ಗದಗ: ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಸ್ಮಾರಕ ಭವನ ನಿರ್ಮಾಣ ಕಾಮಗಾರಿ ಆರಂಭಗೊಂಡು 11 ವರ್ಷಗಳು ಕಳೆದರೂ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಎರಡನೇ ಹಂತದ ಕಾಮಗಾರಿಗೆ ಇನ್ನೂ ₹5 ಕೋಟಿಯಷ್ಟು ಹಣದ ಅವಶ್ಯಕತೆ ಇದ್ದು, ಸಾರ್ವಜನಿಕರ ಹೋರಾಟ, ಬೇಡಿಕೆಗಳ ನಡುವೆಯೂ ಸರ್ಕಾರ ಭವನ ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡಿಲ್ಲ.
2011ರ ಮಾರ್ಚ್ 25ರಂದು ಸ್ಮಾರಕ ಭವನ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. ಇದಕ್ಕಾಗಿ ₹5 ಕೋಟಿ ಹಣ ಬಿಡುಗಡೆಯಾಗಿತ್ತು. ಲೋಕೋಪಯೋಗಿ ಇಲಾಖೆಯವರು ₹5 ಕೋಟಿ ಜತೆಗೆ ಹೆಚ್ಚುವರಿಯಾಗಿ ₹1.24 ಕೋಟಿ ವೆಚ್ಚ ಮಾಡಿದ್ದರು. ಈ ಹೆಚ್ಚುವರಿ ಹಣ 2024ರ ಮಾರ್ಚ್ 16ರಂದು ಬಿಡುಗಡೆಯಾಗಿದ್ದು, ಸ್ಮಾರಕ ಭವನ ಪೂರ್ಣಗೊಳಿಸಲು ಇನ್ನೂ ₹5 ಕೋಟಿ ಬೇಕಿದೆ.
ಮಾರ್ಚ್‌ನಲ್ಲಿ ನಡೆದ ಅಧಿವೇಶನದಲ್ಲಿ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನದ ಕಾಮಗಾರಿ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದರು. ಸ್ಮಾರಕ ಭವನ ಕಾಮಗಾರಿಗೆ ಅಗತ್ಯವಾದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರನ್ನು ಒತ್ತಾಯಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವ ಶಿವರಾಜ ತಂಗಡಗಿ, ‘ಇಲಾಖೆ ಅಧಿಕಾರಿಗಳಿಂದ ಪೂರ್ಣ ಮಾಹಿತಿ ತರಿಸಿಕೊಂಡು ಕಟ್ಟಡ ಪೂರ್ಣಗೊಳಿಸಲು ಅವಶ್ಯಕತೆ ಇರುವಷ್ಟು ಹಣವನ್ನು ಬಿಡುಗಡೆ ಮಾಡಲು ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದ್ದರು.
‘ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಸ್ಮಾರಕ ಭವನದ ಪರಿಕಲ್ಪನೆ ಅದ್ಭುತವಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಸಚಿವರು ತರಿಸಿಕೊಂಡಿದ್ದು, ಎರಡನೇ ಹಂತದ ಕಾಮಗಾರಿಗೆ ಬೇಕಿರುವ ಹಣಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಸ್ಮಾರಕ ಭವನ ಈ ವರ್ಷ ಪೂರ್ಣಗೊಳ್ಳುವ ವಿಶ್ವಾಸ ಇದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸಾಮಿ ಬಿ. ತಿಳಿಸಿದ್ದಾರೆ.
ಅಲ್ಲದೇ, ಇತ್ತೀಚೆಗೆ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆದ ಉಭಯ ಗುರುಗಳ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ, ‘ಮುಂದಿನ ವರ್ಷದ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಸ್ಮಾರಕ ಭವನದಲ್ಲಿ ನಡೆಯಲಿವೆ’ ಎಂಬ ಭರವಸೆಯ ಮಾತುಗಳನ್ನು ವೇದಿಕೆಯಲ್ಲಿ ಆಡಿದ್ದು, ಭಕ್ತರಲ್ಲಿ ಹೊಸ ಆಸೆ ಚಿಗುರಿಸಿದೆ.
76X60 ಮೀ ಜಾಗದಲ್ಲಿ ಸ್ಮಾರಕ ಭವನ ನಿರ್ಮಿಸುವ ಉದ್ದೇಶ ಕಟ್ಟದ ಆಕರ್ಷಣೆ ಹೆಚ್ಚಿಸಲಿರುವ ಬೃಹತ್ ರುದ್ರವೀಣೆ ವಿವಿಧ ಸಂಗೀತ ವಾದ್ಯಗಳನ್ನು ಪ್ರದರ್ಶಿಸುವ ಪರಿಕಲ್ಪನೆ
ಸ್ಮಾರಕ ಭವನ ಪೂರ್ಣಗೊಳಿಸಲು ಇನ್ನೂ ಏನೇನು ಕೆಲಸಗಳು ಆಗಬೇಕಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ. ಈ ವರ್ಷ ಕಟ್ಟಡ ಪೂರ್ಣಗೊಳ್ಳುವ ನಿರೀಕ್ಷೆ ಇದೆವೀರಯ್ಯಸ್ವಾಮಿ ಬಿ. ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಈ ಹಿಂದೆ ಹೇಳಿದಂತೆ ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸುವ ಉದ್ದೇಶ ಇತ್ತು. ಆದರೆ ಅದಕ್ಕೆ ಮಠದ ಕಡೆಯಿಂದ ಸ್ಪಂದನೆ ಸಿಗಲಿಲ್ಲ. ಮುಂದಿನ ವಾರ ಇನ್ನೊಮ್ಮೆ ಭೇಟಿ ಆಗಿ ಚರ್ಚಿಸಲಾಗುವುದುವೆಂಕನಗೌಡ ಆರ್.ಗೋವಿಂದಗೌಡ್ರ ಜೆಡಿಎಸ್ ರಾಜ್ಯ ವಕ್ತಾರ
‘ಭಿಕ್ಷಾಟನೆ ಅಸ್ತ್ರ’ ಹಿಂಪಡೆದ ಜೆಡಿಎಸ್
ಸಂಗೀತ ಪರಂಪರೆಯ ಕೇಂದ್ರವಾಗಿರುವ ವೀರೇಶ್ವರ ಪುಣ್ಯಾಶ್ರಮ ಸಾವಿರಾರು ಅಂಧ ಅನಾಥರ ಬಾಳಿಗೆ ಬೆಳಕು ನೀಡಿದೆ. ಇದು ನಿಜವಾದ ಜಾತ್ಯತೀತ ಮಠ. ಜಾತಿ ಮಠಗಳನ್ನು ಓಲೈಕೆ ಮಾಡುವ ರಾಜಕಾರಣಿಗಳಿಗೆ ವೀರೇಶ್ವರ ಪುಣ್ಯಾಶ್ರಮದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಸ್ಮಾರಕ ಭವನ ನಿರ್ಮಾಣಕ್ಕೆ ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು. ಇಲ್ಲವಾದರೆ ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಿ ಭವನ ಪೂರ್ಣಗೊಳಿಸಲಾಗುವುದು. ಈ ಮೂಲಕ ಆಡಳಿತ ಪಕ್ಷಕ್ಕೂ ನಾಚಿಕೆ ಬರುವಂತೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಈ ಹಿಂದೆ ಎಚ್ಚರಿಕೆ ನೀಡಿದ್ದರು. ಅದರಂತೆ ವಿವಿಧ ಸಂಘಟನೆಗಳ ಜತೆಗೂಡಿ ಒಂದು ದಿನ ಭಿಕ್ಷಾಟನೆ ಮಾಡಿ ಸಂಗ್ರಹಗೊಂಡ ಹಣವನ್ನು ಜಿಲ್ಲಾಡಳಿತಕ್ಕೆ ನೀಡಿದ್ದರು. ಬಳಿಕ ಬಜೆಟ್ ಮಂಡನೆ ಆಯಿತು. ಆ ಬಜೆಟ್‌ನಲ್ಲಿ ಸ್ಮಾರಕ ಭವನಕ್ಕೆ ಹಣ ಬಿಡುಗಡೆ ಆಗಲಿಲ್ಲ. ಆದರೆ ಮೊದಲೇ ಹೇಳಿದಂತೆ ಭಿಕ್ಷಾಟನೆ ಮಾಡದೇ ‘ಮಠದವರು ನಮ್ಮ ಹೋರಾಟಕ್ಕೆ ಸಹಕಾರ ನೀಡಲಿಲ್ಲ’ ಎಂಬ ಸಣ್ಣ ಕಾರಣಕ್ಕೆ ಹೋರಾಟ ಕೈಬಿಟ್ಟಿರುವುದಾಗಿ ಹೇಳಿದ್ದಾರೆ. ಇದಕ್ಕೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.