ADVERTISEMENT

ಹೆಚ್ಚು ಸೆಸ್ ಕಟ್ಟುವ ನರಗುಂದ ಎಪಿಎಂಸಿ: ಶಾಸಕ ಸಿ.ಸಿ. ಪಾಟೀಲ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2025, 14:46 IST
Last Updated 8 ಫೆಬ್ರುವರಿ 2025, 14:46 IST
ನರಗುಂದದ ಎಪಿಎಂಸಿ ಆವರಣದಲ್ಲಿ ಶನಿವಾರ ನಡೆದ ವಾಣಿಜ್ಯೋದ್ಯಮ ಸಂಸ್ಥೆ ಕಟ್ಟಡದ ಉದ್ಘಾಟನಾ  ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು
ನರಗುಂದದ ಎಪಿಎಂಸಿ ಆವರಣದಲ್ಲಿ ಶನಿವಾರ ನಡೆದ ವಾಣಿಜ್ಯೋದ್ಯಮ ಸಂಸ್ಥೆ ಕಟ್ಟಡದ ಉದ್ಘಾಟನಾ  ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು    

ನರಗುಂದ: ‘ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಭಿವೃದ್ದಿಗಾಗಿ ₹13 ಕೋಟಿ ಅನುದಾನ ನೀಡಿದ್ದೇನೆ. ಇದರ ಪರಿಣಾಮಗಾಗಿ ಹೆಚ್ಚು ಸೆಸ್ ಕಟ್ಟುವ ಎಪಿಎಂಸಿಯಾಗಿ ಬೆಳೆದು ನಿಂತಿದೆ’ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನರಗುಂದ ವಾಣಿಜ್ಯೋದ್ಯಮ ಸಂಸ್ಥೆಯ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.

‘ಎಪಿಎಂಸಿ ಅಭಿವೃದ್ಧಿಗೆ ಮಾಜಿ ಶಾಸಕರಾದ ದಿ. ಎಸ್.ಎಫ್. ಪಾಟೀಲ, ಮಾಮನಿ, ಮಾಜಿ ಸಚಿವ ಎಸ್.ಟಿ. ಸೋಮಶೇಖರ ಅವರ ಸಹಕಾರ, ಬೆಂಬಲ ಸಾಕಷ್ಟಿದೆ. ನಗರದೆಲ್ಲೆಡೆ ಚದುರಿ ಹೋಗಿದ್ದ ವ್ಯಾಪಾರಸ್ಥರ ಅಂಗಡಿಗಳನ್ನು ಎಪಿಎಂಸಿ ಆವರಣದಲ್ಲಿ ಸ್ಥಾಪಿಸಿ, ಅಭಿವೃದ್ಧಿಪಡಿಸಲಾಗಿದೆ’ ಎಂದರು.

ADVERTISEMENT

‘ವ್ಯಾಪಾರಸ್ಥರು ಕಟ್ಟುವ ತೆರಿಗೆಯಿಂದಷ್ಟೇ ಮಾರುಕಟ್ಟೆ ಬೆಳೆಯಲು ಸಾಧ್ಯ. ಇಲ್ಲಿನ ಎಪಿಎಂಸಿ ಉತ್ತಮ ಮಾರುಕಟ್ಟೆಯಾಗಿ ಬೆಳೆದುನಿಲ್ಲುವಲ್ಲಿ ವ್ಯಾಪಾರಸ್ಥರ ಶ್ರಮ ಅಪಾರವಾಗಿದೆ. ಅರಣ್ಯ ಸಚಿವನಾಗಿದ್ದ ಸಂದರ್ಭದಲ್ಲಿ ಮಾರುಕಟ್ಟೆ ಆವರಣದಲ್ಲಿ ನೆಟ್ಟಿದ್ದ 900 ಸಸಿಗಳಲ್ಲಿ 500ಕ್ಕೂ ಹೆಚ್ಚು ಸಸಿಗಳು ಬೆಳೆದು ನಿಂತು, ಸುತ್ತಲಿನ ವಾತಾವರಣ ಹರಿಸಿನಿಂದ ಕಂಗೊಳಿಸುತ್ತಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನರಗುಂದ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಜಯಪ್ರಕಾಶ ಕಂಠಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್ಲ ಹಾಗೂ ಜಿ.ಟಿ. ಗುಡಿಸಾಗರ ಮಾತನಾಡಿದರು.

ದಾವಣಗೆರೆ ಮೆಕ್ಕೆಜೋಳ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಕೆ.ವಿ. ಜಾವೀದ್‌, ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಸ್.ಪಿ. ಸಂಶಿಮಠ, ಗದಗ ಜಿಲ್ಲೆಯ ಅಧ್ಯಕ್ಷ ತಾತನಗೌಡ ಪಾಟೀಲ, ಚಂಬಣ್ಣ ಕೋರಿ, ಜಿ.ಬಿ. ಕುಲಕರ್ಣಿ, ಶಂಕ್ರಣ್ಣ ವಾಳದ, ಬಿ.ಕೆ. ಗುಜಮಾಗಡಿ, ಜೆ.ವಿ. ಕಂಠಿ, ವಿಜಯ ಮಾದಿನೂರ, ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನ ಇದ್ದರು.

ನರಗುಂದದ ಎಪಿಎಂಸಿ ಆವರಣದಲ್ಲಿ ನರಗುಂದ ವಾಣಿಜ್ಯೋದ್ಯಮ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ದಾನಿಗಳನ್ನು ಸನ್ಮಾನಿಸಿದರು.
ಅಪೂರ್ಣಗೊಂಡ ಸಾಯಿ ಮಂದಿರದ ಕಟ್ಟಡ ಪೂರ್ಣಗೊಳಿಸಲು ₹10 ಲಕ್ಷ ದೇಣಿಗೆ ನೀಡುತ್ತೇನೆ. ಎಲ್ಲ ವ್ಯಾಪಾರಸ್ಥರು ದೇಣಿಗೆ ನೀಡಿ ಸಹಕರಿಸಬೇಕು
ಸಿ.ಸಿ. ಪಾಟೀಲ ಶಾಸಕ
‘ರೈಲ್ವೆ ಮಾರ್ಗ ನಿರ್ಮಾಣದ ಚರ್ಚೆ’
‘ವ್ಯಾಪಾರಸ್ಥರು ಮತ್ತು ರೈತರ ಮಧ್ಯೆ ಹಣಕಾಸಿನ ವ್ಯವಹಾರ ಅನುಕೂಲಕರ ರೀತಿಯಲ್ಲಿ ನಡೆಯುತ್ತಿದೆ. ವ್ಯಾಪಾರಸ್ಥರಿಂದ ರೈತರಿಗೆ ಹೆಚ್ಚು ಅನುಕೂಲ ಸಿಗಬೇಕು. ನರಗುಂದಕ್ಕೆ ಅಗತ್ಯವಿರುವ ರೈಲ್ವೆ ಮಾರ್ಗದ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಚರ್ಚೆ ಮಾಡುತ್ತೇನೆ’ ಎಂದು ಸಂಸದ ಪಿ.ಸಿ. ಗದ್ದಿಗೌಡ್ರ ಹೇಳಿದರು. ಸಾನ್ನಿಧ್ಯ ವಹಿಸಿದ್ದ ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿ ‘ವಾಣಿಜ್ಯೋದ್ಯಮ ಸಂಘದ ಕಟ್ಟಡವು ರೈತರು ಹಾಗೂ ವರ್ತಕರ ಕೊಂಡಿಯಾಗಿ ಉತ್ತಮ ಸೇವೆ ನೀಡಲಿ’ ಎಂದು ಹಾರೈಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.