ADVERTISEMENT

ಗದಗ | ರಂಜಾನ್‌ ಮಾಸ: ನಿತ್ಯ 300 ಮಂದಿಗೆ ‘ಸಹರಿ’ ಆಹಾರ ಪೂರೈಕೆ

ಮುನವ್ವರ್ ಮಸ್ಜಿದ್‍ನ ಖಿದ್ಮತ್‍ವಾಲೆ ತಂಡದ ಕೆಲಸಕ್ಕೆ ಜನಮೆಚ್ಚುಗೆ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 25 ಮಾರ್ಚ್ 2025, 5:00 IST
Last Updated 25 ಮಾರ್ಚ್ 2025, 5:00 IST
ಸಹರಿ ಆಯಾರ ತಯಾರಿಯಲ್ಲಿ ತೊಡಗಿರುವ ಬೆಟಗೇರಿಯ ನರಸಾಪುರ ಕಾಲೊನಿಯ ಮುನವ್ವರ್ ಮಸ್ಜಿದ್‍ನ ಖಿದ್ಮತ್‍ವಾಲೆ ತಂಡದ ಯುವಕರು
ಸಹರಿ ಆಯಾರ ತಯಾರಿಯಲ್ಲಿ ತೊಡಗಿರುವ ಬೆಟಗೇರಿಯ ನರಸಾಪುರ ಕಾಲೊನಿಯ ಮುನವ್ವರ್ ಮಸ್ಜಿದ್‍ನ ಖಿದ್ಮತ್‍ವಾಲೆ ತಂಡದ ಯುವಕರು   

ಗದಗ: ಎಲ್ಲ ಧರ್ಮಗಳಲ್ಲೂ ಉಪವಾಸಕ್ಕೆ ಪ್ರಾಮುಖ್ಯತೆ ಇದೆ. ಅಂತೆಯೇ, ಇಸ್ಲಾಂ ಧರ್ಮದಲ್ಲೂ ಉಪವಾಸಕ್ಕೆ ಹೆಚ್ಚಿನ ಮನ್ನಣೆ ನೀಡಲಾಗುತ್ತದೆ. ರಂಜಾನ್‌ ಮಾಸದಲ್ಲಿ ರೋಜ ಮತ್ತು ಜಕಾತ್‌ಗೆ ವಿಶೇಷ ಸ್ಥಾನವಿದೆ. ರಂಜಾನ್‌ ತಿಂಗಳಲ್ಲಿ ಆಚರಿಸುವ ಉಪವಾಸ ಹಾಗೂ ಮಾಡುವ ದಾನದಿಂದ ಸಾಕಷ್ಟು ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಮುಸ್ಲಿಮರಲ್ಲಿದೆ.

ಇದೇ ತತ್ವದ ಆಧಾರದ ಮೇಲೆ ಬೆಟಗೇರಿಯ ನರಸಾಪುರ ಆಶ್ರಯ ಕಾಲೊನಿಯ ಮುನವ್ವರ್‌ ಮಸೀದಿಯ ಮೌಲಾನಾ ತಾಜುದ್ದೀನ್‌ ಕಾತರಕಿ ನೇತೃತ್ವದ ತಂಡ ರಂಜಾನ್‌ ಮಾಸದಲ್ಲಿ ಉಪವಾಸಕ್ಕೆ ಸನ್ನದ್ಧಗೊಳ್ಳುವವರಿಗೆ, ಸಕಾಲದಲ್ಲಿ ಆಹಾರ ಮಾಡಿಕೊಳ್ಳಲಾಗದವರಿಗೆ, ಪ್ರಯಾಣದಲ್ಲಿರುವವರಿಗೆ ಸಹರಿ ಸಮಯದಲ್ಲಿ (ಬೆಳಗಿನ ಜಾವ) ಶುಚಿರುಚಿಯಾದ ಆಹಾರ ತಯಾರಿಸಿ, ಉಚಿತವಾಗಿ ಸರಬರಾಜು ಮಾಡುವ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದೆ.

‘ರಂಜಾನ್‌ ಮಾಸದಲ್ಲಿ ಉಪವಾಸ ವ್ರತ ಕೈಗೊಳ್ಳುವ ಮನಸ್ಸಿದ್ದವರು ಸಾಕಷ್ಟು ಮಂದಿ ಇದ್ದಾರೆ. ಆದರೆ, ಅನೇಕರಿಗೆ ಸೌಕರ್ಯಗಳು ಇರುವುದಿಲ್ಲ. ಈ ಒಂದು ಕಾರಣಕ್ಕೆ ಅವರು ರೋಜದಿಂದ ವಂಚಿತರಾಗಬಾರದು ಎಂಬ ಉದ್ದೇಶಕ್ಕೆ ಅವರಿಗೆ ನೆರವಾಗುತ್ತಿದ್ದೇವೆ’ ಎನ್ನುತ್ತಾರೆ ಹಜರತ್‌ ತಾಜುದ್ದೀನ್‌ ಕಾತರಕಿ.

ADVERTISEMENT

ಮುಸ್ಲಿಮರು ರಂಜಾನ್‌ ಮಾಸದಲ್ಲಿ ರೋಜ ಆಚರಿಸುವ ಮೂಲಕ ಆತ್ಮಶುದ್ಧಿಯ ಹಾದಿಯಲ್ಲಿ ಸಾಗುತ್ತಾರೆ. ರೋಜ ಅಂದರೆ ಅನ್ನ, ನೀರು ತ್ಯಜಿಸಿ ಆತ್ಮಶುದ್ಧಿಗಾಗಿ ದೇಹದಂಡನೆ ಮಾಡಿಕೊಳ್ಳುವ ಉಪವಾಸ ವ್ರತ. ಜಕಾತ್‌ ಅಂದರೆ ಗಳಿಸಿದ ಸಂಪತ್ತಿನಲ್ಲಿ ಬಡವರಿಗೆ ಕಡ್ಡಾಯವಾಗಿ ಮಾಡಬೇಕಾದ ದಾನ. ರಂಜಾನ್‌ ಮಾಸದಲ್ಲಿ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳು, ರೈಲಿನಲ್ಲಿ ಪ್ರಯಾಣ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಆಹಾರ ಪೂರೈಕೆ ಮಾಡುತ್ತಿರುವುದಾಗಿ ಅವರು ತಿಳಿಸಿದರು.

ಪ್ರತಿದಿನ 300 ಮಂದಿಗೆ ಆಹಾರ ಪೂರೈಕೆ: ರಂಜಾನ್‌ ರೋಜ ಆರಂಭಗೊಂಡ ದಿನದಿಂದ 20ನೇ ದಿನದವರೆಗೆ ಈ ತಂಡ ಪ್ರತಿದಿನ 300 ಮಂದಿಗೆ ಆಹಾರ ಪೂರೈಕೆ ಮಾಡಿದೆ.

ಪ್ರಸ್ತುತ ರೋಜ ಮುಗಿಯುವ ಹಂತಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿಕೊಂಡು ಊರಿಗೆ ಹೊರಡುತ್ತಿದ್ದಾರೆ. ಹೀಗಾಗಿ ಪ್ರತಿದಿನ 150ರಿಂದ 200 ಮಂದಿ ಆಹಾರ ಪೊಟ್ಟಣ ಪೂರೈಕೆ ಮಾಡಲಾಗುತ್ತಿದೆ. ಪ್ರತಿದಿನ ರೈಲ್ವೆ ನಿಲ್ದಾಣಕ್ಕೆ 75ರಿಂದ 100 ಪೊಟ್ಟಣ ಪೂರೈಸುತ್ತಿದ್ದಾರೆ. ರೋಜ ಕೊನೆದಿನದಂದು ರೈಲು ನಿಲ್ದಾಣಕ್ಕೆ 200 ಪೊಟ್ಟಣ ಪೂರೈಸುವ ಉದ್ದೇಶವನ್ನು ತಂಡ ಹೊಂದಿದೆ.

‘ನಮ್ಮ ತಂಡದಲ್ಲಿ 18ರಿಂದ 52 ವರ್ಷ ವಯಸ್ಸಿನ 127 ಮಂದಿ ಇದ್ದೇವೆ. ಎಲ್ಲರೂ ಸ್ಥಿತಿವಂತರೇನಲ್ಲ. ದಿನನಿತ್ಯ ಕೆಲಸ ಮಾಡಿ ಬದುಕು ನಡೆಸುವವರೇ ಹೆಚ್ಚಿನವರು. ನಾವೆಲ್ಲರೂ ಕೂಡಿ ಅಕ್ಕಿ, ಬೇಳೆ, ಎಣ್ಣೆ, ತರಕಾರಿ ತಂದು ಆಹಾರ ಸಿದ್ಧಪಡಿಸಿ, ಅಗತ್ಯ ಇರುವವರಿಗೆ ಕೊಡುತ್ತೇವೆ’ ಎನ್ನುತ್ತಾರೆ ಕಾತರಕಿ.

‘ಪ್ರತಿದಿನದ ಆಹಾರ ತಯಾರಿಗೆ ಸರಾಸರಿ ₹7 ಸಾವಿರದಿಂದ ₹17 ಸಾವಿರ ಖರ್ಚು ಬರುತ್ತದೆ. ನಾವೇ ಹೊಂದಿಸುತ್ತೇವೆ. ಕಡಿಮೆ ಬಿದ್ದಾಗ ಸಹೃದಯಿಗಳನ್ನು ಕೇಳುತ್ತೇವೆ. ಪ್ರತಿದಿನ ಪುಲಾವ್‌, ಚಿತ್ರಾನ್ನ, ಮೊಸರನ್ನ, ಕುಷ್ಕಾ, ತತ್ತಿ ಕರ‍್ರಿ, ಚಿಕನ್‌ ಮಸಾಲಾ, ಸಿಹಿತಿನಿಸು ಹೀಗೆ ಒಂದೊಂದು ದಿನ ಒಂದೊಂದು ಬಗೆಯ ಆಹಾರ ತಯಾರಿಸಿ ಪೂರೈಕೆ ಮಾಡುತ್ತೇವೆ’ ಎನ್ನುತ್ತಾರೆ ಯುವಕರಾದ ಶಾಕೀರ್‌ಅಹ್ಮದ್ ಕಾತರಕಿ, ತೌಸೀಫ್.

ಮುನವ್ವರ್‌ ಮಸೀದಿ ಹಾಗೂ ಮುನವ್ವರ್‌ ಈದ್ಗಾ ಟ್ರಸ್ಟ್‌ ವತಿಯಿಂದ ನಡೆಯುತ್ತಿರುವ ಈ ಕೆಲಸದಲ್ಲಿ 127 ಮಂದಿ ಇದ್ದು, 20 ಮಂದಿಯ 5 ತಂಡಗಳು ವಿವಿಧ ಕೆಲಸದಲ್ಲಿ ತೊಡಗಿಸಿಕೊಂಡಿವೆ. 20 ಮಂದಿಯ ತಂಡವನ್ನು ನಿರ್ದಿಷ್ಟವಾಗಿ ಅಡುಗೆ ಕೆಲಸಕ್ಕೆ ನೇಮಿಸಲಾಗಿದೆ. ಮಾಡಿದ ಅಡುಗೆಯನ್ನು ಅಚ್ಚುಕಟ್ಟಾಗಿ ಪ್ಯಾಕ್‌ ಮಾಡಿ, ಅಗತ್ಯ ಇರುವವರಿಗೆ ತಲುಪಿಸುವ ಕೆಲಸವನ್ನು ಇನ್ನುಳಿದವರು ಮಾಡುತ್ತಾರೆ. ಆತ್ಮತೃಪ್ತಿಗಾಗಿ ಮಾಡುತ್ತಿರುವ ಕೆಲಸ ಇದು ಎಂದು ತಂಡದ ಸದಸ್ಯರೆಲ್ಲರ ಒಕ್ಕೊರಲಿನ ಅಭಿಪ್ರಾಯವಾಗಿದೆ.

ರೈಲ್ವೆ ಪ್ರಯಾಣದಲ್ಲಿರುವವರಿಗೆ ಹಂಚಲು ತಂದಿರುವ ಆಹಾರ ಪೊಟ್ಟಣ ಮತ್ತು ನೀರಿನ ಬಾಟಲಿ ಜತೆಗೆ ತಂಡದ ಸದಸ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.