲಾಗಿದೆ.
ಹೋಳಿ ಹುಣ್ಣಿಮೆಯಿಂದ ನಿರಂತರವಾಗಿ ಐದು ದಿನಗಳ ಕಾಲ ಲಕ್ಷ್ಮಿಕನಕನರಸಿಂಹನ ಜಾತ್ರೆ ಹಾಗೂ ಲಕ್ಷ್ಮಿ ಹಾಗೂ ಕನಕನರಸಿಂಹನ ಕಲ್ಯಾಣ ಮಹೋತ್ಸವ ನಡೆಯುತ್ತವೆ. ಹೋಳಿ ಹುಣ್ಣಿಮೆ ಪ್ರಯುಕ್ತ ಜರುಗುವ ಕಾಮ ದಹನವು ಸೂತಕದ ಸಂಕೇತವಾಗಿದ್ದು, ಈ ಸಂದರ್ಭದಲ್ಲಿ ಯಾವುದೇ ಕಲ್ಯಾಣ ಕಾರ್ಯ ಕೈಗೊಳ್ಳಲು ಬರುವುದಿಲ್ಲ. ಈ ಕಾರಣದಿಂದ ಇಲ್ಲಿ 17ನೇ ಶತಮಾನದಿಂದಲೂ ಈ ಆಚರಣೆ ನಿಷೇಧಿಸಲಾಗಿದೆ.
ವಿವಿಧ ಸಂದರ್ಭಗಳಲ್ಲಿ ಪಟ್ಟಣದ ಲಕ್ಷ್ಮಿಕನಕನರಸಿಂಹ ದೇವರು ತಾಲ್ಲೂಕಿನ ಶಿರೂಳ, ರಾಮೇನಹಳ್ಳಿ, ನಾಗರಳ್ಳಿ, ಬೆಣ್ಣಿಹಳ್ಳಿ, ಮಕ್ತುಂಪುರ, ಬರದೂರು ಹಾಗೂ ತಾಂಬ್ರಗುಂಡಿ ಗ್ರಾಮಗಳಿಗೆ ತೆರಳುತ್ತದೆ. ಈ ಗ್ರಾಮಗಳೊಂದಿಗೆ ಲಕ್ಷ್ಮಿಕನಕನರಸಿಂಹನು ಅವಿನಾಭಾವ ಸಂಬಂಧ ಹೊಂದಿದ್ದಾನೆ. ಆದ್ದರಿಂದ ಈ ಏಳು ಗ್ರಾಮಗಳಲ್ಲಿಯೂ ಗ್ರಾಮಸ್ಥರು ಕಾಮ ದಹನ ಹಾಗೂ ಬಣ್ಣದೋಕುಳಿಯನ್ನು ಆಡುವುದಿಲ್ಲ.
ಹೋಳಿ ಹುಣ್ಣಿಮೆಯ ಬದಲಾಗಿ ಈ ಏಳು ಗ್ರಾಮಗಳಲ್ಲಿ ಯುಗಾದಿ ಅಥವಾ ಆಯಾ ಗ್ರಾಮಗಳ ಜಾತ್ರೆ ಹಾಗೂ ಉತ್ಸವಗಳಲ್ಲಿ ಬಣ್ಣದೋಕುಳಿ ಆಡುತ್ತಾರೆ.
ಹೋಳಿ ಹುಣ್ಣಿಮೆ ಸಮಯದಲ್ಲಿ ಲಕ್ಷ್ಮಿಕನಕನರಸಿಂಹನ ಜಾತ್ರೆ ಜರುಗುತ್ತದೆ. ಹೀಗಾಗಿ 400 ವರ್ಷಗಳಿಂದ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಏಳು ಗ್ರಾಮಗಳಲ್ಲಿ ಕಾಮದಹನ ಹಾಗೂ ಹೋಳಿ ಆಚರಣೆ ನಿಷೇಧಿಸಲಾಗಿದೆ.ವಿ.ಎಲ್.ನಾಡಗೌಡರ ರಂಗರಾವ್ ವಂಶಸ್ಥ ಮುಂಡರಗಿ
17ನೇ ಶತಮಾನದಲ್ಲಿ ಪಟ್ಟಣದ ನಾಡಗೌಡರ ಮನೆತನದ ರಂಗರಾವ್ ಎಂಬುವವರು ಹೋಳಿ ಹುಣ್ಣಿಮೆಯಂದು ತಪ್ಪದೇ ಕನಕಗಿರಿಯ ಲಕ್ಷ್ಮಿಕನಕನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡು ಬರುತ್ತಿದ್ದರು. ಒಂದು ಸಾರಿ ಅನಾರೋಗ್ಯ ಕಾರಣದಿಂದ ರಂಗರಾಯರಿಗೆ ಕನಕಗಿರಿಗೆ ತೆರಳಲಾಗಲಿಲ್ಲ. ಮನಸ್ಸಿಗೆ ನೋವು ಮಾಡಿಕೊಂಡು ಮಲಗಿದಾಗ ಲಕ್ಷ್ಮಿಕನಕನರಸಿಂಹನು ರಂಗರಾಯರ ಕನಸಿನಲ್ಲಿ ಬಂದು ‘ನಾನು ಕನಕಪ್ಪನ ಗುಡ್ಡದಲ್ಲಿ ಸಾಲಿಗ್ರಾಮದ ರೂಪದಲ್ಲಿ ನಿನಗೆ ದರ್ಶನ ನೀಡುತ್ತೇನೆ. ಅಲ್ಲಿ ದೇವಸ್ಥಾನ ನಿರ್ಮಿಸಿ ನಿತ್ಯ ನನ್ನನ್ನು ಪೂಜಿಸು’ ಎಂದು ತಿಳಿಸಿದನಂತೆ. ಅಂದು ಅಲ್ಲಿ ಉದ್ಭವಗೊಂಡ ಸಾಲಿಗ್ರಾಮವು ಲಕ್ಷ್ಮಿಕನಕನರಸಿಂಹ ರೂಪದಲ್ಲಿ ನೆಲೆ ನಿಂತಿದ್ದಾನೆ ಎಂಬ ಪ್ರತೀತಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.