ADVERTISEMENT

ನರಗುಂದ|ಸರ್ಕಾರಿ ಎಂಜನಿಯರಿಂಗ್ ಕಾಲೇಜು: ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳ ಪ್ರವೇಶ

ಬಸವರಾಜ ಹಲಕುರ್ಕಿ
Published 12 ಅಕ್ಟೋಬರ್ 2025, 7:06 IST
Last Updated 12 ಅಕ್ಟೋಬರ್ 2025, 7:06 IST
ನರಗುಂದದ ಸರ್ಕಾರಿ ಎಂಜನಿಯರಿಂಗ್ ಕಾಲೇಜು
ನರಗುಂದದ ಸರ್ಕಾರಿ ಎಂಜನಿಯರಿಂಗ್ ಕಾಲೇಜು   

ನರಗುಂದ: ರಾಜ್ಯದ ಬೆರಳೆಣೆಕೆಯ ಸರ್ಕಾರಿ ಎಂಜನಿಯರಿಂಗ್ ಕಾಲೇಜುಗಳಲ್ಲಿ ಪಟ್ಟಣದ ಸರ್ಕಾರಿ ಎಂಜನಿಯರಿಂಗ್ ಕಾಲೇಜು ಒಂದಾಗಿದ್ದು, ಕೇವಲ ಮೂರೇ ವರ್ಷಗಳಲ್ಲಿ ಭೌತಿಕ ಹಾಗೂ ಬೌದ್ಧಿಕ ವಾಗಿ ಬೃಹದಾಕಾರವಾಗಿ ಬೆಳೆಯುತ್ತಿದೆ.

ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿರುವುದನ್ನು ನೋಡಿದರೆ ಇಲ್ಲಿಯ ಗುಣಮಟ್ಟದ ಶಿಕ್ಷಣ ಕಾರಣವಾಗುತ್ತಿದೆ. ಆದರೆ ಪ್ರಾಚಾರ್ಯರೊಬ್ಬರನ್ನು ಬಿಟ್ಟರೆ ಉಳಿದವರೆಲ್ಲರೂ ಅತಿಥಿ ಉಪನ್ಯಾಸಕರೇ ಹಾಗೂ ಹೊರಗುತ್ತಿಗೆ ಆಧಾರದ ನೌಕರರೇ ಆಗಿದ್ದಾರೆ. ಜೊತೆಗೆ ಕೆಲವು ಮೂಲ ಸೌಲಭ್ಯಗಳು ಕಾಡುತ್ತಿವೆ. ಇದರ ನಡುವೆಯೂ ವಿದ್ಯಾರ್ಥಿಗಳು ಖಾಸಗಿ ಕಾಲೇಜು ಬಯಸದೇ ಪಟ್ಟಣದ ಎಂಜನಿಯರಿಂಗ್ ಕಾಲೇಜಿಗೆ ಬರುತ್ತಿರುವುದು ವಿಶೇಷವಾಗಿದೆ.

ಪಟ್ಟಣದ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಅನತಿ ದೂರದಲ್ಲಿರುವ ನರಗುಂದ-ರೋಣ ರಸ್ತೆ ಎಡಬದಿಯಲ್ಲಿ ಸುಮಾರು 25 ಎಕರೆ ವಿಶಾಲ ಜಾಗೆಯಲ್ಲಿ 100ಕ್ಕೂ ಹೆಚ್ಚು ಕೊಠಡಿ ಹಾಗೂ ಎರಡು ವಸತಿ ನಿಲಯಗಳ ಕಟ್ಟಡ ಹೊಂದಿರುವ ಈ ಕಾಲೇಜು ಆಕರ್ಷಕವಾಗಿ ಕಾಣುತ್ತಿದೆ.

ADVERTISEMENT

2022ರಲ್ಲಿ ಉದ್ಘಾಟನೆಗೊಂಡ ಕಾಲೇಜು ಆರಂಭದಲ್ಲಿ ಎರಡೇ ಕೋರ್ಸ್ಗಳೊಂದಿಗೆ ಕೇವಲ 84 ವಿದ್ಯಾರ್ಥಿಗಳನ್ನು ಹೊಂದಿತ್ತು.ಈಗ ನಾಲ್ಕು ಕೋರ್ಸ್‌ಗಳನ್ನು ಹೊಂದಿದೆ. 2026 ರಲ್ಲಿ ಎಂಜನಿಯರಿಂಗ್ ಪದವಿ ಪೂರ್ಣಗೊಳಿಸಿದ ಮೊದಲ ಬ್ಯಾಚ್ ಹೊರಬೀಳಲಿದೆ. ಇದರಿಂದ ಹಲವಾರು ಕೊರತೆಗಳ ನಡುವೆ ಸರ್ಕಾರಿ ಕಾಲೇಜಿನಲ್ಲಿ ಪದವಿ ಪಡೆದವರ ಸಾಲಿಗೆ ಈ ವಿದ್ಯಾರ್ಥಿಗಳು ಸೇರುತ್ತಾರೆ.

660 ವಿದ್ಯಾರ್ಥಿಗಳು: ರಾಜ್ಯದಲ್ಲಿಯೇ ನಾಲ್ಕು ತಾಲ್ಲೂಕು ಕೇಂದ್ರಗಳಲ್ಲಿ ಎಂಜಿನಿಯರಿಂಗ್ ಕಾಲೇಜು ಗಳಿದ್ದು, ಅದರಲ್ಲಿ ನರಗುಂದ ಒಂದಾಗಿದೆ. ಸ್ಥಾಪಿತವಾಗಿ. ನಾಲ್ಕನೇ ವರ್ಷದಲ್ಲೇ ಇರುವಾಗಲೇ ನಾಲ್ಕು ಕೋರ್ಸಗಳಿಗೆ 660 ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದು ಸುಲಭದ ಮಾತಲ್ಲ ಎಂದು ಈಗಾಗಲೇ ಬೇರೇಡೆ ಸೇವೆ ಸಲ್ಲಿಸಿ ಇಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಹೇಳಿದ್ದು ಕಂಡು ಬಂತು.

ಏಐ, ಕಂಪ್ಯೂಟರ್ ಸೈನ್ಸ್‌, ಸಿವಿಲ್, ಎಲೆಕ್ಟ್ರಾನಿಕ್ ಆಂಡ್ ಕಂಪ್ಯೂಟರ್ ಸೈನ್ಸ್‌ ಕೋರ್ಸ್‌ ಹೊಂದಿರುವ ಈ ಕಾಲೇಜು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ.

ಬೆಂಗಳೂರು, ಮಂಗಳೂರ, ಬೀದರ್, ಬಳ್ಳಾರಿ, ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದ, ವಸತಿ ವ್ಯವಸ್ಥೆ ಗೆ ಪರದಾಡುವಂತಾಗಿದೆ.ಕಾಲೇಜು ಪಟ್ಟಣಕ್ಕೆ ಮೂರು ಕಿ.ಮೀ ದೂರದಲ್ಲಿ ಇರುವುದರಿಂದ ಪಟ್ಟಣದಲ್ಲಿ ಹೆಚ್ಚು ಹಣ ನೀಡಿ ಪಿಜಿಯಲ್ಲಿ ಇರಬೇಕಿದೆ. ಜೊತೆಗೆ ಹಣ ಕೊಟ್ಟು ಬಸ್ ಮೂಲಕ ಕಾಲೇಜಿಗೆ ಬರಬೇಕಿದೆ ಎಂದು ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ತಮ್ಮ ವಸತಿ ಸಮಸ್ಯೆ ಬಿಚ್ಚಿಡುತ್ತಾರೆ‌.

ಹುಲ್ಲುಗಾವಲಾದ ಆವರಣ: ಸುಮಾರು 25 ಎಕರೆ ಜಾಗೆ ಇರುವ ಎಂಜನಿಯರಿಂಗ್ ಕಾಲೇಜು ಸಂಚರಿಸಲು ಕಾಂಕ್ರಿಟ್ ರಸ್ತೆ, ಸುತ್ತಲೂ ಗಿಡಗಳನ್ನು ಬೆಳಿಸಿದ್ದು ಬಿಟ್ಟರೆ ಉಳಿದ ಆವರಣ ಹುಲ್ಲುಗಾವಲಾಗಿದೆ.

ಇದರಿಂದ ಹುಳುಹುಪ್ಪಡಿ ಭಯದಲ್ಲಿ ಸಂಚರಿಸಬೇಕಿದೆ. ಆದ್ದರಿಂದ ತಾಂತ್ರಿಕ ಶಿಕ್ಷಣ ಇಲಾಖೆಯಾಗಲಿ, ಪುರಸಭೆಯಾಗಲಿ ಹುಲ್ಲುಗಾವಲನ್ನು ತೆರವುಗೊಳಿಸಬೇಕಿದೆ.

ಒಟ್ಟಾರೆ ಸರ್ಕಾರಿ ಕಾಲೇಜಾದರೂ ವಿದ್ಯಾರ್ಥಿಗಳನ್ನು ಸೆಳೆಯುತ್ತಿರುವ ಈ ಕಾಲೇಜಿಗೆ ಅಗತ್ಯ ಇರುವ ಸೌಲಭ್ಯ ನೀಡಬೇಕು ಎಂದು ಪಟ್ಟಣದ ನಾಗರಿಕರು, ತಾಂತ್ರಿಕ ಶಿಕ್ಷಣ ತಜ್ಞರು ಆಗ್ರಹಿಸುತ್ತಾರೆ.

ಕಾಲೇಜು ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನ ಮಾಡಲಾಗುತ್ತಿದೆ. ವಿಭಾಗದ ಮುಖ್ಯಸ್ಥರ ನೇಮಕಾತಿಗೆ ವಸತಿ ನಿಲಯಗಳ ಸ್ಥಾಪನೆಗೆ ತಾಂತ್ರಿಕ ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿದೆ
ಸಿದ್ದನಗೌಡ ಪಾಟೀಲ ಪ್ರಾಚಾರ್ಯ
ಹಲವಾರು ಕೊರತೆಗಳ ನಡುವೆ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ವಸತಿ ನಿಲಯ ಸೇರಿದಂತೆ ಅಗತ್ಯ ಇರುವ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು
ಸಚಿನ್ ಅಂತಿಮ ವರ್ಷದ ವಿದ್ಯಾರ್ಥಿ
100 ಕೊಠಡಿ 8 ಜನ ಡಿ ಗ್ರುಪ್ ನೌಕರರು
ವಿಶಾಲವಾದ ಕಟ್ಟಡ ಪ್ರಯೋಗಾಲಯಗಳಿದ್ದು ಅದಕ್ಕೆ ತಕ್ಕಂತೆ ಸುಮಾರು 20 ಜನವಾದರೂ ಡಿ.ಗ್ರುಪ್ ನೌಕರರು ಬೇಕು. ಆದರೆ ಈಗ ಇರುವುದು ಕೇವಲ 8 ಜನ. ಆದ್ದರಿಂದ ಹೆಚ್ಚಿನ ನೇಮಕಾತಿ ಅಗತ್ಯವಿದೆ ಎಂದು ಕಾಲೇಜು ಸಿಬ್ಬಂದಿ ಹೇಳುತ್ತಾರೆ. ಎರಡೇ ವಸತಿ ನಿಲಯ: ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕನಿಷ್ಠ ಎರಡು ವಿದ್ಯಾರ್ಥಿನಿಯರಿಗೆ ಎರಡು ವಿದ್ಯಾರ್ಥಿಗಳಿಗೆ ವಸತಿ ನಿಲಯಗಳು ಬೇಕು. ಆದರೆ ಈಗ ಕೇವಲ ತಲಾ ಒಂದೊಂದು ವಸತಿ ನಿಲಯಗಳಿವೆ. ಇವುಗಳ ನಿರ್ವಹಣೆಯನ್ನು ಕಾಲೇಜಿನ ಪ್ರಾಚಾರ್ಯರು ಸಿಬ್ಬಂದಿಯೇ ಮಾಡುತ್ತಿದ್ದಾರೆ. ಇದೊಂದು ಸವಾಲಿನ ಕೆಲಸವಾಗಿದೆ. ಆದ್ದರಿಂದ ತಾಂತ್ರಿಕ ಶಿಕ್ಷಣ ಇಲಾಖೆ ಕನಿಷ್ಟ ನಾಲ್ಕು ವಸತಿ ನಿಲಯ ನಿರ್ಮಿಸಿ ಅವುಗಳ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ನೇಮಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಾರೆ.
ಮುಖ್ಯಸ್ಥರೇ ಇಲ್ಲ ಅತಿಥಿಗಳೇ ಎಲ್ಲಾ
ಪ್ರಾಚಾರ್ಯರೊಬ್ಬರೇ ಶಾಶ್ವತ ಸಿಬ್ಬಂದಿ ಯಾಗಿದ್ದಾರೆ. ಗ್ರಂಥಪಾಲಕರು ಪ್ರಥಮ ದರ್ಜೆ ಸಹಾಯಕರು ಬೋಧಕೇತರ ಸಿಬ್ಬಂದಿ. 27 ಜನ ಅತಿಥಿ ಉಪನ್ಯಾಸಕರು ಇದ್ದಾರೆ. ಇದರಿಂದ ನಾಲ್ಕು ಉತ್ತಮ ತಾಂತ್ರಿಕ ಕೋರ್ಸ್‌ಗಳಿದ್ದರೂ ಅದಕ್ಕೆ ಪೂರ್ಣಕಾಲಿಕ ಮುಖ್ಯಸ್ಛರೇ ಇಲ್ಲ.ಇದರಿಂದ ವಿದ್ಯಾರ್ಥಿಗಳಿಗೆ ಅನುಭವಿ ಉಪನ್ಯಾಸಕರ ಬೋಧನೆ ಕೊರತೆ ಕಾಡುತ್ತಿದೆ. ಇದರಿಂದ ಒಂದು ವಿಭಾಗಕ್ಕೆ ಒಬ್ಬ ಮುಖ್ಯಸ್ಥರನ್ನಾದರೂ ಸರ್ಕಾರ ನೇಮಕ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.