ಮುಂಡರಗಿ: ‘ನರೇಗಾ ಯೋಜನೆಯಡಿ ನೋಂದಾಯಿತವಾಗಿರುವ ತಾಲ್ಲೂಕಿನ ಎಲ್ಲ ಗ್ರಾಮೀಣ ಕುಟುಂಬಗಳ ಉದ್ಯೋಗ ಚೀಟಿ ಇ-ಕೆವೈಸಿ ಪ್ರಕ್ರಿಯೆಯನ್ನು ತಾಲ್ಲೂಕು ಪಂಚಾಯಿತಿ ನರೇಗಾ ಸಿಬ್ಬಂದಿ ಶೀಘ್ರ ಪೂರ್ಣಗೊಳಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಇಒ ವಿಶ್ವನಾಥ ಹೊಸಮನಿ ಸೂಚಿಸಿದರು.
ತಾಲ್ಲೂಕು ಪಂಚಾಯಿತಿಯಲ್ಲಿ ಗುರುವಾರ ನಡೆದ ತಾಲ್ಲೂಕು ನರೇಗಾ ಸಿಬ್ಬಂದಿಗಳ ಸಭೆಯಲ್ಲಿ ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಮಾಡಬೇಕಿದೆ. ಈ ಕುರಿತು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದ್ದು, ಸಂಬಂಧಿಸಿದ ಸಿಬ್ಬಂದಿ, ನರೇಗಾ ಕೂಲಿಕಾರರ ಮನೆ ಮನೆಗೆ ತೆರಳಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದರು.
ತಾಲ್ಲೂಕಿನ 19 ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ನರೇಗಾ ಸಿಬ್ಬಂದಿಯಾದ ಗ್ರಾಮ ಕಾಯಕ ಮಿತ್ರ, ಬಿ.ಎಫ್.ಟಿ. ಹಾಗೂ ತಾಂತ್ರಿಕ ಸಹಾಯಕರಿಗೆ ಇ-ಕೆವೈಸಿ ಕುರಿತು ತರಬೇತಿ ನೀಡಲಾಗಿದೆ. ಗ್ರಾಮ ಪಂಚಾಯಿತಿಗಳ ಇತರ ಸಿಬ್ಬಂದಿಯನ್ನು ಬಳಸಿಕೊಂಡು ಸಕ್ರಿಯ ಕೂಲಿಕಾರರ ಜಾಬ್ ಕಾರ್ಡ್‌ಗಳನ್ನು ಇ-ಕೆವೈಸಿ ಮೂಲಕ ಪರಿಶೀಲಿಸುವ ಕಾರ್ಯ ತುರ್ತಾಗಿ ನಡೆಯಬೇಕು ಎಂದು ತಿಳಿಸಿದರು.
ನರೇಗಾ ತಾಂತ್ರಿಕ ಸಹಾಯಕರು ಕೃಷಿ ಹೊಂಡ ಕಾಮಗಾರಿಗಳನ್ನು ಶೀಘ್ರ ಆರಂಭಿಸಿ ಕೂಲಿಕಾರರಿಗೆ ಉದ್ಯೋಗ ನೀಡಬೇಕು. ಇದರಿಂದ ಮಾನವ ದಿನಗಳ ಸೃಜನೆಯು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಗಮನಹರಿಸಬೇಕು ಎಂದು ತಿಳಿಸಿದರು.
ಚಾಲ್ತಿ ಕಾಮಗಾರಿಗಳನ್ನು ಮುಕ್ತಾಯಗೊಳಿಸಿ ಹೊಸ ಕಾಮಗಾರಿಗಳ ಮೂಲಕ ಗ್ರಾಮೀಣ ಭಾಗದಲ್ಲಿ ಕೂಲಿಕಾರರಿಗೆ ಉದ್ಯೋಗ ನೀಡಬೇಕು. 2026-27ನೇ ನರೇಗಾ ಕ್ರಿಯಾ ಯೋಜನೆಗೆ ಈಗಾಗಲೇ ಸುತ್ತೋಲೆ ಬಂದಿದ್ದು, ಕ್ರಿಯಾಯೋಜನೆ ಸಿದ್ಧಪಡಿಸುವ ಕಾರ್ಯಕೈಗೊಳ್ಳಬೇಕು ಎಂದರು.
ಪ್ರವೀಣ ಸೂಡಿ, ಟಿ.ಎಂ.ಐ.ಎಸ್. ಬಸವರಾಜ ಮಣ್ಣಮ್ಮನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.