ADVERTISEMENT

ಗದಗ: ರಂಗೇರಿದ ನಗರಸಭೆ ಚುನಾವಣೆ ಕಣ

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸಂಪೂರ್ಣ; ಬಿರುಸುಗೊಂಡ ಪ್ರಚಾರ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 5:18 IST
Last Updated 16 ಡಿಸೆಂಬರ್ 2021, 5:18 IST
ನಗರಸಭೆ ಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಸಲು ಬಂದಿದ್ದ ಅಭ್ಯರ್ಥಿಗಳ ಜನತೆ ಬಂದಿದ್ದ ಬೆಂಬಲಿಗರು ಗದಗ ಬೆಟಗೇರಿ ನಗರಸಭೆ ಆವರಣದ ಎದುರಿನಲ್ಲಿ ಜಮಾಯಿಸಿದ್ದ ದೃಶ್ಯ ಪ್ರಜಾವಾಣಿ ಚಿತ್ರ/ ಬನೇಶ ಕುಲಕರ್ಣಿ
ನಗರಸಭೆ ಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಸಲು ಬಂದಿದ್ದ ಅಭ್ಯರ್ಥಿಗಳ ಜನತೆ ಬಂದಿದ್ದ ಬೆಂಬಲಿಗರು ಗದಗ ಬೆಟಗೇರಿ ನಗರಸಭೆ ಆವರಣದ ಎದುರಿನಲ್ಲಿ ಜಮಾಯಿಸಿದ್ದ ದೃಶ್ಯ ಪ್ರಜಾವಾಣಿ ಚಿತ್ರ/ ಬನೇಶ ಕುಲಕರ್ಣಿ   

ಗದಗ: ಅವಳಿ ನಗರಗಳಾದ ಗದಗ ಬೆಟಗೇರಿ ನಗರಸಭೆ ಚುನಾವಣೆ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಬುಧವಾರದಂದು ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಪಡೆಯೊಂದಿಗೆ ಉಮೇದುವಾರಿಕೆ ಸಲ್ಲಿಸಿದರು.

ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ವಿವಿಧ ಪಕ್ಷಗಳ ಬಹುತೇಕ ಅಭ್ಯರ್ಥಿಗಳು ಕೊನೆ ದಿನದಂದು ನಾಮ‍ಪತ್ರ ಸಲ್ಲಿಸಲು ಬಂದಿದ್ದರಿಂದ ನಗರದ ಗಾಂಧಿ ವೃತ್ತ, ನಗರಸಭೆ ರಸ್ತೆ, ತಾಲ್ಲೂಕು ಕಚೇರಿ ರಸ್ತೆ, ನಗರ ಆರೋಗ್ಯ ಕೇಂದ್ರ ಹಾಗೂ ಆಸುಪಾಸಿನ ರಸ್ತೆಗಳಲ್ಲಿ ವಿಪರೀತ ಜನದಟ್ಟಣೆ ಕಂಡುಬಂತು. ಪೊಲೀಸರು ಸಂಚಾರ ದಟ್ಟಣೆ ಹಾಗೂ ಜನದಟ್ಟಣೆ ನಿಯಂತ್ರಿಸಲು ಪರದಾಡಿದರು.

ಕೆಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಬೆಂಬಲಿಗರೊಂದಿಗೆ ಪಾದಯಾತ್ರೆಯಲ್ಲಿ ನಗರಸಭೆಗೆ ಬಂದರು. ಮತ್ತೆ ಕೆಲವರು ಟ್ರ್ಯಾಕ್ಟರ್‌, ಜೀಪು ಮೊದಲಾದ ವಾಹನಗಳಲ್ಲಿ ಬಂದು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಅಭ್ಯರ್ಥಿಗಳು ಗಾಂಧಿ ಮತ್ತು ಅಂಬೇಡ್ಕರ್‌ ಪ್ರತಿಮೆಗಳಿಗೆ ಮಾಲಾರ್ಪಾಣೆ ಮಾಡಿದ್ದು ಕಂಡು ಬಂತು.

ADVERTISEMENT

ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಒಬ್ಬೊಬ್ಬ ಅಭ್ಯರ್ಥಿಯೂ ನೂರಾರು ಬೆಂಬಲಿಗರ ಜತೆಗೆ ಬಂದಿದ್ದರು. ಕಣದಲ್ಲಿರುವ ಕೆಲವು ಪ್ರಭಾವಿ ಅಭ್ಯರ್ಥಿಗಳ ಜತೆಗೆ ಪಕ್ಷದ ಮುಖಂಡರು, ಜಿಲ್ಲಾ ಘಟಕದ ಅಧ್ಯಕ್ಷರು ಇದ್ದರು. ಇನ್ನುಳಿದಂತೆ ಬಹುತೇಕ ಅಭ್ಯರ್ಥಿಗಳ ಜತೆಗೆ ಆಯಾ ವಾರ್ಡ್‌ನ ಹೆಂಗಸರು, ಗಂಡಸರ ಜತೆಗೆ ಮಕ್ಕಳು ಕೂಡ ಬಂದಿದ್ದು ವಿಶೇಷವಾಗಿತ್ತು. ಎಲ್ಲರ ಕೊರಳಿನಲ್ಲೂ ಪಕ್ಷದ ಚಿಹ್ನೆ ಇರುವ ಶಾಲು, ಕೈಯಲ್ಲಿ ಬಾವುಟಗಳು ರಾರಾಜಿಸುತ್ತಿದ್ದವು. ಅನೇಕರು ದಾರಿಯುದ್ದಕ್ಕೂ ಅಭ್ಯರ್ಥಿಯ ಪರವಾಗಿ ಘೋಷಣೆ ಕೂಗುತ್ತಿದ್ದರು. ನಾಮಪತ್ರ ಸಲ್ಲಿಸಿ ಹೊರಬಂದ ಬಳಿಕ ಬೆಂಬಲಿಗರು ಅವರ ಅಭ್ಯರ್ಥಿಯ ಕೊರಳಿಗೆ ಹೂಮಾಲೆ ಹಾಕಿ, ಹೆಗಲ ಮೇಲೆ ಕೂರಿಸಿಕೊಂಡು ಜೈಕಾರ ಹಾಕಿದ ದೃಶ್ಯಗಳು ಕಂಡುಬಂದವು.

ಕಲಾತಂಡಗಳಿಗೆ ಕುದುರಿದ ಬೇಡಿಕೆ: ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕೆಲವು ಅಭ್ಯರ್ಥಿಗಳು ಕಲಾ ತಂಡದವರನ್ನು ಜತೆಗೆ ಕರೆದುಕೊಂಡು ಬಂದಿದ್ದರು. ಇದರಿಂದಾಗಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಬೇಡಿಕೆ ಕುದುರಿತ್ತು. ಜಾನಪದ ಶೈಲಿಯ ದಿರಿಸು ಧರಿಸಿದ್ದ ಡೊಳ್ಳು ಕುಣಿತದ ಕಲಾವಿದರು ಮೆರವಣಿಗೆಗೆ ರಂಗು ತುಂಬಿದರು.

ಕಿವಿಗಡಚಿಕ್ಕಿದ ಪಟಾಕಿ ಸದ್ದು: ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಬರುತ್ತಿದ್ದ ಸಂದರ್ಭದಲ್ಲಿ ಬೆಂಬಲಿಗರು ದಾರಿಯುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಗರಸಭೆ ಮುಂಭಾಗದಲ್ಲಿ ವಿಪರೀತ ಜನದಟ್ಟಣೆ ಇದ್ದರೂ ಕೆಲವರು ಅಲ್ಲೇ ಪಟಾಕಿ ಸಿಡಿಸಿದರು. ಇದರಿಂದಾಗಿ, ಜನದಟ್ಟಣೆ ಜತೆಗೆ ಇಡೀ ಆವರಣದಲ್ಲಿ ದಟ್ಟ ಹೊಗೆಯೂ ಆಗಾಗ ಕಾಣಿಸಿಕೊಳ್ಳುತ್ತಿತ್ತು.

ಕೋವಿಡ್‌ ಮಾರ್ಗಸೂಚಿಗಳು ಮಾಯ!: ನಗರಸಭೆ ಆವರಣ, ಜಾಥಾದಲ್ಲಿ ಭಾಗವಹಿಸಿದ್ದ ಅನೇಕರು ಕೋವಿಡ್‌ ತಡೆ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದ್ದರು. ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಒತ್ತಟ್ಟಿಗಿರಲಿ; ಕನಿಷ್ಠ ಮಾಸ್ಕ್‌ ಕೂಡ ಧರಿಸಿರಲಿಲ್ಲ.

ರೋಮಾಂಚನಗೊಳಿಸಿದ ಜಯಘೋಷಗಳು
ನಾಮಪತ್ರ ಸಲ್ಲಿಸಲು ಬಂದಿದ್ದ ವಿವಿಧ ಪಕ್ಷಗಳ ಸದಸ್ಯರು ನಗರಸಭೆ ಆವರಣದಲ್ಲಿ ಕೂಗುತ್ತಿದ್ದ ಜಯಘೋಷಗಳು ಕೆಲವರ ಕಿವಿ ನಿಮಿರುವಂತೆ ಮಾಡಿದವು.

ಶ್ರೀರಾಮ ಸೇನೆ ಸದಸ್ಯರು ತಮ್ಮ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿ ಹೊರಬಂದ ನಂತರ ಪ್ರಾಸಬದ್ಧವಾದ ಘೋಷವಾಕ್ಯವನ್ನು ಕೂಗುತ್ತಿದ್ದಾಗ ಅನ್ಯ ‍ಪಕ್ಷಗಳ ಕಾರ್ಯಕರ್ತರು ಕೂಡ ಒಮ್ಮೆ ಅವರತ್ತ ತಿರುಗಿ ನೋಡುತ್ತಿದ್ದರು. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಆಮ್‌ ಆದ್ಮಿ ಪಾರ್ಟಿ ಅಭ್ಯರ್ಥಿಗಳು ತಮ್ಮ ಪಕ್ಷದ ನಾಯಕರ ಹೆಸರನ್ನು ಜಯಘೋಷದ ನಡುವೆ ಕೂಗುತ್ತಿದ್ದರು.

ಜೈ ಶಿವಾಜಿ, ಅಂಭಾಭವಾನಿ, ಜೈಶ್ರೀರಾಮ್‌, ಜೈ ಭೀಮ್‌, ಭಾರತ್‌ ಮಾತಾಕಿ ಜೈ ಮೊದಲಾದ ಘೋಷಣೆಗಳು ಕೇಳುಗರ ಗಮನ ಸೆಳೆದವು.

ಎಲ್ಲೆಲ್ಲೂ ತಮಟೆ ಸದ್ದು, ಟಪ್ಪಾಂಗುಚ್ಚಿ ಡಾನ್ಸು!
ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಅನೇಕರು ಮೊದಲಿಗೆ ತಮ್ಮ ಇಷ್ಟ ದೈವಕ್ಕೆ ಪೂಜೆ ಸಲ್ಲಿಸಿ ಅಲ್ಲಿಂದ ಬೆಂಬಲಿಗರ ಜತೆಗೆ ನಾಮಪತ್ರ ಸಲ್ಲಿಸಲು ಬರುತ್ತಿದ್ದರು.

ಅವರು ಅಲ್ಲಿಂದ ನಗರಸಭೆ ಆವರಣಕ್ಕೆ ಬರುವ ವರೆಗೂ ಜಯಘೋಷ ಹಾಗೂ ತಮಟೆ ಸದ್ದು ನಿರಂತರವಾಗಿ ಕೇಳಿಸುತ್ತಿತ್ತು. ನಗರಸಭೆ ಪ್ರವೇಶಕ್ಕೂ ಮುನ್ನ ಕಾರ್ಯಕರ್ತರೆಲ್ಲರೂ ರಸ್ತೆ ಮಧ್ಯೆ ನಿಂತು ತಮಟೆ ಸದ್ದಿಗೆ ಅನುಗುಣವಾಗಿ ಹೆಜ್ಜೆ ಹಾಕುತ್ತಿದ್ದ ದೃಶ್ಯಗಳು ಕಂಡುಬಂದವು. ಮದ್ಯ ಸೇವನೆ ಮಾಡಿದ್ದ ಕೆಲವರು ಹುಚ್ಚೆದ್ದಂತೆ ಕುಣಿಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.