ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಗರ್‌ಹುಕುಂ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ 21 ದಿನಗಳನ್ನು ಪೂರೈಸಿದ್ದು, ರೈತರು ಸೋಮವಾರ ಭಿಕ್ಷಾಟನೆ ನಡೆಸಿ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಗಾಂಧಿ ಸರ್ಕಲ್‌ನಿಂದ ಆರಂಭವಾದ ಭಿಕ್ಷಾಟನೆಯ ಪ್ರತಿಭಟನೆ ಮಾರ್ಕೆಟ್ ರಸ್ತೆ, ಮುಳಗುಂದ ನಾಕಾ, ಟಿಪ್ಪು ಸರ್ಕಲ್ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಿತು.
ರೈತರು ಡೊಳ್ಳು ಬಾರಿಸುತ್ತಾ, ಕೈಯಲ್ಲಿ ತಟ್ಟೆ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದಾನಿಗಳಿಂದ ಹಣ, ಅಕ್ಕಿ, ತರಕಾರಿ ಮುಂತಾದ ವಸ್ತುಗಳನ್ನು ಬೇಡಿದರು. ಭಿಕ್ಷೆಯಿಂದ ಸಂಗ್ರಹಿಸಿದ ₹3,750 ಮೊತ್ತವನ್ನು ಜಿಲ್ಲಾಡಳಿತಕ್ಕೆ ತಲುಪಿಸಿ ‘ನಮಗೆ ಹಕ್ಕುಪತ್ರ ನೀಡಿ’ ಎಂದು ಒತ್ತಾಯಿಸಲು ಪ್ರತಿಭಟನಕಾರರು ಪ್ರಯತ್ನಿಸಿದರು. ಆದರೆ, ಅಧಿಕಾರಿಗಳು ಬಾರದ ಕಾರಣ ಧರಣಿ ಮುಂದುವರಿಸಿದರು.
ಉತ್ತರ ಕರ್ನಾಟಕ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ‘21 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ. ಜಿಲ್ಲಾ ಉಸ್ತುವಾರಿ ಸಚಿವರು ಕೊಟ್ಟ ಮಾತುಗಳನ್ನು ಪಾಲಿಸದೇ ಇರುವುದು ವಚನಭ್ರಷ್ಟತೆಯ ಸಂಕೇತ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಮುಂದಿನ ಎರಡು ದಿನಗಳು ಶಾಂತಿಯುತ ಹೋರಾಟ ನಡೆಸುತ್ತೇವೆ. ಆ ಬಳಿಕವೂ ಸ್ಪಂದನೆ ದೊರಕದಿದ್ದಲ್ಲಿ, ಹೋರಾಟದ ರೂಪರೇಷೆ ಬದಲಿಸಲಾಗುವುದು’ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್.ಚಿಂಚಲಿ, ಪ್ರೊ. ಎನ್.ಟಿ.ಪೂಜಾರ, ನಾಮದೇವ, ಫಿರೋಜ್ ನದಾಫ್, ಎಂ. ಶಲವಡಿ ಸೇರಿದಂತೆ ನಾಗಾವಿ, ಬೆಳಧಡಿ, ಹರ್ತಿ, ಶಿರಹಟ್ಟಿ, ಲಕ್ಷ್ಮೇಶ್ವರ, ಅಡವಿಸೋಮಾಪೂರ, ಗಜೇಂದ್ರಗಡ, ದಿಂಡೂರ, ಡೋಣಿ, ಮುರುಡಿ ಮುಂತಾದ ಗ್ರಾಮಗಳ ರೈತರು, ರೈತ ಮಹಿಳೆಯರು ಇದ್ದರು.
ರೈತರ ಹೋರಾಟಕ್ಕೆ ಸ್ಪಂದಿಸದ ನಿಲುವು ಖಂಡಿಸಿ ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಮಧ್ಯಾಹ್ನ 12ಕ್ಕೆ ಬಾರಕೋಲು ಚಳವಳಿ ನಡೆಸಲಾಗುವುದು. ರೈತರ ಹೋರಾಟ ತೀವ್ರ ಸ್ವರೂಪ ಪಡೆಯುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು
– ರವಿಕಾಂತ ಅಂಗಡಿ ಉತ್ತರ ಕರ್ನಾಟಕ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.