ADVERTISEMENT

ಗದಗ| ಕಿಡ್ನಿ, ಕಣ್ಣು ದಾನ ಮಾಡಿದ ನಾರಾಯಣ ವನ್ನಾಲ; ನಾಲ್ವರ ಜೀವನಕ್ಕೆ ಆಸರೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 5:16 IST
Last Updated 15 ನವೆಂಬರ್ 2025, 5:16 IST
ನಾರಾಯಣ ವನ್ನಾಲ
ನಾರಾಯಣ ವನ್ನಾಲ   

ಗದಗ: ಅಚ್ಚರಿಯ ರೀತಿಯಲ್ಲಿ ಸತ್ತು ಬದುಕಿದ್ದ ಬೆಟಗೇರಿ ನಿವಾಸಿ ನಾರಾಯಣ ವನ್ನಾಲ (38) ಶುಕ್ರವಾರ ನಿಧನರಾದರು.

ನಾರಾಯಣ ವನ್ನಾಲ ಅವರ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ವೈದ್ಯರು ದೃಢೀಕರಿಸಿದ ಹಿನ್ನಲೆಯಲ್ಲಿ ಅವರ ಕುಟುಂಬದವರು ಹುಲಕೋಟಿಯ ಕೆ.ಎಚ್‌.ಪಾಟೀಲ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಗೆ ಎರಡು ಕಿಡ್ನಿ, ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಮತ್ತೊಬ್ಬರ ಬಾಳು ಬೆಳಗಿಸುವ ನಿರ್ಧಾರ ಕೈಗೊಂಡರು.

ನಾರಾಯಣ ವನ್ನಾಲ ಅವರ ಒಂದು ಕಿಡ್ನಿಯನ್ನು ಧಾರವಾಡ ಎಸ್‌ಡಿಎಂ ಆಸ್ಪತ್ರೆಗೆ ಹಾಗೂ ಮತ್ತೊಂದು ಕಿಡ್ನಿಯನ್ನು ಕೆ.ಎಚ್‌.ಪಾಟೀಲ ಆಸ್ಪತ್ರೆಯ ರೋಗಿಗೆ ಕಸಿ ಮಾಡಲಾಗಿದೆ. ಕಣ್ಣುಗಳನ್ನು ಹುಬ್ಬಳ್ಳಿಯ ಡಾ. ಎಂ.ಎಂ.ಜೋಶಿ ಆಸ್ಪತ್ರೆಗೆ ನೀಡಲಾಗಿದೆ. ಕಿಡ್ನಿಯನ್ನು ಎಸ್‌ಡಿಎಂ ಆಸ್ಪತ್ರೆಗೆ ಸಕಾಲಕಕ್ಕೆ ತಲುಪಿಸಲು ಜಿಲ್ಲಾ ಪೊಲೀಸರು ಜೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಿಸಿದ್ದರು.

ADVERTISEMENT

ಬೆಟಗೇರಿಯ ಕುರುಹಿನಶೆಟ್ಟಿ ಸಮಾಜದ ನೀಲಕಂಠೇಶರ್ವರ ಮಠದ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ ಮಾತನಾಡಿ, ‘ವನ್ನಾಲ ಕುಟುಂಬದವರು ಮರಣಾನಂತರ ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಂಡು ಮಾದರಿಯಾಗಿದ್ದಾರೆ’ ಎಂದರು.

ಸಂಸ್ಥೆಯ ಚೇರ್ಮನ್‌ ಡಾ. ಎಸ್‌.ಆರ್‌.ನಾಗನೂರ, ಕಿಡ್ನಿಕಸಿ ತಜ್ಞ ವೈದ್ಯ ಡಾ. ಅವಿನಾಶ ಓದುಗೌಡರ, ಡಾ. ಭುವನೇಶ ಆರಾಧ್ಯ, ಡಾ. ಪವನ್‌ ಕೋಳಿವಾಡ, ಡಾ. ದೀಪಕ್‌ ಕುರಹಟ್ಟಿ, ಡಾ. ನಿಯಾಜ್‌, ಡಾ. ವಿನಾಯಕ ಪಂಚಗಾರ, ಡಾ. ಹರೀಶ ನಾಡಗೌಡರ, ಡಾ. ವಿಶಾಲ ಕಪ್ಪತ್ತನವರ, ಡಾ.ವಂದನಾ ಕಾಂಬಳೆ, ಡಾ. ಪ್ರಭು ಮಡಿವಾಳರ, ಡಾ. ಪ್ಯಾರಾಆಲಿ ನೂರಾನಿ, ಎಂ.ಆರ್‌.ಪಾಟೀಲ, ಸಚಿನ್‌ ಪಾಟೀಲ, ಆರ್‌.ಆರ್‌.ಓದುಗೌಡರ, ರಾಬರ್ಟ್‌ ಹಳ್ಳಿ ಇದ್ದರು.

ಸತ್ತು ಬದುಕಿದ್ದ ವನ್ನಾಲ ನಿಧನ

ಪಿತ್ತಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿ ಮೃತಪಟ್ಟಿದ್ದಾರೆ ಎಂದು ಧಾರವಾಡದ ವೈದ್ಯರು ದೃಢೀಕರಿಸಿದ್ದರಿಂದ ಕುಟುಂಬದವರು ನ.7ರಂದು ದೇಹವನ್ನು ಮನೆಗೆ ತಂದು ಅಂತ್ಯ ಸಂಸ್ಕಾರ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ವೇಳೆ ಅಚ್ಚರಿಯ ರೀತಿಯಲ್ಲಿ ಎಚ್ಚರಗೊಂಡಿದ್ದರು ನಾರಾಯಣ ವನ್ನಾಲ. ಕೂಡಲೇ ಅವರನ್ನು ಬೆಟಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೆದುಳು ನಿಷ್ಕ್ರಿಯಗೊಂಡ ಕಾರಣ ಅವರ ಕುಟುಂಬದವರು ಶುಕ್ರವಾರ ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಂಡರು. ನ.13ರಂದು ಸಂಜೆ 5ಕ್ಕೆ ಮೃತಪಟ್ಟ ನಾರಾಯಣ ವನ್ನಾಲ ಅವರ ಅಂತ್ಯಸಂಸ್ಕಾರ ಶುಕ್ರವಾರ ಬೆಳಿಗ್ಗೆ 9ಕ್ಕೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.