
ಮುಂಡರಗಿ: ತಾಲ್ಲೂಕಿನ ಗಂಗಾಪುರದಿಂದ ಹೊಸ ಶಿಂಗಟಾಲೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲು ಪರದಾಡುವಂತಾಗಿದೆ. ರಸ್ತೆ ದುರಸ್ತಿಗೊಳಿಸದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ವಿರುದ್ಧ ಸಾರ್ವಜನಿಕರು ಆಕ್ರೋಶ ಪಡುತ್ತಿದ್ದಾರೆ.
ಗಂಗಾಪುರ, ಶೀರನಹಳ್ಳಿ ಹಾಗೂ ಶಿಂಗಟಾಲೂರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು 4 ಕಿ.ಮೀ. ರಾಜ್ಯ ಮುಖ್ಯ ರಸ್ತೆಯು ಹಾಳಾಗಿದ್ದು, ರಸ್ತೆಯ ಮಧ್ಯದಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ಮಳೆಯಾದಾಗ ರಸ್ತೆ ಜಲಾವೃತವಾಗುತ್ತದೆ.
ಈ ರಸ್ತೆಯು ಸುಪ್ರಸಿದ್ಧ ಶಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನ ಹಾಗೂ ಸಕ್ಕರೆ ಕಾರ್ಖಾನೆಗೆ ಸಂಪರ್ಕ ಕಲ್ಪಿಸುವ ಕಾರಣ ನಿತ್ಯ ನೂರಾರು ಸರ್ಕಾರಿ ಹಾಗೂ ಖಾಸಗಿ ವಾಹನಗಳು ಸಂಚರಿಸುತ್ತವೆ.
ತಾಲ್ಲೂಕಿನ ಮುಂಡವಾಡ, ಬಿದರಳ್ಳಿ, ಜಾಲವಾಡಿಗೆ, ವಿಠಲಾಪೂರ, ಗುಮ್ಮಗೋಳ, ಹಮ್ಮಿಗಿ, ಶಿಂಗಟಾಲೂರ ಮೊದಲಾದ ಗ್ರಾಮಗಳ ರೈತರು ನಿತ್ಯ ಕಬ್ಬು ಹೇರಿಕೊಂಡು ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಹೀಗಾಗಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಅನೇಕ ಅಪಘಾತಗಳು ಸಂಭವಿಸಿವೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು. ರಸ್ತೆಯ ಗುಂಡಿಗಳನ್ನು ಮುಚ್ಚಿ, ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಶಿಂಗಟಾಲೂರ ಗ್ರಾಮಸ್ಥ ಮರಿಯಜ್ಜ ಎಚ್, ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.