ADVERTISEMENT

ಗದಗ| ನಿರೀಕ್ಷಿತ ಅಭಿವೃದ್ಧಿ ಹೊಂದದ ಸ್ವತಂತ್ರ ಭಾರತ: ನಿರ್ಭಯಾನಂದ ಶ್ರೀ

ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ರಾಮಕೃಷ್ಣರ ಜಯಂತಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 7:06 IST
Last Updated 20 ಫೆಬ್ರುವರಿ 2026, 7:06 IST
ಗದಗ ನಗರದ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ನಡೆದ ರಾಮಕೃಷ್ಣರ 191ನೇ ಜಯಂತಿ ಕಾರ್ಯಕ್ರಮದಲ್ಲಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು
ಗದಗ ನಗರದ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ನಡೆದ ರಾಮಕೃಷ್ಣರ 191ನೇ ಜಯಂತಿ ಕಾರ್ಯಕ್ರಮದಲ್ಲಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು   

ಗದಗ: ‘ಭಾರತಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ನಿರೀಕ್ಷಿತ ಅಭಿವೃದ್ಧಿ ಹೊಂದಿಲ್ಲ. ಭವಿಷ್ಯದ ಮುಂದಾಲೋಚನೆ ಇಲ್ಲದ ರಾಜನೀತಿ, ಆಡಳಿತ ವರ್ಗವು ಜನತೆಯ ನಿರೀಕ್ಷೆಗಳನ್ನು ಸಾಕಾರಗೊಳಿಸದೇ ಟೋಪಿ ಹಾಕುತ್ತಲೇ ಬಂದಿವೆ’ ಎಂದು ಗದಗ-ಬಿಜಾಪುರ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ನಗರದ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಗುರುವಾರ ನಡೆದ ರಾಮಕೃಷ್ಣರ 191ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಆಯುಧಗಳಿಗೆ ಕೊರತೆ ಇಲ್ಲ. ಆದರೆ, ಜನತೆಗೆ ಜ್ಞಾನದ ಕೊರತೆ ಇದೆ. ಪ್ರಜ್ಞೆ, ವೈಚಾರಿಕತೆಯ ಕೊರತೆ ಇದೆ. ಶಿಕ್ಷಣ ಎಂದರೆ ಅಂಕಗಳನ್ನು ಗಳಿಸುವುದೇ ಮಾನದಂಡವೆಂದು ತಿಳಿದುಕೊಂಡಿದ್ದೇವೆ’ ಎಂದರು.

ADVERTISEMENT

‘ಭಾರತೀಯರಲ್ಲಿ ಆತ್ಮಾಭಿಮಾನ ಕ್ಷೀಣಿಸುತ್ತಿದೆ. ಆತ್ಮಾಭಿಮಾನ, ಸ್ವಾಭಿಮಾನ ಇಲ್ಲದ ಬದುಕು, ಅದು ಬದುಕು ಅಲ್ಲ. ಭಾರತೀಯ ಯುವಕರು ಮನಸ್ಸು ಮಾಡಿದರೇ ಏನೆಲ್ಲಾ ಆಗಲು ಸಾಧ್ಯವಿದೆ. ಸಾಧಿಸಬೇಕೆಂಬ ಛಲ ಬೇಕು ಅಷ್ಟೇ. ನಮ್ಮ ಯುವಕರು ಪುಟಿದೆದ್ದರೆ ಅಸಾಧ್ಯವಾದುದನ್ನು ಸಾಧ್ಯಗೊಳಿಸುವ ಛಲಗಾರರು. ಭಾರತೀಯರ ರಕ್ತದಲ್ಲಿನ ಕೆಚ್ಚು ಪ್ರಪಂಚದ ಯಾವ ದೇಶಬಾಂಧವರ ರಕ್ತದಲ್ಲಿ ಇಲ್ಲ. ಆದರೆ ನಮ್ಮವರು ಗಾಢ ನಿದ್ರೆಯಲ್ಲಿದ್ದು, ಅವರನ್ನು ಜಾಗೃತಗೊಳಿಸಬೇಕಿದೆ’ ಎಂದರು.

‘ಭಗವಾನ್‌ ರಾಮಕೃಷ್ಣರ 191ನೇ ಜಯಂತಿಯನ್ನು ಕೇವಲ ಭಾರತೀಯರಷ್ಟೇ ಅಲ್ಲ; ವಿಶ್ವದ ವಿವಿಧೆಡೆ ಆಚರಿಸಲಾಗುತ್ತಿದೆ. ರಾಮಕೃಷ್ಣರು ಮಾನವ ಕುಲಕ್ಕೆ, ಅಧ್ಯಾತ್ಮ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನುಪಮ. ರಾಮಕೃಷ್ಣರಲ್ಲಿ ಇದ್ದ ಜ್ಞಾನ ಸಂಪತ್ತಿನಲ್ಲಿ ಶೇ 1ರಷ್ಟು ಸದ್ಭಳಕೆ ಮಾಡಿಕೊಂಡಿದ್ದರೆ ವಿಶ್ವವಿಖ್ಯಾತಿ ಆಗಲು ಸಾಧ್ಯವಿದೆ. ಅಂತಹ ಅದ್ಭುತ ಜ್ಞಾನದ ನಿಧಿ ಅವರು’ ಎಂದು ಬಣ್ಣಿಸಿದರು.

ಸಮಾರಂಭದಲ್ಲಿ ಸಾಧಕರನ್ನು ಗೌರವಿಸಲಾಯಿತು. ಜಗನ್ನಾಥನಂದಜೀ, ಬೆಂಗಳೂರಿನ ರಾಮಕೃಷ್ಣ ಆಶ್ರಮದ ಮೋಕ್ಷಾಪ್ರಾಣಾನಂದ ಮಾತಾಜೀ ಇದ್ದರು.

ಭಗವಾನ್‌ ರಾಮಕೃಷ್ಣರ 191ನೇ ಜಯಂತಿಯ ಅಂಗವಾಗಿ ಆಶ್ರಮದಲ್ಲಿ ಬೆಳಿಗ್ಗೆ ಮಂಗಳಾರತಿ, ಉಷಃಕೀರ್ತನೆ, ಹೋಮ ಹಾಗೂ ವಿಷ್ಣುಸಹಸ್ರನಾಮ ಪಾರಾಯಣ, ಭಜನೆ ಮಹಾಪ್ರಸಾದ ನಡೆಯಿತು.

ಸಂಜೆ ಭಜನೆ, ಹರಿಕಥೆ, ಆಶೀರ್ವಚನಗಳು ನಡೆದವು. ಕಾರ್ಯಕ್ರಮಗಳಲ್ಲಿ ಆಶ್ರಮದ ಎಲ್ಲ ಸೇವಾ ಸಮಿತಿಯ ಭಕ್ತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

‘ರಾಮಕೃಷ್ಣರನ್ನು ಸ್ಮರಿಸಿದ ಕುವೆಂಪು’

ರಾಷ್ಟ್ರಕವಿ ಕುವೆಂಪು ಅವರು ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಭಗವಾನ್‌ ರಾಮಕೃಷ್ಣರನ್ನು ಸ್ಮರಿಸಿಕೊಂಡ ಸಂಗತಿ ಇತಿಹಾಸದ ಪುಟ ಸೇರಿದೆ. ರಾಮಕೃಷ್ಣರ ಬಗ್ಗೆ ಕುವೆಂಪು ಅಪಾರ ಭಕ್ತಿ ಹೊಂದಿದ್ದರು’ ಎಂದು ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

‘ರಾಮಕೃಷ್ಣರ ತತ್ವ ಸಿದ್ಧಾಂತಗಳಲ್ಲಿ ಕೆಲವನ್ನು ಮಾತ್ರ ಪಾಲಿಸಿದವರೂ ಉನ್ನತ ಮೇಧಾವಿಗಳಾಗಿ ಹೊರಹೊಮ್ಮಿದ್ದಾರೆ’ ಎಂದರು. ‘ಇಂದಿನ ಯುವಜನತೆ ರಾಮಕೃಷ್ಣ- ವಿವೇಕಾನಂದ ಜೀವನ ಚರಿತ್ರೆ ತತ್ವ ಸಿದ್ಧಾಂತಗಳನ್ನು ಅಧ್ಯಯನ ಮಾಡಬೇಕು. ಅವುಗಳಲ್ಲಿ ಒಂದಿಷ್ಟನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉನ್ನತ ವ್ಯಕ್ತಿತ್ವ ಅತ್ಯುನ್ನತ ಸ್ಥಾನಕ್ಕೇರಲು ಸಾಧ್ಯವಿದೆ. ಅಂತಹ ಪ್ರಯತ್ನ ಇಂದಿನಿಂದಲೇ ಆರಂಭಗೊಳ್ಳಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.