
ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮನೆಯ ತಳಪಾಯ ತೆಗೆಯುವಾಗ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಬಾಲಕ ಪ್ರಜ್ವಲ್ ರಿತ್ತಿಯ ಪ್ರಾಮಾಣಿಕತೆಯನ್ನು ತಿಳಿಸಲು ಮತ್ತು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿಸಲು ಸ್ಥಳೀಯ ಆಡಳಿತ ಉದ್ದೇಶಿಸಿದೆ.
ಲಕ್ಕುಂಡಿ ಗ್ರಾಮದಲ್ಲಿ ಗುರುವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷ ಕೆಂಚಪ್ಪ ಪೂಜಾರ ಇಂತಹದ್ದೊಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘ಚಿನ್ನದ ನಿಧಿ ಹಿಂದಿರುಗಿಸಿದ ಪ್ರಜ್ವಲ್ ರಿತ್ತಿ ಪ್ರಾಮಾಣಿಕತೆ ಎಲ್ಲರಿಗೂ ಮಾದರಿ. ಹೀಗಾಗಿ ನಿಧಿಯನ್ನು ಪ್ರಜ್ವಲ್ ಯಾವ ರೀತಿ ಪ್ರಾಮಾಣಿಕವಾಗಿ ಹಿಂದಿರುಗಿಸಿದ ಎಂಬುದರ ಕುರಿತು ಪುಟ್ಟ ಬರಹ ಬರೆಯಿಸಿ, ಆತನ ಚಿತ್ರವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಲ್ಲಿ ಅಳವಡಿಸುವ ಯೋಜನೆಯಿದೆ’ ಎಂದು ಅಧ್ಯಕ್ಷ ಕೆಂಚಪ್ಪ ಪೂಜಾರ ತಿಳಿಸಿದರು.
‘ಇಂಥ ಕ್ರಮ ತೆಗೆದುಕೊಂಡಲ್ಲಿ, ಇತರೆ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗುತ್ತದೆ. ಪ್ರಾಮಾಣಿಕತೆ ಬೆಳೆಸಿಕೊಳ್ಳುವಂತೆ ಅವರಿಗೆ ತಿಳಿ ಹೇಳುವುದು ಇದರ ಉದ್ದೇಶ’ ಎಂದು ಹೇಳಿದರು.
‘ವಿಶೇಷ ಗ್ರಾಮ ಸಭೆಯಲ್ಲಿ ಪ್ರಜ್ವಲ್ ರಿತ್ತಿಯ ಪ್ರಾಮಾಣಿಕತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಪ್ರಸ್ತಾಪಿಸಿದರು. ಇತರ ಮಕ್ಕಳಿಗೆ ಸ್ಫೂರ್ತಿಯಾಗಲಿದೆ ಎಂಬ ಆಶಾಭಾವ ಅವರದ್ದು. ಈ ಬಗ್ಗೆ ಸಭೆಯಲ್ಲಿ ನಿರ್ಧರಿಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪಂಚಾಯಿತಿ ಅಭಿವೃದ್ಧಿ ಅಭಿವೃದ್ಧಿ ಅಧಿಕಾರಿ ಅಮೀರನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.
ಚಿನ್ನದ ನಿಧಿ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಕ್ಕೆ ಶಾಲೆಯಲ್ಲಿ ನನ್ನ ಗೆಳೆಯರು ಈಗ ನನ್ನನ್ನು ಅಭಿಮಾನದಿಂದ ನೋಡುತ್ತಾರೆ. ಇದು ಖುಷಿ ನೀಡಿದೆ-ಪ್ರಜ್ವಲ್ ರಿತ್ತಿ, ನಿಧಿ ಹಿಂದಿರುಗಿಸಿದ ಬಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.