ADVERTISEMENT

ಪುರ್ತಗೇರಿ: ದಶಕಗಳಷ್ಟು ಹಳೆಯ ಸಮಸ್ಯೆ ಜೀವಂತ

ಶ್ರೀಶೈಲ ಎಂ.ಕುಂಬಾರ
Published 2 ಏಪ್ರಿಲ್ 2025, 5:40 IST
Last Updated 2 ಏಪ್ರಿಲ್ 2025, 5:40 IST
ಗಜೇಂದ್ರಗಡ ಸಮೀಪದ ಪುರ್ತಗೇರಿ ಗ್ರಾಮದ ದಲಿತರ ಕಾಲೋನಿಯ ಪಕ್ಕದ ತಗ್ಗು ಪ್ರದೇಶದಲ್ಲಿ ಕೊಳಚೆ ನೀರು ಶೇಖರಣೆಯಾಗಿ ಆಪು ಬೆಳೆದಿರುವುದು
ಗಜೇಂದ್ರಗಡ ಸಮೀಪದ ಪುರ್ತಗೇರಿ ಗ್ರಾಮದ ದಲಿತರ ಕಾಲೋನಿಯ ಪಕ್ಕದ ತಗ್ಗು ಪ್ರದೇಶದಲ್ಲಿ ಕೊಳಚೆ ನೀರು ಶೇಖರಣೆಯಾಗಿ ಆಪು ಬೆಳೆದಿರುವುದು   

ಗಜೇಂದ್ರಗಡ: ಸಮೀಪದ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರ್ತಗೇರಿ ಗ್ರಾಮದಲ್ಲಿ ಹಳೆಯ ಸಮಸ್ಯೆಗಳು ದಶಕಗಳಿಂದ ಜೀವಂತವಾಗಿದ್ದು, ಗ್ರಾಮದ ಜನರು ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ.

ಗ್ರಾಮದ ದಲಿತರ ಕಾಲೊನಿ ಪಕ್ಕದಲ್ಲಿರುವ ತಗ್ಗು ಪ್ರದೇಶದಲ್ಲಿ ಕೊಳಚೆ ನೀರು ಶೇಖರಣೆಯಾಗಿ ದುರ್ನಾತ ಬೀರುವುದರ ಜೊತೆಗೆ ಅಲ್ಲಿನ ಜನರು ಹಾವು-ಚೇಳುಗಳ ನಡುವೆ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಮಳೆಗಾಲದಲ್ಲಿ ತಗ್ಗು ಪ್ರದೇಶ ತುಂಬಿ ಕೊಳಚೆ ನೀರು ಮನೆಗೆ ನುಗ್ಗುವುದು ಸಾಮಾನ್ಯವಾಗಿದೆ. ಈ ಸಮಸ್ಯೆ ದಶಕಗಳಷ್ಟು ಹಳೆಯದಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತೀವ್ರ ಸಮಸ್ಯೆಯಾದಾಗ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಮಾತುಗಳನ್ನಾಡುತ್ತಾರೆ. ಆದರೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂಬುದು ಅಲ್ಲಿನ ನಿವಾಸಿಗಳ ಅಳಲಾಗಿದೆ.

ಅಲ್ಲದೆ ಗ್ರಾಮದ ಕಲಕೇರಿಯವರ ಪ್ಲಾಟ್‌ ಹಾಗೂ ಸೈನಿಕ ನಗರದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣವಾಗಿಲ್ಲ. ಹೀಗಾಗಿ ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿರುವುದರಿಂದ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಗ್ರಾಮದ ಚರಂಡಿ ನೀರು ಹರಿದು ಹಳ್ಳಕ್ಕೆ ಸೇರುವ ಮುಖ್ಯ ಚರಂಡಿ ಹೂಳು ತುಂಬಿಕೊಂಡಿದ್ದು, ಗಬ್ಬೆದ್ದು ನಾರುತ್ತಿದೆ.

ADVERTISEMENT

‘ಗಜೇಂದ್ರಗಡದ ಗುಡ್ಡದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 8 ಎಕರೆ ಸುಮಾರು 20 ಅಡಿಯಷ್ಟು ಗರಸು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ತಾಲ್ಲೂಕು ಆಡಳಿತ ಪುರ್ತಗೇರಿ ಗ್ರಾಮದ ದಲಿತರ ಕಾಲೊನಿಯಲ್ಲಿನ ತಗ್ಗು ಪ್ರದೇಶಕ್ಕೆ ಗರಸು ಹಾಕಿಸಿ ಸಮತಟ್ಟು ಮಾಡುವ ಮೂಲಕ ದಶಕಗಳಷ್ಟು ಹಳೆಯದಾಗಿರುವ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಬೇಕು. ಅಲ್ಲದೆ ಗಜೇಂದ್ರಗಡದ ಚರಂಡಿಯ ಕೊಳಚೆ ನೀರು ಹಳ್ಳದಲ್ಲಿ ಶೇಖರಣೆಯಾಗಿ ಅಂತರ್ಜಲ ಸೇರುತ್ತಿದ್ದು, ಗ್ರಾಮದ ಜನರು ವಿಷಯುಕ್ತ ನೀರು ಸೇವಿಸುವಂತಾಗಿದೆ. ಮಾಲಿನ್ಯ ನಿಯಂತ್ರಣಾಧಿಕಾರಿಗಳು ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಾಳಾಜಿರಾವ್‌ ಭೋಸಲೆ ಹೇಳಿದರು.

ಗಜೇಂದ್ರಗಡ ಸಮೀಪದ ಪುರ್ತಗೇರಿ ಗ್ರಾಮದ ಮುಖ್ಯ ಚರಂಡಿ ಹೂಳು ತುಂಬಿಕೊಂಡಿರುವುದು

‘ಪುರ್ತಗೇರಿ ಗ್ರಾಮದ ದಲಿತರ ಕಾಲೊನಿಯಲ್ಲಿನ ತಗ್ಗು ಪ್ರದೇಶದ ಮಾಲೀಕತ್ವದ ಸಮಸ್ಯೆ 2-3 ದಶಕಗಳಷ್ಟು ಹಳೆಯದಾಗಿದೆ. ಮಾಲೀಕತ್ವದ ಸಮಸ್ಯೆ ನಿವಾರಿಸಿ, ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಸಮಸ್ಯೆಗೆ ಪರಿಹಾರ ನೀಡಲಾಗುವುದು. ಅಲ್ಲದೆ ಗಜೇಂದ್ರಗಡದ ಚರಂಡಿಗಳ ಕೊಳಚೆ ನೀರು ಹಳ್ಳದಲ್ಲಿ ಹರಿದು ಅಂತರ್ಜಲ ಸೇರುತ್ತಿರುವುದರ ಕುರಿತು ಸಾಮಾನ್ಯ ಸಭೆಯಲ್ಲಿ ಠರಾವು ಮಾಡಲಾಗಿದ್ದು, ಪುರಸಭೆಗೆ ಪತ್ರ ಬರೆಯಲಾಗುವುದು’ ಎಂದು ರಾಮಾಪುರ ಗ್ರಾಮ ಪಂಚಾಯಿತಿ ಪಿಡಿಒ ಬಿ.ಎನ್.ಇಟಗಿಮಠ ಹೇಳಿದರು.

ಗಜೇಂದ್ರಗಡ ಸಮೀಪದ ಪುರ್ತಗೇರಿ ಗ್ರಾಮದ ಹೊರ ವಲಯದ ಹಳ್ಳದಲ್ಲಿ ಗಜೇಂದ್ರಗಡ ಪಟ್ಟಣದ ಕೊಳಚೆ ನೀರು ಶೇಖರಣೆಯಾಗಿರುವುದು
ನಮ್ಮ ಮನೆಯ ಮುಂದೆ ಅಕ್ಕ-ಪಕ್ಕದಲ್ಲಿನ ತಗ್ಗು ಪ್ರದೇಶದಲ್ಲಿ ಕೊಳಚೆ ನೀರು ಶೇಖರಣೆಯಾಗಿ ಆಪು ಬೆಳೆದು ನಿಂತಿದ್ದು ಹಾವು-ಚೇಳುಗಳು ಭಯದಲ್ಲಿ ಮಕ್ಕಳನ್ನು ಕಟ್ಟಿಕೊಂಡು ಜೀವನ ನಡೆಸುವಂತಾಗಿದೆ. ಈ ಸಮಸ್ಯೆಗೆ ಯಾರೂ ಪರಿಹಾರ ನೀಡುತ್ತಿಲ್ಲ
ಇಂದ್ರಮ್ಮ ಹಂಚಾಟೆ ದಲಿತರ ಕಾಲೋನಿ ನಿವಾಸಿ
ಗ್ರಾಮ ಪಂಚಾಯಿತಿ ಅನುದಾನದಲ್ಲಿ ದೊಡ್ಡ ಕಾಮಗಾರಿಗಳನ್ನು ಮಾಡಲು ಅನುದಾನದ ಕೊರತೆ ಇದೆ. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಅನುದಾನಗಳಲ್ಲಿ ಕ್ರಿಯಾ ಯೋಜನೆ ರೂಪಿಸಿ ಪುರ್ತಗೇರಿ ಗ್ರಾಮದ ವಿವಿಧ ಓಣಿಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು
ಬಿ.ಎನ್.ಇಟಗಿಮಠ ಪಿಡಿಒ

ಅಂತರ್ಜಲ ಸೇರುತ್ತಿದೆ ಪಟ್ಟಣದ ಕೊಳಚೆ ನೀರು

ಗ್ರಾಮದ ಹೊರ ವಲಯದಲ್ಲಿರುವ ಹಳ್ಳಕ್ಕೆ ಗಜೇಂದ್ರಗಡ ಪಟ್ಟಣದ ಕೊಳಚೆ ನೀರು ಹರಿಯುತ್ತಿದ್ದು ಹಳ್ಳದಲ್ಲಿರುವ ಚೆಕ್‌ ಡ್ಯಾಂಗಳಲ್ಲಿ ಶೇಖರಣೆಯಾಗುತ್ತಿದೆ. ಹಳ್ಳದ ಪಕ್ಕದಲ್ಲಿ ಗ್ರಾಮದ ಹಮಾಲರ ಪ್ಲಾಟ್‌ಗೆ ಕುಡಿಯುವ ನೀರು ಪೂರೈಸುವ ಹಾಗೂ ರೈತರ ಜಮೀನುಗಳಲ್ಲಿ ಕೊಳವೆಬಾವಿಗಳಿದ್ದು ಕೊಳವೆಬಾವಿಗಳಲ್ಲಿ ಹಸಿರು ಬಣ್ಣದ ದುರ್ವಾಸನೆ ಬೀರುವ ನೀರು ಬರುತ್ತಿದೆ. ಇದರಿಂದಾಗಿ ಜನರಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಚರಂಡಿಗಳ ಕೊಳಚೆ ನೀರನ್ನು ಜಲಮೂಲಗಳಿಗೆ ಹರಿಬಿಡುವ ಮೊದಲು ಶುದ್ಧೀಕರಿಸಿ ಬಿಡಬೇಕೆಂಬ ನಿಯಮವಿದ್ದರೂ ಸಹ ಗಜೇಂದ್ರಗಡದ ಪುರಸಭೆ ನೇರವಾಗಿ ಚರಂಡಿಗಳ ಕೊಳಚೆ ನೀರನ್ನು ಹರಿಸುತ್ತಿದೆ. ಮಾಲಿನ್ಯ ನಿಯಂತ್ರಣಾಧಿಕಾರಿಗಳು ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳುವುದರ ಮೂಲಕ ಅಂತರ್ಜಲ ಮತ್ತಷ್ಟು ಕಲುಷಿತಗೊಳ್ಳುವುದನ್ನು ತಪ್ಪಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.