ADVERTISEMENT

ಕಾಲ್ತುಳಿತ ಪ್ರಕರಣ; ರಾಜ್ಯ ಸರ್ಕಾರವೇ ನೇರ ಹೊಣೆ– ಸಿ.ಸಿ.ಪಾಟೀಲ ಆರೋಪ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 13:36 IST
Last Updated 5 ಜೂನ್ 2025, 13:36 IST
<div class="paragraphs"><p>ಸಿ.ಸಿ.ಪಾಟೀಲ</p></div>

ಸಿ.ಸಿ.ಪಾಟೀಲ

   

ಗದಗ: ‘ಆರ್‌ಸಿಬಿ ತಂಡಕ್ಕೆ ಕೋಟ್ಯಂತರ ಅಭಿಮಾನಿಗಳ ಪಡೆ ಇದೆ. ಅವರೆಲ್ಲರ ಮೆಚ್ಚುಗೆ ಪಡೆಯುವ ಏಕೈಕ ಉದ್ದೇಶದಿಂದಲೇ ರಾಜ್ಯ ಸರ್ಕಾರ ತರಾತುರಿಯಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿ ಅಮಾಯಕರ ಜೀವ ಬಲಿ ಪಡೆದಿದೆ. ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ’ ಎಂದು ಶಾಸಕ ಸಿ.ಸಿ.ಪಾಟೀಲ ಆರೋಪ ಮಾಡಿದರು.

‘ವಾಸ್ತವದಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸುವ ಅವಶ್ಯಕತೆಯೇ ಇರಲಿಲ್ಲ. ಆರ್‌ಸಿಬಿ ತಂಡವೇನು ದೇಶಕ್ಕಾಗಿ ಆಡಿಲ್ಲ. ಐಪಿಎಲ್‌ ಅಂದರೆ ದುಡ್ಡು ಮಾತ್ರ. ಅದರಲ್ಲಿ ಭಾಗವಹಿಸುವ ಆಟಗಾರರೆಲ್ಲರೂ ಕೋಟ್ಯಂತ ರೂಪಾಯಿಗೆ ಹರಾಜಾಗಿರುತ್ತಾರೆ. ವೈಯಕ್ತಿಕ ಲಾಭಕ್ಕಾಗಿ ಆಡಿ ಗೆದ್ದವರನ್ನು ಅಭಿನಂದಿಸುವ ತುರ್ತು ಏನಿತ್ತು’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ADVERTISEMENT

‘ಆರ್‌ಸಿಬಿ ತಂಡದ ಆಟಗಾರರನ್ನು ಅಭಿನಂದಿಸಲು ಬಂದ ಅಭಿಮಾನಿಗಳ ಪೈಕಿ ಕಾಲ್ತುಳಿತಕ್ಕೆ ಸಿಕ್ಕು 11 ಮಂದಿ ಸತ್ತಿದ್ದಾರೆ. ಆದರೆ, ಆರ್‌ಸಿಬಿ ಆಟಗಾರರಿಗೆ ಈ ಬಗ್ಗೆ ಕಿಂಚಿತ್ತು ಕೂಡ ನೋವು, ಆಘಾತ ಆದಂತೆ ಕಾಣಿಸಿಲ್ಲ. ಕನಿಷ್ಠ ಪಕ್ಷ ಪ್ರಾಣತೆತ್ತ 11 ಮಂದಿ ಅಭಿಮಾನಿಗಳ ಆತ್ಮಕ್ಕೆ ಶಾಂತಿ ಕೋರಿ ಮೇಣದಬತ್ತಿ ಹಚ್ಚಿ, ವಿಷಾದ ಕೂಡ ವ್ಯಕ್ತಪಡಿಸಿಲ್ಲ’ ಎಂದು ಹರಿಹಾಯ್ದರು.

‘ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಬೇಡಿ ಎಂದು ಯಾವ ಅಧಿಕಾರಿಗಳೂ ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಿದ್ದರೆ ಈ ಘಟನೆಗೆ ಯಾರು ಹೊಣೆ? ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದಾಗ ಗುಪ್ತಚರ ಇಲಾಖೆ ವೈಫಲ್ಯದಿಂದ ಇಷ್ಟೆಲ್ಲಾ ಆಯಿತು ಎಂದು ಕಾಂಗ್ರೆಸ್‌ ಮುಖಂಡರು ಬಾಯಿಬಡಿದುಕೊಂಡರು. ‘ಪುಷ್ಪ–2’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಥಿಯೇಟರ್‌ನಲ್ಲಿ ನೂಕು ನುಗ್ಗಲಾಗಿ ಅಭಿಮಾನಿಯೊಬ್ಬ ಸತ್ತಾಗ ಅಲ್ಲಿನ ಇವರದ್ದೇ ಸರ್ಕಾರ ನಟ ಅಲ್ಲು ಅರ್ಜುನ್‌ ಅವರನ್ನು ಜೈಲಿಗಟ್ಟಿತು. ಈಗ ಯಾವುದೇ ಪೂರ್ವತಯಾರಿ ಇಲ್ಲದೇ ಮಾಡಿದ ಕಾರ್ಯಕ್ರಮದಿಂದ 11 ಮಂದಿ ಸತ್ತಿದ್ದಾರೆ. ಇದಕ್ಕೆ ಯಾರನ್ನು ಜೈಲಿಗೆ ಹಾಕುತ್ತೀರಿ’ ಎಂದು ಪ್ರಶ್ನಿಸಿದರು.

‘ಘಟನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ಸಾಲುವುದಿಲ್ಲ. ಅವಕಾಶ ಇದ್ದಲ್ಲಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಬೇಕು. ಇಲ್ಲವಾದರೆ, ಸಿಬಿಐಗೆ ವಹಿಸಬೇಕು. ಆರ್‌ಸಿಬಿ ತಂಡದ ಬಳಿ ಹಣಕ್ಕೇನು ಕೊರತೆ ಇಲ್ಲ. ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹50 ಲಕ್ಷ ಪರಿಹಾರ ಕೊಡಬೇಕು’ ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡರಾ ಪ್ರಶಾಂತ ನಾಯ್ಕರ, ಎಂ.ಎಸ್‌.ಕರಿಗೌಡ್ರ, ವಿನಾಯಕ ಮಾನ್ವಿ, ರಾಘವೇಂದ್ರ ಯಳವತ್ತಿ, ಸಿದ್ದು ಪಲ್ಲೇದ, ಉಷಾ ದಾಸರ, ವಿಜಯಲಕ್ಷ್ಮಿ ಮಾನ್ವಿ, ಎಂ.ಎಂ.ಹಿರೇಮಠ ಇದ್ದರು.

ಆಡಳಿತದ ಎಲ್ಲ ವಿಭಾಗದಲ್ಲೂ ವೈಫಲ್ಯ ಕಂಡಿರುವ ಕಾಂಗ್ರೆಸ್‌ ಸರ್ಕಾರ ಆರ್‌ಸಿಬಿ ಅಭಿಮಾನಿಗಳ ಮನಗೆಲ್ಲಲು ಹಮ್ಮಿಕೊಂಡ ಕಾರ್ಯಕ್ರಮ ಅದು. ರಾಜಕೀಯ ಲಾಭಕ್ಕಾಗಿ 11 ಮಂದಿ ಪ್ರಾಣ ಪಡೆದ ರಾಜ್ಯ ಸರ್ಕಾರದ ನಡೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ.
ಸಿ.ಸಿ.ಪಾಟೀಲ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.