
ರೋಣ: ತಾಲ್ಲೂಕಿನ ಹುಲ್ಲೂರು ಗ್ರಾಮದ ರೈತ ಪಡಿಯಪ್ಪ ಪೂಜಾರ ಅವರು ಮಿಶ್ರ ಬೇಸಾಯ ಪದ್ಧತಿ ಜತೆಗೆ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಂಡು ಉತ್ತಮ ಆದಾಯ ಗಳಿಸುವ ಮೂಲಕ ಇತರ ರೈತರಿಗೂ ಮಾದರಿಯಾಗಿದ್ದಾರೆ.
ಪಡಿಯಪ್ಪ ಮೂರು ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಎರಡೂವರೆ ಎಕರೆಯಲ್ಲಿ ತೋಟ ನಿರ್ಮಾಣ ಮಾಡಿದ್ದು, 800 ಮಹಾಗನಿ ಗಿಡಗಳನ್ನು ಬೆಳೆಸಿದ್ದಾರೆ. ತೋಟದ ಬದುವಿನ ಸುತ್ತಲೂ 200 ತೆಂಗಿ ಮರಗಳನ್ನು ಬೆಳೆಸಿದ್ದಾರೆ. 800 ಲಿಂಬೆ, 800 ಪೇರಲ ಗಿಡಗಳು, 5 ಸೀತಾಫಲ, 10 ಚಿಕ್ಕು ಗಿಡಗಳು, 25 ಮಾವಿನ ಗಿಡಗಳು, ಐದು ಅರಳೆ ಮರ, 5 ಕರಿಬೇವಿನ ಗಿಡಗಳು, 150 ಹೆಬ್ಬೇವು, 5 ನೇರಳೆ, 5 ಹಲಸಿನ ಮರ, 5 ಸಾಗುವಾನಿ, ಕೃಷಿ ಹೊಂಡದ ಸುತ್ತಲೂ ಬಾಳೆ ಗಿಡಗಳು ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ವರ್ಷವಿಡೀ ಆದಾಯ ಪಡೆಯುತ್ತಿದ್ದಾರೆ.
ಉಳಿದ ಅರ್ಧ ಎಕರೆಯಲ್ಲಿ ಈರುಳ್ಳಿ, ಹುರುಳಿ, ಮೆಣಸಿನಕಾಯಿ, ಜೋಳದ ಬೆಳೆಗಳನ್ನು ಬೆಳೆಯುತ್ತಿದ್ದು ಅದರಲ್ಲಿಯೇ ತರಕಾರಿಗಳಾದ ಚಳ್ಳಾರೆ ಕಾಯಿ, ಹೀರೆಕಾಯಿ, ಚವಳಿ ಕಾಯಿ, ಬದನೆ, ಟೊಮೆಟೊ, ಬೆಂಡೆಕಾಯಿ, ಪಾಲಕ್, ಮೂಲಂಗಿ, ಮೆಂತ್ಯ, ಹುಣಸಿಕ್ಕು ಮುಂತಾದ ಬೆಳೆಗಳನ್ನು ಬೆಳೆಯುವ ಮೂಲಕ ಮನೆಯ ತರಕಾರಿ ಖರ್ಚು ಉಳಿತಾಯ ಮಾಡುವುದರ ಜತೆಗೆ ಮಿಕ್ಕಿದ ತರಕಾರಿ ಮಾರಿ ಅದರಿಂದಲೂ ಆದಾಯವನ್ನು ಗಳಿಸುತ್ತಿದ್ದಾರೆ.
ಬೇಸಿಗೆ ಪ್ರಾರಂಭವಾಗುತ್ತಿರುವುದರಿಂದ ಲಿಂಬೆ ಹಣ್ಣಿಗೆ ಬೇಡಿಕೆ ಪ್ರಾರಂಭವಾಗಲಿದ್ದು, ಲಿಂಬು ಮಾರಾಟದಿಂದ ಕಳೆದ ಬೇಸಿಗೆಯಲ್ಲಿ ತಿಂಗಳಿಗೆ ₹20 ಸಾವಿರಕ್ಕೂ ಅಧಿಕ ಆದಾಯವನ್ನು ಪಡಿಯಪ್ಪ ಗಳಿಸಿದ್ದಾರೆ.
ಒಟ್ಟಾರೆ ಸಾವಯವ ಕೃಷಿ ಹಾಗೂ ಮಿಶ್ರ ಬೇಸಾಯ ಪದ್ಧತಿಯ ಮೂಲಕ ವರ್ಷಕ್ಕೆ ₹8 ಲಕ್ಷದಿಂದ ₹10 ಲಕ್ಷ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.
ಕುರಿ ಕೋಳಿ ಸಾಕಣೆ: ಮೂರು ಎಚ್ ಎಫ್ ತಳಿಯ ಹಸುಗಳನ್ನು ಸಾಕಿದ್ದು ಹೈನುಗಾರಿಕೆಯ ಜೊತೆಗೆ 80 ನಾಟಿ ಕೋಳಿಗಳು, 8 ಕುರಿ, 3 ಮೇಕೆ, 1 ಟಗರು ಸಾಕಿದ್ದಾರೆ. ಅವುಗಳ ಮೇವಿಗಾಗಿ 4 ಗುಂಟೆಯಲ್ಲಿ ಹಿಪ್ಪುನೇರಳೆ ಬೆಳೆದಿದ್ದಾರೆ.
ಸಾವಯವ ಗೊಬ್ಬರ ಬಳಕೆ: ತೋಟ ಹಾಗೂ ಹೊಲಕ್ಕೆ ಪಡಿಯಪ್ಪ ಪೂಜಾರ ಅವರು ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸಿಕೊಳ್ಳದೇ ಸಾವಯವ ಗೊಬ್ಬರವನ್ನು ಬಳಕೆ ಮಾಡುತ್ತಿದ್ದಾರೆ. ಸಾವಯವ ಗೊಬ್ಬರ ಘಟಗಳನ್ನು ನಿರ್ಮಿಸಿ ಅದನ್ನೇ ಹೊಲ ಹಾಗೂ ತೋಟಗಳಿಗೆ ಬಳಕೆ ಮಾಡುತ್ತಿರುವುದು ವಿಶೇಷವಾಗಿದೆ.
ಮಳೆ ಬೆಳೆ ಇಲ್ಲದ ಸಮಯದಲ್ಲಿ ಲಭ್ಯವಿರುವ ನೀರಿನಲ್ಲಿಯೇ ಉತ್ತಮ ಫಸಲು ಪಡೆದುಕೊಳ್ಳುವ ಮೂಲಕ ಇತರ ರೈತರಿಗೂ ಮಾದರಿಯಾಗಿದ್ದಾರೆ.
ಯುವಕರು ಕೇವಲ ನೌಕರಿ ಹಿಂದೆ ಬೀಳದೆ ಕೃಷಿಯಲ್ಲಿ ಹೊಸತನವನ್ನು ಸಂಶೋಧಿಸುವ ಪ್ರವೃತ್ತಿ ಹೊಂದಬೇಕು. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರಗಳು ವೈಜ್ಞಾನಿಕ ಹಾಗೂ ತಾಂತ್ರಿಕ ಪ್ರಗತಿಗೆ ಕ್ರಮ ಕೈಗೊಳ್ಳಬೇಕುಪಡಿಯಪ್ಪ ಪೂಜಾರ ರೈತ
ಹುಲ್ಲೂರು ಗ್ರಾಮದ ಪಡಿಯಪ್ಪ ತೋಟವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಾವಯವ ಕೃಷಿಗೆ ಅವರು ಒತ್ತು ನೀಡಿದ್ದು ರೈತರು ಸಾವಯವ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಕೃಷಿ ಉತ್ಪಾದನೆಯಲ್ಲಿ ಆಗುವ ವೆಚ್ಚವನ್ನು ಕಡಿಮೆ ಮಾಡಬಹುದುಗಿರೀಶ ಹೊಸೂರ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ರೋಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.