ADVERTISEMENT

‘ಪಂಚಭೂತ ನಿಗ್ರಹಿಸುವ ಶಕ್ತಿ ಮಹಾತ್ಮರಿಗಿದೆ’

ಹಾನಗಲ್ಲ ಶ್ರೀಗುರು ಕುಮಾರೇಶ್ವರ ಜಯಂತ್ಯುತ್ಸವ ಸಮಾರೋಪ: 10 ದಿನ ನಡೆದ ಧರ್ಮಸಭೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 15:49 IST
Last Updated 24 ಸೆಪ್ಟೆಂಬರ್ 2024, 15:49 IST
ಮುಂಡರಗಿ ಅನ್ನದಾನೀಶ್ವರ ಮಠದಲ್ಲಿ ನಡೆದ ಹಾನಗಲ್ಲ ಶ್ರೀಗುರು ಕುಮಾರೇಶ್ವರರ ಜಯಂತಿಯ ಸಮಾರೋಪ ಸಮಾರಂಭದಲ್ಲಿ ನಾಡಿನ ವಿವಿಧ ಮಠಾಧೀಶರು 'ಬೆಳಗು' ಗ್ರಂಥವನ್ನು ಮೂರುಸಾವಿರ ಮಠ, ತೋಂಟದಾರ್ಯ ಮಠದ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಪುಸ್ತಕ ಬಿಡುಗಡೆ ಮಾಡಿದರು
ಮುಂಡರಗಿ ಅನ್ನದಾನೀಶ್ವರ ಮಠದಲ್ಲಿ ನಡೆದ ಹಾನಗಲ್ಲ ಶ್ರೀಗುರು ಕುಮಾರೇಶ್ವರರ ಜಯಂತಿಯ ಸಮಾರೋಪ ಸಮಾರಂಭದಲ್ಲಿ ನಾಡಿನ ವಿವಿಧ ಮಠಾಧೀಶರು 'ಬೆಳಗು' ಗ್ರಂಥವನ್ನು ಮೂರುಸಾವಿರ ಮಠ, ತೋಂಟದಾರ್ಯ ಮಠದ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಪುಸ್ತಕ ಬಿಡುಗಡೆ ಮಾಡಿದರು   

ಮುಂಡರಗಿ: 'ಭಗವಂತನಿಂದ ಸೃಷ್ಟಿಸಲ್ಪಟ್ಟ ಪಂಚ ಮಹಾಭೂತಗಳು ಯಾರ ಅಂಕೆಗೂ ಸಿಗುವುದಿಲ್ಲ. ಆದರೆ ಯೋಗಿಗಳು, ಮಹಾತ್ಮರು ಹಾಗೂ ಶರಣರಿಗೆ ಮಾತ್ರ ಅವುಗಳನ್ನು ನಿಗ್ರಹಿಸುವ ಶಕ್ತಿ ಇರುತ್ತದೆ. ಅಂತಹ ಒಬ್ಬ ಮಹಾತ್ಮ ಹಾನಗಲ್ಲ ಶ್ರೀಗುರು ಕುಮಾರೇಶ್ವರರು ಆಗಿದ್ದರು' ಎಂದು ಹುಬ್ಬಳ್ಳಿ ಜಗದ್ಗುರು ಮೂರುಸಾವಿರ ಮಠದ ಡಾ.ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಾನಗಲ್ಲ ಶ್ರೀಗುರು ಕುಮಾರೇಶ್ವರ ಜಯಂತಿಯ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಗದುಗಿನ ಜಗದ್ಗುರು ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, 'ಸಮಾಜದಲ್ಲಿ ಮನೆ ಮಾಡಿದ್ದ ಅಜ್ಞಾನ, ಅಂಧಕಾರ ತೊಡೆದುಹಾಕಬೇಕು ಎನ್ನುವ ಉದ್ದೇಶದಿಂದ ಶ್ರೀಗುರು ಕುಮಾರೇಶ್ವರರು ಶಿವಯೋಗ ಮಂದಿರ ಸ್ಥಾಪಿಸಿದರು. ಆ ಮೂಲಕ ಜಿಡ್ಡುಗಟ್ಟಿದ್ದ ಸಮಾಜಕ್ಕೆ ನವ ಚೈತನ್ಯ ನೀಡಿದರು. ಯುವ ಸ್ವಾಮೀಜಿಗಳು ಅವರ ತತ್ವಾದರ್ಶ ಪಾಲಿಸಬೇಕು' ಎಂದು ಸಲಹೆ ನೀಡಿದರು.

ADVERTISEMENT

ಡಾ.ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮದಲ್ಲಿ ಹಲವಾರು ಜೀವಪರ ತತ್ವಾದರ್ಶಗಳಿವೆ. ಅವುಗಳನ್ನು ನಾವೆಲ್ಲ ಅನ್ಯರಿಗೆ ತಿಳಿಸಬೇಕಿದೆ. ಈ ನಿಟ್ಟಿನಲ್ಲಿ ಹಲವಾರು ಗ್ರಂಥಗಳನ್ನು ಇಂಗ್ಲಿಷ್ ಸೇರಿದಂತೆ ಜಗತ್ತಿನ ಹಲವು ಭಾಷೆಗಳಿಗೆ ಭಾಷಾಂತರಿಸಬೇಕು ಎಂದು ಸಲಹೆ ನೀಡಿದರು.

ಮೈಸೂರಿನ ಡಾ.ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸರ್ಕಾರಗಳು ನಮಗೆ ಸೌಲಭ್ಯಗಳನ್ನು ಮಾತ್ರ ನೀಡುತ್ತವೆ. ಆದರೆ ಈ ನಾಡಿನ ಮಠ, ಮಾನ್ಯಗಳು ಜನತೆಗೆ ಸಂಸ್ಕಾರ ನೀಡುತ್ತವೆ ಎಂದು ತಿಳಿಸಿದರು.

ಮಣಕವಾಡದ ಶ್ರೀಗಳು, ಯುವ ಮುಖಂಡ ಮಿಥುನಗೌಡ ಪಾಟೀಲ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರ 'ಅನುಗ್ರಹ ವಿಧಾನ' ಹಾಗೂ ಶಿವಯೋಗ ಮಂದಿರದ ಸುವರ್ಣಮಹೋತ್ಸವ ಸ್ಮಾರಕ 'ಬೆಳಗು' ಗ್ರಂಥಗಳನ್ನು ಬಿಡುಗಡೆ ಮಾಡಿದರು.

ಹತ್ತು ದಿನಗಳ ಕಾಲ ಜರುಗಿದ ಕುಮಾರೇಶ್ವರರ ಜಯಂತಿ ಸಮಾರಂಭಕ್ಕೆ ನೆರವು ನೀಡಿದ ನಾಡಿನ ವಿವಿಧ ಮಠಾಧೀಶರನ್ನು, ದಾನಿಗಳನ್ನು, ಕಲಾವಿದರನ್ನು ಸನ್ಮಾನಿಸಲಾಯಿತು.

ಕಲಕೇರಿ-ವಿರುಪಾಪುರದ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೆಗಡಾಪುರದ ಶ್ರೀಗಳು, ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ ಇದ್ದರು.

ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹರಗುರು ಚರಮೂರ್ತಿಗಳು

ಅದ್ದೂರಿ ಮೆರಣಿಗೆಗೆ ಚಂಡೆ ವಾದ್ಯದ ಮೆರುಗು

ಮುಂಡರಗಿ: ಜಯಂತ್ಯುತ್ಸವ ಸಮಾರೋಪ ಸಮಾರಂಭದ ಪ್ರಯುಕ್ತ ಮಂಗಳವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕುಮಾರೇಶ್ವರ ಭಾವಚಿತ್ರದ ಅದ್ದೂರಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ನಾಡಿನ ವಿವಿಧ ಮಠಗಳ ನೂರಾರು ಮಠಾಧೀಶರು ಪೂರ್ಣಕುಂಭ ಹಾಗೂ ವಚನಗಳ ಕಟ್ಟುಗಳನ್ನು ಹೊತ್ತ ಮಹಿಳೆಯರು ಕಾರ್ಕಳದ ಚಂಡೆ ಮದ್ದಳೆ ವಾದ್ಯ ಮೇಳ ಕೊಲ್ಲೂರಿನ ಮಲಪ್ರಭಾ ಮಹಿಳಾ ಡೊಳ್ಳು ಮೇಳ ಭಟ್ಕಳದ ಜೈ ಮಾರುತಿ ಬೃಹತ್ ಗೊಂಬೆ ಮೇಳ ಶಿಂಗಟಾಲೂರಿನ ಭಾಜಾ ಭಜಂತ್ರಿ ನಂದಿಕೋಲು ಹಾಗೂ ಸಮ್ಮಾಳದ ಮೇಳ ವಿವಿಧ ಜಾಂಜ್ ಮೇಳಗಳು ಡೊಳ್ಳಿನ ಮೇಳಗಳು ಭಜನಾ ಮೇಳಗಳು ಮೆರವಣಿಗೆಗೆ ಮೆರಗು ನೀಡಿದವು. ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದಿಂದ ಸಾವಿರಾರು ಭಕ್ತರು ಹಾಗೂ ಅಭಿಮಾನಿಗಳೊಂದಿಗೆ ಮುಂಜಾನೆ ಒಂಭತ್ತು ಗಂಟೆಗೆ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸಾವಿರಾರು ಭಕ್ತರು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು. ಮೆರವಣಿಗೆ ಸಾಗುವ ಮಾರ್ಗದ ಎಲ್ಲ ರಸ್ತೆಗಳ ಇಕ್ಕೆಲಗಳನ್ನು ತಳಿರು ತೋರಣಗಳಿಂದ ಅಲಂಕರಿಸಾಲಗಿತ್ತು. ಎಲ್ಲರ ಮನೆಯ ಅಂಗಳಗಳು ರಂಗೋಲಿಮಯವಾಗಿದ್ದವು. ಮೆರವಣಿಗೆ ಆಗಮಿಸುತ್ತಿದ್ದಂತೆಯೆ ಅಕ್ಕ ಪಕ್ಕದ ಮನೆಗಳ ಜನರು ಮೆರವಣಿಗೆಯ ಮೇಲೆ ಹೂಮಳೆಗರೆದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸ್ವಾಮೀಜಿಗಳಿಗೆ ಫಲ ಪುಷ್ಪ ನೀಡಿ ಗೌರವಿಸಿದರು. ಡಾ.ಮಲ್ಲಿಕಾರ್ಜುನ ಶ್ರೀ ಲಿಂಗನಾಯಕನಹಳ್ಳಿಯ ಚನ್ನವೀರ ಶ್ರೀ ನಂದಿವೇರಿ ಮಠದ ಶಿವಕುಮಾರ ಶ್ರೀ ನೀಲಗುಂದ ಚನ್ನಬಸವ ಶ್ರೀ ಹಾವೇರಿಯ ಸದಾಶಿವ ಶ್ರೀ ನಾಗನೂರಿನ ಅಲ್ಲಮಪ್ರಭು ಶ್ರೀ ಹುಕ್ಕೇರಿಯ ಶಿವಬಸವ ಶ್ರೀ ಚನ್ನಬಸವ ಶ್ರೀ ವಾಗೀಶ ಪಂಡಿತಾರಾಧ್ಯ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ಸೇರಿದಂತೆ ಅನೇಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.